ನಾಡಿಗೆ ಬರಲು ಯತ್ನಿಸಿದ ಕಾಡಾನೆ ಮೇಲೆ ಅರಣ್ಯ ಸಿಬ್ಬಂದಿಯಿಂದ ಗುಂಡು; ಹಂಗಾಮಿ ನೌಕರ ವಜಾ
ಮೈಸೂರು

ನಾಡಿಗೆ ಬರಲು ಯತ್ನಿಸಿದ ಕಾಡಾನೆ ಮೇಲೆ ಅರಣ್ಯ ಸಿಬ್ಬಂದಿಯಿಂದ ಗುಂಡು; ಹಂಗಾಮಿ ನೌಕರ ವಜಾ

March 13, 2020

ಮೈಸೂರು,ಮಾ.12(ಎಂಟಿವೈ)- ವನ್ಯಪ್ರಾಣಿಗಳನ್ನು ರಕ್ಷಿಸಬೇಕಾದವರೇ ಅವುಗಳಿಗೆ ಗುಂಡಿಕ್ಕಿದರೆ ಹೇಗೆ? ಕಾಡಂಚಿನ ಗ್ರಾಮಗಳಿಗೆ ಬಂದು ಉಪಟಳ ನೀಡುವ ಆನೆಗಳನ್ನು ಕಾಡಿಗಟ್ಟಲೆಂದೇ ರಚಿಸಿರುವ `ಆ್ಯಂಟಿ ಡಿಪ್ರೆಡೇಷನ್ ಸ್ಕ್ವಾಡ್’(ಫೋರ್ಸ್)ನ ಸಿಬ್ಬಂದಿಯೇ ಕಾಡಾನೆ ಮೇಲೆ ಫೈರಿಂಗ್ ಮಾಡಿ, ಹಿರಿಯ ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಡೆದಿದ್ದೇನು?: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮದತ್ತ ನುಸುಳಲು ರೈಲ್ವೆ ಬ್ಯಾರಿಕೇಡ್ ದಾಟುತ್ತಿದ್ದ ಗಂಡಾನೆ ಮೇಲೆ ಅರಣ್ಯ ಸಿಬ್ಬಂ ದಿಯೇ ನೇರವಾಗಿ ಗುಂಡು ಹಾರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗುಂಡು ಹಾರಿಸಿದ ಹಂಗಾಮಿ ನೌಕರ ನನ್ನು ವಜಾಗೊಳಿಸಿ, ಇಲಾಖಾ ತನಿಖೆ ನಡೆಸಲಾಗುತ್ತಿದೆ.

ಓಂಕಾರ, ಹೆಡಿಯಾಲ ನಡುವೆ ಅರಣ್ಯ ಇಲಾಖೆ ಹಾಕಿರುವ ರೈಲ್ವೆ ಬ್ಯಾರಿಕೇಡ್ ದಾಟಿ ಕಾಡಂಚಿನ ಗ್ರಾಮದ ಹೊಲಗದ್ದೆಗಳಿಗೆ ದಾಳಿ ನಡೆಸಲು 35 ರಿಂದ 40 ವರ್ಷದ ಗಂಡಾನೆಯೊಂದು ಮುಂದಾಗಿತ್ತು. ಗಸ್ತಿನಲ್ಲಿದ್ದ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸುವ ಬದಲು ನೇರವಾಗಿ ಆನೆಗೇ ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲೇ ನಡೆದ ಘಟನೆ ಎಂಬುದು ದೃಢಪಟ್ಟಿದೆ.

ವಿಡಿಯೊ ನೋಡಿದ ಜನರು, `ಇವರೇನು ಅರಣ್ಯ ರಕ್ಷಕರೇ ಅಥವಾ ಬೇಟೆಗಾರರೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡಾ, ಕಟು ಶಬ್ದಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ಆನೆಗೆ ಗುಂಡಿಕ್ಕಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಾಮಾಜಿಕ ತಾಣದಲ್ಲಿ ಆಗ್ರಹ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿ ಸಿದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ, ಫೈರಿಂಗ್ ಮಾಡಿದ ತಂಡ ವನ್ನು ಪತ್ತೆ ಹಚ್ಚಿದ್ದಾರೆ.

ಇಲಾಖೆಗೆ ಸೇರಿದ ಜೀಪ್‍ನಲ್ಲಿ ಮುಂಭಾಗದ ಆಸನದ ಲ್ಲಿದ್ದ ಹಂಗಾಮಿ ನೌಕರ ರಹೀಂ, ಡಬಲ್ ಬ್ಯಾರಲ್ ಬಂದೂಕಿ ನಲ್ಲಿ ಫೈರಿಂಗ್ ಮಾಡಿರುವುದು ಖಚಿತವಾಗಿದೆ. ಈ ಘಟನೆಯನ್ನು ಜೀಪ್ ಹಿಂಬದಿ ಆಸನದಲ್ಲಿದ್ದ ಗಾರ್ಡ್ ಉಮೇಶ್ ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಜೋರಾಗಿ ಸದ್ದು ಮಾಡಿ ಆನೆಯನ್ನು ಬೆದರಿಸುವ ಯತ್ನವೂ ಜೀಪ್‍ನಲ್ಲಿ ದ್ದವರಿಂದ ನಡೆದಿದೆ. ಈ ಎಲ್ಲಾ ಅಂಶಗಳನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಗುಂಡಿಕ್ಕಿದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿರ್ಧರಿಸಿದ್ದಾರೆ.

ಅನಗತ್ಯ ಫೈರಿಂಗ್: ಆನೆ ರೈಲ್ವೆ ಬ್ಯಾರಿಕೇಡ್ ದಾಟಲು ಯತ್ನಿಸುವ ವೇಳೆ ಕಾಲೊಂದನ್ನು ಕಬ್ಬಿಣದ ಭಾರೀ ಸಲಾಕೆ ಮೇಲೆ ಹಾಕಿದೆ. ಅದೇ ವೇಳೆ ಮತ್ತೊಂದು ಬದಿಯಲ್ಲಿ ರುವ ರಸ್ತೆಯಲ್ಲಿ ಗಸ್ತು ಜೀಪ್ ನಿಂತಿರುವುದು ಕಂಡು ರೊಚ್ಚಿಗೆದ್ದ ಆನೆ, ರೈಲ್ವೆ ಕಂಬಿ ಬ್ಯಾರಿಕೇಡ್ ಪಕ್ಕದಲ್ಲೇ ಘೀಳಿಡುತ್ತಾ ಓಡಿ ಬಂದಿದೆ. ಆನೆಯಿಂದ ಜೀಪ್‍ನಲ್ಲಿದ್ದ ಸಿಬ್ಬಂದಿಗೆ ಅಪಾಯ ವೇನೂ ಆಗುತ್ತಿರಲಿಲ್ಲ. ರೈಲ್ವೆ ಕಂಬಿ ಬ್ಯಾರಿಕೇಡ್ ದಾಟು ವುದು ಅಷ್ಟು ಸುಲಭವೂ ಅಲ್ಲ ಎನ್ನುವುದು ಸಿಬ್ಬಂದಿಗೆ ಗೊತ್ತಿತ್ತು. ಅಲ್ಲದೆ, ಜೀಪ್ ಹಿಂದಕ್ಕೆ ಚಾಲನೆ ಮಾಡುವ ಬದಲು ಮುಂದಕ್ಕೆ ಹೋಗಬಹುದಾಗಿತ್ತು. ಇದಾವುದನ್ನೂ ಮಾಡದ ಸಿಬ್ಬಂದಿ ಆನೆಗೆ ನೇರ ಗುಂಡು ಹಾರಿಸಿದ್ದಾರೆ. ಘಟನೆ ಕುರಿತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಾಡಾನೆ ಮೇಲಿನ ಫೈರಿಂಗ್ ಮಾ.7ರಂದು ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಫೈರಿಂಗ್ ಮಾಡಿದ ಹಂಗಾಮಿ ನೌಕರ ರಹೀಂನನ್ನು ಬುಧವಾರ ಸಂಜೆಯಿಂ ದಲೇ ವಜಾಗೊಳಿಸಲಾಗಿದೆ. ವಿಡಿಯೊ ಚಿತ್ರೀಕರಣ ಮಾಡಿದ ವ್ಯಕ್ತಿ ಇಲಾಖೆ ಸಿಬ್ಬಂದಿ ಉಮೇಶ್ ಎಂದು ಗುರುತಿಸಲಾಗಿದೆ. ಈತ ಇಲಾಖೆ ಸಿಬ್ಬಂದಿ ಆಗಿರುವುದರಿಂದ ತಕ್ಷಣಕ್ಕೆ ಅಮಾನತು ಮಾಡಲು ಆಗುವುದಿಲ್ಲ. ವಿಚಾರಣೆಗೆ ಹಾಜರಾಗುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇಲಾಖಾ ವಿಚಾರಣೆ ನಂತರ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಆನೆಯನ್ನು ಮರಳಿ ಕಾಡಿಗೆ ಹೇಗೆ ಓಡಿಸಬೇಕೆಂಬ ಬಗ್ಗೆ ಎಲ್ಲಾ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಆದರೆ ಆನೆಗೆ ಫೈರಿಂಗ್ ಮಾಡಿರುವುದು, ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿರುವುದು ಸರಿಯಲ್ಲ. ಸದ್ಯ ಕೋವಿಯಿಂದ ಸಿಡಿದಿದ್ದು ಬುಲೆಟ್ ಅಲ್ಲ, ಆನೆ ಓಡಿಸುವ ಕಾರ್ಯಾಚರ ಣೆಗೆ ಚಿಲ್ ಬಳಸುತ್ತೇವೆ. ಇದನ್ನು 15 ಮೀ. ದೂರದಿಂದ ಹೊಡೆದರೆ ಆನೆ ಜೀವಕ್ಕೆ ಹಾನಿಯಾಗುವುದಿಲ್ಲ. ಹೆಚ್ಚು ಶಬ್ದ ಬರುತ್ತದೆ, ತರಚಿದ ಗಾಯವಾಗುತ್ತದೆ ಅಷ್ಟೆ. ಆನೆಗೆ ಯಾವುದೇ ಸಮಸ್ಯೆಯಾಗಿಲ್ಲ. ಭಾರೀ ಶಬ್ದಕ್ಕೆ ಆನೆ ಹೆದರಿ, ಕಾಡಿಗೆ ಓಡಿ ಹೋಗಿದೆ. ಆದರೂ ಆ ಆನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಹೆಡಿಯಾಲ ವಲಯದ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದರು.

Translate »