ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ

August 4, 2018

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿ ಕೊಂಡು ಕಣಕ್ಕಿಳಿಯುವುದು ಬೇಡ, ಅಗತ್ಯ ಬಿದ್ದ ಕಡೆಗಳಲ್ಲಿ ಸ್ಥಳೀಯವಾಗಿ ಹೊಂದಾಣಿಕೆಗೆ ಅಲ್ಲಿನ ನಾಯಕರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಮುಂದಾಗಿದೆ.

ಮುಂಬರುವ ಲೋಕಸಭಾ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆ ಹಾಗೂ ಮೈತ್ರಿಗೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಕೆಪಿಸಿಸಿ ಕಚೇರಿಯಲ್ಲಿಂದು ಕರೆಯಲಾಗಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಆದರೆ ರಾಜ್ಯ ಘಟಕದ ನಿರ್ಧಾರವನ್ನು ಕೇಂದ್ರ ವರಿಷ್ಠರಿಗೆ ತಿಳಿಸಲಾಗುವುದು. ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಲೋಕಸಭೆ ಚುನಾವಣೆಗೆ ಮೈತ್ರಿ ವಿಚಾರದಲ್ಲಂತೂ ಹಾಸನ ಸೇರಿದಂತೆ ಕೆಲವು ಜಿಲ್ಲೆಗಳ ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಲ್ಲದೆ, ಹೊಂದಾಣಿಕೆ ಮಾಡಿಕೊಂಡಿದ್ದೇ ಆದಲ್ಲಿ ನಮ್ಮ ಜಿಲ್ಲೆಗಳಲ್ಲಿ ಪಕ್ಷ ನಿರ್ನಾಮ ಆಗುತ್ತದೆ ಎಂದು ರಾಜ್ಯ ನಾಯಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆದಿದ್ದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಮೊದಲನೆಯದಾಗಿ ಉಡುಪಿ-ಚಿಕ್ಕಮಗಳೂರು, ಹಾಸನ ಸೇರಿದಂತೆ ಕೆಲವು ಲೋಕ ಸಭಾ ಕ್ಷೇತ್ರಗಳ ಸ್ಥಳೀಯ ಮುಖಂಡರು ಆ ನಂತರ ರಾಜ್ಯ ನಾಯಕರು ಚುನಾವಣಾ ಹೊಂದಾಣಿಕೆ ಹಾಗೂ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ಜೊತೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತಗೊಂಡರೂ ವರಿಷ್ಠರ ತೀರ್ಮಾ ನಕ್ಕೆ ಬದ್ಧರಾಗಿರುವ ನಿರ್ಣಯ ಕೈಗೊಳ್ಳಲಾಯಿತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪಕ್ಷಗಳೇ ಸಾರ್ವಜನಿಕವಾಗಿ ಹೋರಾಡುವುದು ಹೇಗೆ? ಎಂಬ ಅಭಿಪ್ರಾಯವೂ ವ್ಯಕ್ತವಾಯುತು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವೇಣುಗೋಪಾಲ್, ಲೋಕಸಭೆಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ತೀರ್ಮಾನವಾಗಿದೆ, ಆದರೆ ಯಾರಿಗೆ ಯಾವ ಕ್ಷೇತ್ರ ಎಂಬುದು ಅಂದಿನ ದಿನದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ಸಮಾಲೋಚಿಸಿ, ಆ ನಂತರ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ಈ ಸಂದರ್ಭದಲ್ಲಿ ಈ ಚುನಾವಣೆಗೆ ಸೀಮಿತವಾಗಿ ನಿಮ್ಮ ಬಲವಾದ ಅಭಿಪ್ರಾಯಗಳನ್ನು ದೆಹಲಿ ನಾಯಕರ ಗಮನಕ್ಕೆ ತರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೆಲವು ನಾಯಕರು ಹಾಗೂ ಕೆಲವು ಜಿಲ್ಲೆಗಳ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಬೇಕೆಂದು ಒತ್ತಾಯ ಮಾಡಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮನ್ನು ಪಕ್ಷದ ಪ್ರತಿಷ್ಠಿತ ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಿದ್ದಾರೆ. ಇದು ರಾಜ್ಯಕ್ಕೆ ಸಂದ ಗೌರವ. ರಾಷ್ಟ್ರ ರಾಜಕಾರಣದಲ್ಲಿ ತಾವು ಎತ್ತರದ ಮಟ್ಟಕ್ಕೆ ಬೆಳೆಯಬೇಕು, ಇದಕ್ಕಾಗಿ ನೀವು ಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುವಂತೆ ಆಗ್ರಹಿಸಿದರು. ಮೈಸೂರು ಇಲ್ಲವೇ ಕೊಪ್ಪಳದಿಂದ ಕಣಕ್ಕಿಳಿಯಿರಿ, ನಿಮ್ಮ ಜಯ ಖಚಿತ ಎನ್ನುತ್ತಿದ್ದಂತೆ ಕೈಎತ್ತಿ ಮುಗಿದ ಸಿದ್ದರಾಮಯ್ಯ, ನನಗೆ ಚುನಾವಣಾ ಸಹವಾಸವೇ ಬೇಡ. ನಾನು ಲೋಕಸಭೆಗೆ ಸ್ಫರ್ಧಿಸುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದರು.

Translate »