ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ
ಮೈಸೂರು

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ

February 25, 2019

ಬಂಡೀಪುರ: ಬೆಂಕಿಯ ರೌದ್ರ ನರ್ತನ ಭಾನುವಾರವೂ ಮುಂದುವರೆಯಿತು. ರಭಸವಾಗಿ ಬೀಸಿದ ಗಾಳಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಲವು ಗುಡ್ಡಗಳನ್ನು ಆಹುತಿ ಪಡೆದ ಕಾಳ್ಗಿಚ್ಚು, ಅಪಾರ ಪ್ರಮಾಣದ ವನ್ಯಸಂಪತ್ತನ್ನು ನೋಡ ನೋಡುತ್ತಿದ್ದಂತೆ ಹೊಸಕಿ ಹಾಕಿತು.

ಶನಿವಾರ ಮೇಲುಕಾಮನಹಳ್ಳಿಯಿಂದ ಬಂಡೀಪುರದ ಕ್ಯಾಂಪಸ್ ಕಡೆ ಸಾಗಿದ ಬೆಂಕಿಯ ಸಾವಿರಾರು ಎಕರೆ ಕಾಡನ್ನು ಆಹುತಿ ಪಡೆದಿತ್ತು. ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಸಾಗಿದ ಬೆಂಕಿ ರಾತ್ರಿಯಿಡೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಲಿನ ಗುಡ್ಡಗಳನ್ನು ಆವರಿಸುತ್ತಾ ಸಾಗಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ ಶಾಂತ ಸ್ವರೂಪದಲ್ಲಿ ಉರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆ ಮತ್ತೆ ರೌದ್ರ ನರ್ತನ ಮಾಡಲು ಆರಂಭಿಸಿತು. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನೂರಾರು ಸ್ವಯಂ ಸೇವಕರು, ಪರಿಸರ ಪ್ರೇಮಿಗಳು ಬಂಡೀಪುರಕ್ಕೆ ಆಗಮಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರಾದರೂ ಬೆಂಕಿ ಕೆನ್ನಾಲಿಗೆ ಬೇರೆ ಪ್ರದೇಶಕ್ಕೆ ವ್ಯಾಪ್ತಿಸುವುದನ್ನು ತಡೆಗಟ್ಟಲು ವಿಫಲ ರಾಗಿ ಅಸಹಾಯಕತೆ ಪ್ರದರ್ಶಿಸಿದರು.

ಜೋರಾಗಿ ಬೀಸಿದ ಗಾಳಿಗೆ ಬೆಂಕಿಯ ಕೆನ್ನಾಲಿಗೆ ಸುಳಿ ಮಾದರಿಯಲ್ಲಿ ನೆಲಮಟ್ಟದಿಂದ ಸುಮಾರು 25ರಿಂದ 35 ಅಡಿ ಎತ್ತರದಲ್ಲಿ ಸುರುಳಿ ಸುತ್ತುತ್ತಾ ಸಾಗಿದ ಬೆಂಕಿ ನೋಡ ನೋಡುತ್ತಿದ್ದಂತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಹು ಭಾಗದ ಕಾಡನ್ನು ಆವರಿಸಿತು. ಬೆಂಕಿಯ ಕಿಡಿ ರಸ್ತೆ ದಾಟದಂತೆ ಸ್ವಯಂ ಸೇವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿದರೂ ಬೆಂಕಿಯನ್ನು ತಡೆಹಿಡಿಯಲು ಸಾಧ್ಯವಾಗಲಿಲ್ಲ. ಬಿಸಿ ಗಾಳಿ, ಹೊಗೆ, ಅನತಿ ದೂರದಲ್ಲೇ ಸುಡುತ್ತಿದ್ದ ಹಬೆ ಕಾರ್ಯಾ ಚರಣೆಯಲ್ಲಿ ತೊಡಗಿದ್ದವರ ಆತ್ಮಬಲ ವನ್ನು ಅಲುಗಾಡಿಸಿತು. ಆದರೂ ಕೆಲವರು ಛಲದಿಂದ ಕಾರ್ಯಾಚರಣೆ ಮುಂದುವರೆಸಿ ದರಾದರೂ 35ಅಡಿ ಎತ್ತರದಿಂದ ಬಹು ದೂರದವರೆಗೆ ಆರುತ್ತಿದ್ದ ಕಿಡಿಯನ್ನು ಹುಡುಕಿ ಹುಡುಕಿ ಸೊಪ್ಪಿನಿಂದ ಬಡಿದು ನಂದಿಸುತ್ತಿರುವ ಸಂದರ್ಭದಲ್ಲಿಯೇ ಬೇರೆ ಬೇರೆ ಸ್ಥಳದಲ್ಲಿ ಅತ್ತಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಬೆಟ್ಟವನ್ನೇ ಆವರಿಸಿತು. ಸಂಜೆ 5ಗಂಟೆ ವೇಳೆಗೆ ಬೆಟ್ಟದ ಬಹು ಭಾಗ ಸುಟ್ಟು ಕರಕಲಾಯಿತು. ರಾತ್ರಿ 10 ಗಂಟೆ ಯಾದರೂ ಬೆಂಕಿ ಉರಿಯುತ್ತಲೇ ಇದ್ದು, ಯಾರಿಂದಲೂ ಬೆಂಕಿ ನಂದಿಸಲು ಸಾಧ್ಯವಾಗ ದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ದಟ್ಟ ಕಾಡಿನಲ್ಲಿ ಬೆಂಕಿ ಉರಿಯುತ್ತಿರುವ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಅಥವಾ ಸ್ವಯಂ ಸೇವಕರು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ಗಾಳಿ ಹೆಚ್ಚಾಗಿರುವುದರಿಂದಲೂ ಅಪಾರ ಪ್ರಮಾಣದ ವನ್ಯಸಂಪತ್ತಿನ ನಾಶಕ್ಕೆ ಕಾರಣವಾಗುತ್ತಿದೆ.

ಮೈಸೂರಿನ ರೈಲ್ವೆ ಘಟಕ ಆವರಣ ಸೇರಿ ಜಿಲ್ಲೆಯ ಹಲವೆಡೆ ಬೆಂಕಿ ಅನಾಹುತ

ಮೈಸೂರು: ಮೈಸೂರಿನ ರೈಲ್ವೇ ಘಟಕದ ಆವರಣ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಅಗ್ನಿ ಅವಘಡ ಸಂಭವಿಸಿ, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮೈಸೂರಿನ ರೈಲ್ವೇ ಘಟಕ ಆವರಣದಲ್ಲಿದ್ದ ಭಾರೀ ಪ್ರಮಾಣದ ತ್ಯಾಜ್ಯಕ್ಕೆ ಬೆಂಕಿ ತಗುಲಿ, ಹೊತ್ತಿ ಉರಿದಿದೆ. ಅನುಪಯುಕ್ತ ರಬ್ಬರ್, ಹಳೇ ಶೂ, ಸಾಕ್ಸ್, ಆಯಿಲ್ ಬಟ್ಟೆಗಳು ಸೇರಿದಂತೆ ರೈಲ್ವೇ ವಕ್ರ್ಸ್‍ಶಾಪ್‍ನ ಅಪಾರ ಪ್ರಮಾಣದ ತ್ಯಾಜ್ಯಕ್ಕೆ ಕಿಡಿಗೇಡಿ ಗಳು ಬೆಂಕಿ ಹಾಕಿದ್ದು, ಸುತ್ತಮುತ್ತಲ ಪ್ರದೇಶಕ್ಕೂ ಬೆಂಕಿ ಪಸರಿಸಿದ್ದಲ್ಲದೆ, ದಟ್ಟ ಹೊಗೆ ಆವರಿಸಿತ್ತು. ಸಮೀಪದಲ್ಲೇ ಇರುವ ರೈಲ್ವೇ ಆಸ್ಪತ್ರೆ ಸೇರಿದಂತೆ ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಜಿಲ್ಲಾ ಅಗ್ನಿಶಾಮಕಾಧಿಕಾರಿ ಕೆ.ಪಿ.ಗುರುರಾಜ್ ನೇತೃತ್ವದಲ್ಲಿ ಅಗ್ನಿಶಾಮಕ ಠಾಣಾಧಿಕಾರಿಗಳಾದ ಶಿವಸ್ವಾಮಿ, ನಾಗರಾಜ್ ಅರಸ್, ಸಹಾಯಕ ಠಾಣಾ ಧಿಕಾರಿ ಪಂಡಿತಾರಾಧ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, 6 ವಾಹನಗಳನ್ನು ಬಳಸಿಕೊಂಡು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿ ದರು. ಬೆಂಕಿ ಹೊತ್ತಿಕೊಂಡಿದ್ದ ತ್ಯಾಜ್ಯಕ್ಕೆ ಸಮೀಪದಲ್ಲೇ ಬಿದಿರು ಮೆಳೆಗಳಿವೆ. ಕ್ಷಿಪ್ರ ಕಾರ್ಯಾಚರಣೆ ನಡೆಸದಿದ್ದರೆ, ಬಿದಿರಿಗೂ ಬೆಂಕಿ ಆವರಿಸುತ್ತಿತ್ತು. ಹಾಗಾಗಿದ್ದರೆ ಮಾನಂದವಾಡಿ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳು, ಸಮೀಪದಲ್ಲಿರುವ ಮನೆಗಳಿಗೂ ಬೆಂಕಿಯ ಕಿಡಿ ತಗುಲಿ, ಭಾರೀ ಅನಾಹುತವೇ ಸಂಭವಿಸುತ್ತಿತ್ತು.

ಜಿಲ್ಲೆಯ ವಿವಿಧೆಡೆ ಬೆಂಕಿ: ಮೈಸೂರು ತಾಲೂಕಿನ ಕಿರಾಳು ಗ್ರಾಮ ವ್ಯಾಪ್ತಿಯ ಮೂರ್ನಾಲ್ಕು ಎಕರೆ ಕಬ್ಬಿನ ಗದ್ದೆ, ಮರಟಿಕ್ಯಾತನಹಳ್ಳಿಯಲ್ಲಿ ಸುಮಾರು 3 ಎಕರೆ ಬಾಳೆತೋಟ, ನಂಜನ ಗೂಡು ತಾಲೂಕಿನ ಹುಲ್ಲಹಳ್ಳಿ ಹಾಗೂ ನೇರಳೆಯಲ್ಲಿ ಹುಲ್ಲಿನ ಮೆದೆಗಳು ಹಾಗೂ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಕೆ.ಆರ್.ನಗರ ತಾಲೂಕಿನ ಕರಿಮುದ್ದನಹಳ್ಳಿ, ಮಿರ್ಲೆ ಹಾಗೂ ಮೂಡಲಕೊಪ್ಪಲು, ಹುಣಸೂರು ತಾಲೂಕಿನ ಬಿಳಿಗೆರೆ, ಪಿರಿಯಾಪಟ್ಟಣ ತಾಲೂಕು ಕಂಪಲಾಪುರದ ಹತ್ತಿರ ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ಅರಣ್ಯ ನಾಶ: ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಬಳಿ ಸುಮಾರು ಆರೇಳು ಎಕರೆ ಸಾಮಾಜಿಕ ಅರಣ್ಯ, ಹೆಚ್.ಡಿ.ಕೋಟೆ ತಾಲೂಕಿನ ಚಿಕ್ಕತಾಯಮ್ಮ ಬೆಟ್ಟ, ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಸಂರಕ್ಷಿತ ಅರಣ್ಯ ಪ್ರದೇಶ, ಬೆಟ್ಟದಪುರ ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ, ತಿ.ನರಸೀಪುರ ತಾಲೂಕು ತಲಕಾಡು ಸಮೀಪದಲ್ಲಿರುವ ಸಾಮಾಜಿಕ ಅರಣ್ಯದ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿ, ನಷ್ಟವಾಗಿದೆ. ಒಂದೇ ದಿನ ಜಿಲ್ಲೆಯ ವಿವಿಧೆಡೆ ಹತ್ತಾರು ಎಕರೆ ಅರಣ್ಯ ಪ್ರದೇಶ, ಕಬ್ಬು, ಬಾಳೆ, ಹತ್ತಾರು ಹುಲ್ಲಿನ ಬವಣೆಗಳು ಬೆಂಕಿ ಕೆನ್ನಾಲಿಗೆಗೆ ತುತ್ತಾಗಿವೆ. ಮೈಸೂರಿನ ಸರಸ್ವತಿಪುರಂ ಹಾಗೂ ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಅವಿರತವಾಗಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯ: ಇಂದು ಸಂಭವಿಸಿರುವ ಅಗ್ನಿ ಅವಘಡಗಳಲ್ಲಿ ಬಹುತೇಕ ಕಿಡಿಗೇಡಿಗಳ ಕೃತ್ಯದಿಂದ ಆಗಿರುವುದು. ಎಲ್ಲೆಂದರಲ್ಲಿ ತ್ಯಾಜ್ಯವನ್ನು ರಾಶಿ ಮಾಡಿ ಬೆಂಕಿ ಹಾಕುವುದು, ಬೀಡಿ, ಸಿಗರೇಟು ಸೇದಿ ನಂದಿಸದೆ ಹಾಗೆಯೇ ಬಿಸಾಡುವುದ ರಿಂದ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ಮತ್ತೆ ಕೆಲವೆಡೆ ಹುಲ್ಲಿನ ಬಣವೆ ಗಳಿಗೆ ಬೇಕಂತಲೇ ಬೆಂಕಿ ಹಾಕಿರುವ ಶಂಕೆಯೂ ಇದೆ. ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಕಿಡಿಗೇಡಿಗಳ ದುಷ್ಕøತ್ಯಕ್ಕೆ ಅವಕಾಶ ಮಾಡಿಕೊಡುವಂತೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ರಾಶಿ ಹಾಕ ಬಾರದು. ಬೆಂಕಿ ಹಚ್ಚಿ ತಮಾಷೆ ನೋಡುವ ದುಷ್ಕರ್ಮಿಗಳನ್ನು ಹಿಡಿದು ಬುದ್ಧಿ ಕಲಿಸಬೇಕು. ಅಗ್ನಿಶಾಮಕ ಸಿಬ್ಬಂದಿ ಕೊರತೆಯಿರುವುದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಾರ್ವಜನಿಕರೂ ಸೂಕ್ತ ರೀತಿಯಲ್ಲಿ ಸಹಕರಿಸಬೇಕು.

Translate »