ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ವಿವಾದ: ಇಲ್ಲಿರುವ ಮುಡಾ ಬಡಾವಣೆ ನಿವಾಸಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ
ಮೈಸೂರು

ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ವಿವಾದ: ಇಲ್ಲಿರುವ ಮುಡಾ ಬಡಾವಣೆ ನಿವಾಸಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ

August 12, 2018

ಮೈಸೂರು: ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ಭೂಮಿಯ ವ್ಯಾಪ್ತಿಯಲ್ಲಿ ಈ ಹಿಂದೆ ನಗರ ವಿಶ್ವಸ್ಥ ಮಂಡಳಿ (ಸಿಐಟಿಬಿ), ನಂತರ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಪಡಿಸಿರುವ ಬಡಾವಣೆಗಳಾದ ಸಿದ್ದಾರ್ಥ ನಗರ, ಕೆ.ಸಿ. ನಗರ, ಜೆ.ಸಿ. ನಗರ ಮತ್ತು ಆಲನಹಳ್ಳಿಯ ಸಾವಿರಾರು ನಿವಾಸಿಗಳ ಕಳೆದ 5 ವರ್ಷಗಳ ನಿರಂತರ ಹೋರಾಟಕ್ಕೆ ಇದೀಗ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರೊಂದಿಗೆ ಕಡೆಗೂ ಫಲ ಸಿಗುವ ನಿರೀಕ್ಷೆ ಇದೆ. ಕುರುಬಾರ ಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ವ್ಯಾಪ್ತಿಯ ಮುಡಾ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂರಾರು ಸದಸ್ಯರು ಸಂಘದ ಸಂಚಾಲಕ ಬಿ.ಪಿ. ಮಂಜುನಾಥ್ ನೇತೃತ್ವದಲ್ಲಿ ಸುತ್ತೂರು ಮಠಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯ ವರನ್ನು ಭೇಟಿಯಾಗಲು ಬೆಳಿಗ್ಗೆ 10.30ರಿಂದಲೇ ಮಠದ ಆವರಣದಲ್ಲಿ ಕಾಯುತ್ತಿದ್ದರು.

ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನ ಹಳ್ಳಿ ಸರ್ವೆ ನಂ. 41ರಲ್ಲಿ ಅಭಿವೃದ್ಧಿಪಡಿಸಲಾಗಿ ರುವ ಸಿಐಟಿಬಿ ಹಾಗೂ ಮುಡಾ ಬಡಾವಣೆಗಳ ನಿವಾಸಿಗಳು, ಈ ಎರಡೂ ಸರ್ವೇ ನಂಬರ್ ಗಳಲ್ಲಿ ಬರುವ ಭೂಮಿ ‘ಬಿ’ ಖರಾಬು (ಸರ್ಕಾರೀ ಭೂಮಿ) ಎಂದು ಘೋಷಿಸಿದ ನಂತರ ತಮ ಗುಂಟಾಗಿರುವ ಅನೇಕ ಸಮಸ್ಯೆಗಳ ಬಗ್ಗೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೆ ಖುದ್ದಾಗಿ ವಿವರಿಸಿ, ತಮ್ಮ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಲು ಬೆಳಗಿನಿಂದಲೂ ಕಾದಿದ್ದರು. ಈ ಮನವಿ ಪತ್ರ ದಲ್ಲಿ ತಮ್ಮ ಆಸ್ತಿಗಳ (ನಿವೇಶನ/ಮನೆ) ಖಾತೆ ಮಾಡಿಕೊಡದಿರುವುದು, ಕಟ್ಟಡ ನಕ್ಷೆ ಅನುಮೋದನೆ ನೀಡದಿರುವುದು, ಸಿ.ಆರ್. ನೀಡಲು ನಿರಾಕರಿಸು ತ್ತಿರುವುದು ಇತ್ಯಾದಿ ಇನ್ನೂ ಹತ್ತು ಹಲವು ಸಮಸ್ಯೆಗಳ ಜೊತೆಗೆ ಬಡಾವಣೆಗಳ ನಿವೇಶನ/ಮನೆ ಮಾಲೀಕರು ತಮ್ಮ ಸ್ವತ್ತನ್ನು ಮಾರಾಟ ಮಾಡಲಾಗದೇ ಇಲ್ಲವೇ ಪರಭಾರೆ ಮಾಡಲು ಸಾಧ್ಯವಾಗದೇ, ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವುದನ್ನು ಸವಿವರವಾಗಿ ಉಲ್ಲೇಖಿಸಲಾಗಿತ್ತು. ಸುಮಾರು 25,000 ಕ್ಕೂ ಹೆಚ್ಚು ನಿವಾಸಿಗಳು 1970ರ ದಶಕದಲ್ಲಿ ಅಂದಿನ ಸಿಐಟಿಬಿ (ನಗರಾಭಿವೃದ್ದಿ ವಿಶ್ವಸ್ಥ ಮಂಡಳಿ, ಇಂದಿನ ಮುಡಾ)ಯಿಂದ ಕಾನೂನು ಬದ್ಧವಾಗಿಯೇ ನಿವೇಶಗಳನ್ನು ಪಡೆದಿದ್ದರು. ಆದರೆ ಸರ್ಕಾರ ಇದೀಗ ಏಕಾಏಕಿಯಾಗಿ ಸಿದ್ದಾರ್ಥನಗರದ 205.09 ಎಕರೆ, ಕೆ.ಸಿ. ನಗರದ 105 ಎಕರೆ ಹಾಗೂ ಜೆ.ಸಿ. ನಗರದ 44.02 ಎಕರೆ, ಒಟ್ಟಾರೆಯಾಗಿ 354.11 ಎಕರೆ ಪ್ರದೇಶವನ್ನು ‘ಬಿ’ ಖರಾಬು (ಸರ್ಕಾರೀ ಭೂಮಿ) ಎಂದು ಘೋಷಿಸಿದೆ.

ಈ ‘ಬಿ’ ಖರಾಬು ಸಮಸ್ಯೆ ಐದು ವರ್ಷಗಳಿಂದ ಬಡಾವಣೆಗಳ ನಿವಾಸಿಗಳ ಕಾಡುತ್ತಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರವೇ ಇದಕ್ಕೆ ಮೂಲ ಕಾರಣವಾಗಿದೆ. ತನ್ನ ನಿರ್ಧಾರದಿಂದಾಗಿ ಈ ಬಡಾವಣೆಗಳ ನಿವಾಸಿಗಳಿಗೆ ಬಹಳಷ್ಟು ತೊಂದರೆಗಳಾದರೂ, ಐದು ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಮಸ್ಯೆಗೆ ಪರಿಹಾರ ಹುಡುಕುವ ಗೋಜಿಗೇ ಹೋಗಲಿಲ್ಲ. ಇದರ ಪರಿಣಾಮವಾಗಿ, ಈ ಬಡಾವಣೆಗಳ ನೂರಾರು ನಿವಾಸಿಗಳು ಮುಡಾ, ಡಿಸಿ ಕಚೇರಿ, ಕೆ.ಸಿ.ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಲವು ಧರಣಿ, ಪ್ರತಿಭಟನೆಗಳನ್ನು ನಡೆಸಬೇಕಾಯಿತು. ಆದರೆ ಫಲ ಮಾತ್ರ ಸಿಗಲಿಲ್ಲ ಎಂಬುದು ತೀವ್ರ ಬೇಸರದ ಸಂಗತಿಯಾಗಿದೆ.

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗೆ 6 ತಿಂಗಳಿಗೂ ಮುಂಚೆ, ಸಿದ್ದಾರ್ಥನಗರದಲ್ಲಿರುವ ತಮ್ಮ ಸ್ನೇಹಿತನ ಒಡೆತನದ ಡಾ||. ನರಸಯ್ಯ ಆಸ್ಪತ್ರೆಗೆ ಸಿದ್ಧರಾಮಯ್ಯನವರು ಆಗಮಿಸುತ್ತಿದ್ದಾರೆ ಎಂದು ತಿಳಿದು, ಈ ಬಡಾವಣೆಗಳ ನೂರಾರು ನಿವಾಸಿಗಳು ಅಲ್ಲಿಗೆ ಹೋಗಿ ಅವರಿಗೆ ಮನವಿ ಪತ್ರವೊಂದನ್ನು ನೀಡಲು ಮುಂದಾದರು. ಆದರೆ ಆಸ್ಪತ್ರೆಯಿಂದ ಹೊರಬಂದ ಸಿದ್ದರಾಮಯ್ಯನವರ ಬಳಿ ನಿವಾಸಿಗಳು ಹೋಗುತ್ತಿದ್ದಂತೆಯೇ, ಅವರು ಏನೊಂದನ್ನು ಹೇಳದೆ, ಕೇಳದೆ ನೇರವಾಗಿ ತಮ್ಮ ಕಾರನ್ನೇರಿ ಸೀದಾ ಅಲ್ಲಿಂದ ಹೊರಟೇಬಿಟ್ಟರು.

ಆದರೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರದ್ದು ಇದಕ್ಕೆ ತದ್ವಿರುದ್ಧ ವರ್ತನೆಯಾಗಿ, ಸಂಘದ ನೂರಾರು ಸದಸ್ಯರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಗಮನಕ್ಕಾಗಿ ಸುತ್ತೂರು ಮಠದಲ್ಲಿ ಬೆಳಿಗ್ಗೆಯಿಂದಲೇ ಕಾದು ಕುಳಿತಿದ್ದು, ಸಿಎಂ ಮಠಕ್ಕೆ ಆಗಮಿಸುತ್ತಲೇ, ಪೊಲೀಸರು ಕೇವಲ 7 ಜನರಿಗೆ ಮಾತ್ರ ಅವರಿಗೆ ಮನವಿ ಪತ್ರ ಸಲ್ಲಿಸಲು ಅವಕಾಶ ನೀಡಿದರು. ಕಾರಿನಿಂದ ಇನ್ನೂ ಇಳಿಯುವ ಮುನ್ನವೇ ಕುಮಾರಸ್ವಾಮಿಯವರು, ಅಲ್ಲಿ ನೆರೆದಿದ್ದ ನೂರಾರು ಜನರನ್ನು ಕಂಡು, ತಕ್ಷಣ ಕಾರಿನಿಂದಿಳಿದು, ತಾವು ಪಡೆದಿದ್ದ ಮನವಿ ಪತ್ರವನ್ನು ಕೈಯಲ್ಲೇ ಹಿಡಿದುಕೊಂಡೇ, ಜನರತ್ತ ತೆರಳಿ ಅದರಲ್ಲಿದ್ದ ಅಂಶಗಳನ್ನು ತ್ವರಿತವಾಗಿ ಓದಿ, ಗ್ರಹಿಸಿ, ಕೂಡಲೇ ಮನವರಿಕೆ ಮಾಡಿಕೊಂಡರು. ಈ ವೇಳೆ ಕುಮಾರಸ್ವಾಮಿಯವರು “ನೀವ್ಯಾರು ಈ ಸಮಸ್ಯೆಯ ಬಗ್ಗೆ ಚಿಂತೆ ಮಾಡುವುದು ಬೇಡ. ನೀವು ಇಲ್ಲಿ ನನಗಾಗಿ ಬೆಳಗಿನಿಂದಲೇ ಕಾದಿದ್ದೀರಿ ಎಂದು ಅಂದುಕೊಂಡಿದ್ದೇನೆ. ನಾನು ಈ ವಿಷಯದ ಗಂಭೀರತೆಯನ್ನು ಅರಿತಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ, ನಿಮ್ಮ ಸಮಸ್ಯೆಗಳಿಗೆ ನಾನೇ ಸ್ವತಃ ಪರಿಹಾರ ಸೂಚಿಸುತ್ತೇನೆ” ಎಂದು ಹೇಳಿದರು. ಹೀಗೆ ಹೇಳಿದ ಕುಮಾರಸ್ವಾಮಿಯವರು ನೇರವಾಗಿ ತಮ್ಮ ಕಾರಿನತ್ತ ತೆರಳಿ, ನಂತರ ಸುತ್ತೂರು ಮಠದ ಮುಖ್ಯ ಆವರಣದತ್ತ ಧಾವಿಸಿದರು.

ಇದಕ್ಕೂ ಮುಂಚೆ, ನಿವಾಸಿಗಳ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಮುಖ್ಯಮಂತ್ರಿಯವರ ಆಗಮನದ ನಿರೀಕ್ಷೆಯಲ್ಲಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ, ತಮ್ಮ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅವರ ಆಶೀರ್ವಾದವನ್ನು ಪಡೆದುಕೊಂಡರು. ಸಂಘದ ಸದಸ್ಯರು ಮನವಿ ಪತ್ರವನ್ನೊಳಗೊಂಡ ಲಕೋಟೆಯನ್ನು ಸ್ವಾಮೀಜಿಗಳಿಗೆ ತೋರಿಸಿದ ಕೂಡಲೇ, ಸುತ್ತೂರು ಶ್ರೀಗಳು ಆ ಲಕೋಟೆಯ ಮೇಲೆ ತಮ್ಮ ಹಸ್ತವನ್ನಿಟ್ಟು, “ನೀವು ಸಮಾಜಕ್ಕೆ ಏನು ಒಳ್ಳೆಯದಾಗುತ್ತದೆಯೋ, ಅದನ್ನೇ ಮಾಡುತ್ತಿದ್ದೀರಿ. ನಿಮ್ಮ ಪ್ರಯತ್ನಗಳಿಗೆ ನನ್ನ ಆಶೀರ್ವಾದ ಸದಾ ಇದ್ದೇ ಇರುತ್ತದೆ” ಎಂದು ಹೇಳಿದರು.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಂಘದ ಸಂಚಾಲಕ ಬಿ.ಪಿ. ಮಂಜುನಾಥ್, ಸಹ ಸಂಚಾಲಕರಾದ ಮಾಜಿ ಉಪ ಮಹಾ ಪೌರರಾದ ಮಹದೇವಮ್ಮ, ಕಾರ್ಯದರ್ಶಿ ಮುರಳೀಧರ್, ಪಾಲಿಕೆ ಸದಸ್ಯ ಪಿ.ಮಲ್ಲೇಶ ಹಾಗೂ ಜೈನ್ ಸಮುದಾಯದ ನಾಯಕ ಪ್ರಕಾಶ್ ಜೈನ್ ಇತರರು ಇದ್ದರು.

ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೆ ನಂ. 41ರ ಮುಡಾ ಬಡಾವಣೆಗಳ ನಿವಾಸಿಗಳ ನಿರಂತರ ಮನವಿ ನಡುವೆಯೂ ಹಿಂದಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷವೇ ಇಂದಿನ ಸ್ಥಿತಿಗೆ ಕಾರಣ ಎಂದೇ ಹೇಳಬಹುದು. ಹಿಂದೆ ವಿಧಾನ ಪರಿಷತ್ ಸದಸ್ಯರೊಬ್ಬರು ಮಾಡಿದ್ದ ಉಹಾಪೋಹದಿಂದ ಕೂಡಿದ್ದ ಆರೋಪಗಳನ್ನೇ ಆಧಾರವಾಗಿಟ್ಟುಕೊಂಡ ಹಿಂದಿನ ಕಾಂಗ್ರೆಸ್ ಸರ್ಕಾರ, ಈ ಬಡಾವಣೆಗಳ ನಿವಾಸಿಗಳನ್ನು ಅತಂತ್ರ ಹಾಗೂ ಆತಂಕಕ್ಕೆ ದೂಡುವ ನಿರ್ಧಾರವನ್ನು ಕೈಗೊಂಡಿತು. ಇದರ ಪರಿಣಾಮವಾಗಿ, ಸರ್ಕಾರವು, ತಾನೇ ಅನುಮೋದನೆ ನೀಡಿದ್ದ ಕುರುಬಾರಹಳ್ಳಿ ಸರ್ವೇ ನಂ.4 ಮತ್ತು ಆಲನಹಳ್ಳಿ ಸರ್ವೇ ನಂ. 41 ರಲ್ಲಿನ ಮುಡಾ ಬಡಾವಣೆಗಳನ್ನು ಹೊರತುಪಡಿಸದೆಯೇ, ಈ ಸರ್ವೇ ನಂಬರ್‍ಗಳಲ್ಲಿನ ಎಲ್ಲಾ ಭೂಮಿಯನ್ನು ಸಾರಾಸಗಟಾಗಿ ‘ಬಿ’ ಖರಾಬು (ಸರ್ಕಾರಿ ಭೂಮಿ) ಎಂದು ಘೋಷಿಸಿತು. ಆದರೆ ಸರ್ಕಾರ ಮಾತ್ರ, ಮುಡಾ ಬಡಾವಣೆಗಳಿರುವ ಈ ಸರ್ವೇ ನಂಬರ್‍ಗಳ ಭೂಮಿಯನ್ನು ತಾನು ‘ಬಿ’ ಖರಾಬು ಎಂದು ಘೋಷಿಸಿಯೇ ಇಲ್ಲ ಎಂದು ಹೇಳುತ್ತಿರುವುದು ಇದೀಗ ಬಹು ವಿಚಿತ್ರವೆಂದೇ ಕಾಣುತ್ತಿದೆ.

Translate »