ತುಂತುರು ಮಳೆ ನಡುವೆ ಬೆಟ್ಟದ ತಾಯಿಯ ವೈಭವದ ವರ್ಧಂತಿ ಉತ್ಸವ
ಮೈಸೂರು

ತುಂತುರು ಮಳೆ ನಡುವೆ ಬೆಟ್ಟದ ತಾಯಿಯ ವೈಭವದ ವರ್ಧಂತಿ ಉತ್ಸವ

August 4, 2018

ಮೈಸೂರು: ಮೋಡ ಕವಿದ ವಾತಾವರಣ, ಕೆಲ ಕ್ಷಣ ತುಂತುರು ಮಳೆ, ನಾನಾ ರೀತಿಯ ಪುಷ್ಪಗಳ ಸುವಾಸನೆ ಭಕ್ತಿ ಪರಾಕಾಷ್ಠತೆಗೆ ಸಾಕ್ಷಿಯಾಗಿದ್ದವು. ನೆರೆದವರು ಯಾವಾಗ ತಾಯಿ ಕಣ್ತುಂಬಿಕೊಳ್ಳುತ್ತೇವೋ ಎಂಬ ತವಕ, ನೂಕು ನುಗ್ಗಲು, ದೇವಿ ಸ್ಮರಣೆ ಇವೆಲ್ಲ ಕಂಡು ಬಂದಿದ್ದು ನಾಡದೇವಿಯ ನೆಲೆಯಾದ ಚಾಮುಂಡಿಬೆಟ್ಟದಲ್ಲಿ.

ಪೂರ್ವ ನಿಗದಿಯಂತೆ ನಾಡದೇವಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ವಿರಾಜಮಾನಳಾಗಿದ್ದ ಬೆಟ್ಟದ ತಾಯಿಯನ್ನು ಅಪಾರ  ಸಂಖ್ಯೆ ಭಕ್ತರು ಕಣ್ತುಂಬಿಕೊಂಡು, ಜೈಕಾರ ಕೂಗಿ ಸಂಭ್ರಮಿಸಿದರು. ಆಷಾಢ ಮಾಸದ ಮೂರನೇ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮೆಟ್ಟಿಲುಗಳು ಹಾಗೂ ವ್ಯವಸ್ಥೆ ಮಾಡಲಾಗಿದ್ದ ಸಾರಿಗೆ ಬಸ್‍ಗಳಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತರು ತುಂತುರು ಮಳೆ, ಹಿತಕಾರಿ ಚಳಿಯ ನಡುವೆ ದೇವಿ ದರ್ಶನಕ್ಕೆ ಗಂಟೆಗಟ್ಟಲೆ ಕಾದರು.

ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದ ಆರಂಭವಾದ ವಿಶೇಷ ಪೂಜೆ ಬೆಳಿಗ್ಗೆ 7 ಗಂಟೆಯವರೆಗೂ ನಡೆಯಿತು. ನಂತರ ಬೆಳಿಗ್ಗೆ 7.15ಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಂಜಾನೆ 3 ಗಂಟೆಯಿಂದಲೇ ಬೆಟ್ಟಕ್ಕೆ ಬಂದಿದ್ದ ಭಕ್ತರು ಧರ್ಮ ದರ್ಶನ ಹಾಗೂ 300 ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಪಡೆಯುವ ಸಾಲಿನಲ್ಲಿ ಕಾದು ನಿಂತಿದ್ದರು. ಆದರೆ ದರ್ಶನಕ್ಕೆ ಬೆಳಿಗ್ಗೆ 7.15ಕ್ಕೆ ಅವಕಾಶ ನೀಡಲಾಯಿತು.

ವಿಶೇಷ ಪೂಜೆ: ದೇವಾಲಯದಲ್ಲಿ ಪ್ರಧಾನ ಅರ್ಚಕರಾದ ಡಾ.ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮುಂಜಾನೆ 3 ಗಂಟೆಯಿಂದಲೇ ಅಭ್ಯಂಜನ(ಎಣ್ಣೆಸ್ನಾನ), ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ತ್ರಿಪದಿ, ಅಷ್ಟೋತ್ತರ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿತು. ನಂತರ ಭಕ್ತರಿಗೆ 7.15ಕ್ಕೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡ ಲಾಯಿತು. ರಾತ್ರಿ 8.30ಕ್ಕೆ ಉತ್ಸವ ಪೂಜೆ, 8.45ಕ್ಕೆ ದರ್ಬಾರ್ ಉತ್ಸವ ನೆರವೇರಿಸಲಾಯಿತು. ರಾತ್ರಿ 11ಕ್ಕೆ ದೇವಾಲಯದ ದ್ವಾರವನ್ನು ಮುಚ್ಚಲಾಯಿತು.

ಅಡ್ಡ ಪಲ್ಲಕ್ಕಿ ಉತ್ಸವ: ಪ್ರತಿ ವರ್ಷ ವರ್ಧಂತಿ ಮಹೋತ್ಸವದಂದು ಚಿನ್ನದ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಇಂದು ಬೆಳಿಗ್ಗೆ 9.30ಕ್ಕೆ ಮಂಗಳಾರತಿ ಬೆಳಿಗ್ಗೆ 10.25ಕ್ಕೆ ದೇವಾಲಯದ ಮುಂಭಾಗದಲ್ಲಿರಿಸಲಾಗಿದ್ದ ಚಿನ್ನದ ಅಡ್ಡ ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಮೆರವಣಿಗೆ ನಡೆಸಲಾಯಿತು. ಇಂದು ಬೆಳಿಗ್ಗೆ 10.25ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಅವರು ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ವಾದನ, ಅರಮನೆಯ ಛತ್ರಿ, ಛಾಮರ, ಬಿರುದು, ಬಾವಲಿಗಳೊಂದಿಗೆ ದೇವಾಲಯದ ಸುತ್ತ ಒಂದು ಸುತ್ತು ಮೆರವಣಿಗೆ ಮಾಡಲಾಯಿತು.

ಗಣ್ಯರಿಂದ ದೇವಿದರ್ಶನ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಅರಣ್ಯ ಸಚಿವ ಆರ್.ಶಂಕರ್, ಕುಟುಂಬದ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನದೊಂದಿಗೆ ಪೂಜೆ ಸಲ್ಲಿಸಿದರು. ಹಿರಿಯ ಅಧಿಕಾರಿಗಳು ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿದರು.

ವಿನಾಯಿತಿ: ವರ್ಧಂತಿ ಮಹೋತ್ಸವವನ್ನು ಚಾಮುಂಡಿಬೆಟ್ಟದ ನಿವಾಸಿಗಳು ಹಬ್ಬವಾಗಿ ಆಚರಿಸಲಿದ್ದು, ನೆಂಟರಿಷ್ಟರನ್ನು ಆಹ್ವಾನಿಸುವ ವಾಡಿಕೆಯಿದೆ. ಹಾಗಾಗಿ ಇವರ ಖಾಸಗಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದಲ್ಲಿ ಸಾಕಷ್ಟು ಖಾಸಗಿ ವಾಹನಗಳು ಕಾಣಿಸಿಕೊಂಡವು. ಇದರೊಂದಿಗೆ ವಿವಿಧ ಸಚಿವರಿಂದ ಶಿಫಾರಸ್ಸು ಪತ್ರ ತಂದಿದ್ದವರು, ಅವರ ಕುಟುಂಬ ಸದಸ್ಯರಿದ್ದ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಸಾಮಾನ್ಯ ದಿನಗಳಲ್ಲಿ ಬೆಟ್ಟಕ್ಕೆ ಬರುವಂತೆ ಇಂದು ಖಾಸಗಿ ವಾಹನಗಳು ಸಾಕಷ್ಟು ಕಂಡು ಬಂದವು.

ಹೆಚ್ಚುವರಿ ಬಸ್: ಎಂದಿನಂತೆ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. 25ಕ್ಕೂ ಹೆಚ್ಚು ಬಸ್ಸುಗಳು ಹೆಲಿಪ್ಯಾಡ್‍ನಿಂದ ಬೆಟ್ಟಕ್ಕೆ ಭಕ್ತರನ್ನು ಕರೆದೊಯ್ಯಲು ನಿಯೋಜಿಸಲಾಗಿತ್ತು. ಈ ನಡುವೆ ನಗರ ಬಸ್ ನಿಲ್ದಾಣದಿಂದಲೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಎರಡು ನಿಮಿಷಕ್ಕೊಮ್ಮೆ ಬಸ್ಸುಗಳು ಬೆಟ್ಟಕ್ಕೆ ಪ್ರಯಾಣ ಬೆಳೆಸುತ್ತಿದ್ದವು.

ಪ್ಲಾಸ್ಟಿಕ್ ನಿಷೇಧ: ಈಗಾಗಲೇ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ನಿಷೇಧಿತ ವಲಯವಾಗಿ ಘೋಷಣೆ ಮಾಡಲಾಗಿದೆ. ಆದರೂ ವಿವಿಧೆಡೆಯಿಂದ ಬರುವ ಭಕ್ತರು, ಪ್ರವಾಸಿಗರು ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ವಸ್ತುಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿಯೇ ತಂದಿದ್ದರು. ಅವುಗಳನ್ನು ಪ್ರವೇಶದಲ್ಲೇ ವಶಕ್ಕೆ ತೆಗೆದುಕೊಳ್ಳಲಾಯಿತು. ಚಾಮುಂಡಿಬೆಟ್ಟದ ಗ್ರಾ.ಪಂ ಪಿಡಿಓ ಪೂರ್ಣಿಮ, ಸಿಬ್ಬಂದಿಗಳೊಂದಿಗೆ ವಿವಿಧ ಮಳಿಗೆಗಳಲ್ಲಿಟ್ಟಿದ್ದ ಪ್ಲಾಸ್ಟಿಕ್ ಕವರ್‍ಗಳನ್ನು ವಶಪಡಿಸಿಕೊಂಡರು. ಅಲ್ಲದೆ ಬಟ್ಟೆ ಬ್ಯಾಗ್ ನೀಡುವುದಕ್ಕೆ ವ್ಯವಸ್ಥೆ ಮಾಡಿದರು. ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವದ ಅಂಗವಾಗಿ ಇಂದು ಚಾಮುಂಡಿಬೆಟ್ಟ, ಬೆಟ್ಟದ ತಪ್ಪಲು, ಹೆಲಿಪ್ಯಾಡ್‍ನಲ್ಲಿ ಭಕ್ತರಿಗೆ ಲಾಡು, ಪೇಡ, ಕೇಸರಿಬಾತ್, ಮೈಸೂರು ಪಾಕ್ ಸೇರಿದಂತೆ ವಿವಿಧ ಬಗೆಯ ಸಿಹಿ ವಿತರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಇದಲ್ಲದೆ ಮೊಸರನ್ನ, ರೈಸ್‍ಬಾತ್ ಹಾಗೂ ಇನ್ನಿತರ ಭಕ್ತರಿಗೆ ವಿತರಿಸಲಾಯಿತು.

ಮೈಸೂರಿನ ವಿವಿಧೆಡೆ: ವರ್ಧಂತಿ ಮಹೋತ್ಸವವನ್ನು ಮೈಸೂರಿನ ವಿವಿಧ ಬಡಾವಣೆಗಳಲ್ಲಿ, ಆಟೋರಿಕ್ಷಾ ನಿಲ್ದಾಣಗಳಲ್ಲಿಯೂ ವಿಜೃಂಭಣೆಯಿಂದ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

Translate »