ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ
ಮೈಸೂರು

ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ

August 12, 2018

ನಂಜನಗೂಡು: ಕಬಿನಿ ಜಲಾಶಯದಿಂದ ಕಳೆದ ಎರಡು ದಿನದಿಂದ ಸತತವಾಗಿ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಸ್ಪರ್ಶಿಸಿದೆ.

ಇಂದು ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗಿದ್ದು, ಚಾಮರಾಜನಗರ ಬೈಪಾಸ್ ರಸ್ತೆಯನ್ನು ದಾಟಿ ಕಪಿಲಾ ನದಿಯ ನೀರು ಶ್ರೀಕಂಠೇಶ್ವರ ದೇವಾಲಯವನ್ನು ಭಾಗಶಃ ಆವರಿಸಿದೆ. ದೇವಾಲ ಯದ ಬಲ ಭಾಗದಲ್ಲಿರುವ ರಾಷ್ಟ್ರಪತಿ ರಸ್ತೆಗೂ ನೀರು ನುಗ್ಗಿದ್ದಲ್ಲಿ ದೇವಾಲಯ ಸಂಪೂರ್ಣವಾಗಿ ಜಲಾವೃತವಾಗುವ ಸಾಧ್ಯತೆ ಇದೆ. ದೇವಾಲಯದ ಪ್ರವೇಶ ದ್ವಾರದಲ್ಲಿ 2 ರಿಂದ 3 ಅಡಿ ನೀರು ನಿಂತಿರು ವುದರಿಂದ ಭಕ್ತಾದಿಗಳು ದೇವಸ್ಥಾನಕ್ಕೆ ರಾಷ್ಟ್ರಪತಿ ರಸ್ತೆ ಮೂಲಕವೇ ತೆರಳಿ ನೀರಿನಲ್ಲಿ ಇಳಿದು ದೇವಾಲಯ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದಿಂದ ನಿನ್ನೆ ಕಾಶಿ ವಿಶ್ವನಾಥ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ಪರಶುರಾಮ ದೇವಸ್ಥಾನ ಜಲಾವೃತವಾಗಿದ್ದವು. ಚಾಮರಾಜನಗರ ಬೈಪಾಸ್ ರಸ್ತೆಯನ್ನು ನದಿ ದಂಡೆಗಿಂತ ಎತ್ತರವಾಗಿ ನಿರ್ಮಿಸಿರು ವುದರಿಂದ ಪ್ರವಾಹದ ನೀರು ಅದನ್ನು ದಾಟಿ ಶ್ರೀಕಂಠೇಶ್ವರ ದೇವಾಲಯ ತಲುಪುವುದಿಲ್ಲ ಎಂಬ ನಿರೀಕ್ಷೆ ಇಂದು ಸುಳ್ಳಾಯಿತು. ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಪ್ರವಾಹ ಇಳಿಮುಖವಾಗದ ಕಾರಣ, ಇಂದೂ ಕೂಡ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಕೇವಲ 30 ನಿಮಿಷದಲ್ಲಿ ಮೈಸೂರು ತಲುಪುತ್ತಿದ್ದ ಪ್ರಯಾಣಿಕರು ಇದೀಗ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಗಂಟೆಗಟ್ಟಲೆ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳದಕೇರಿ, ತೋಪಿನ ಬೀದಿಯ 4 ಮತ್ತು ಬೊಕ್ಕಳ್ಳಿ ಗ್ರಾಮದ 5 ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಹಸೀಲ್ದಾರ್ ದಯಾನಂದ್ ತಿಳಿಸಿದ್ದಾರೆ. ಆರಂಭದಲ್ಲಿ ಮಳೆ ಸುರಿದಾಗ ಸಂತಸಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು, ಇದೀಗ ಪ್ರವಾಹದಿಂದಾಗಿ ಜಮೀನುಗಳಿಗೆ ನೀರು ನುಗ್ಗಿ ನಾಟಿ ಹಾಕಿದ್ದ ಪೈರು ಕೊಚ್ಚಿ ಹೋಗಿದ್ದರಿಂದ ಕಂಗಾಲಾಗಿದ್ದಾರೆ.

Translate »