ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್
ಮಂಡ್ಯ

ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್

August 12, 2018

ಮೈಸೂರು: ಹತಾಶರಾಗಿ ರೈತ ತಂದೆ-ತಾಯಂದಿರು ಆತ್ಮಹತ್ಯೆಗೆ ಶರಣಾಗಬೇಡಿ. ಗೌರಿ-ಗಣೇಶ ಹಬ್ಬದೊಳಗಾಗಿ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ ನಂತರ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನೂ ಮನ್ನಾ ಮಾಡಲು ಚಿಂತನೆ ನಡೆಸಿದ್ದೇನೆ. ಕ್ಯಾಬಿನೆಟ್‍ನಲ್ಲಿ ನಿರ್ಧಾರ ಕೈಗೊಂಡ ನಂತರ ನಿಲುವು ಪ್ರಕಟಿಸುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾತ್ರವಲ್ಲದೆ, ಹೊಸ ಕೃಷಿ ನೀತಿ ಮಾಡಲು ನೀಲಿ ನಕ್ಷೆ ತಯಾರಾಗಿದೆ. ಇಡೀ ರಾಜ್ಯದ ಎಲ್ಲಾ ಜನರಿಗೂ ಅನುಕೂಲವಾಗುವ ಕಾರ್ಯಕ್ರಮ ಪ್ರಕಟಿಸುತ್ತೇನೆ ಎಂದರು. ನಿಮ್ಮನ್ನು ಸಾಲದ ಸುಳಿಯಿಂದ ಪಾರು ಮಾಡಲು ನಾನು ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಬರುವ ಗೌರಿ-ಗಣೇಶ ಹಬ್ಬದೊಳಗಾಗಿ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ಕೊಡುತ್ತೇನೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ನುಡಿದರು.

ರೈತರ 49 ಸಾವಿರ ಕೋಟಿ ರೂ. ಸಾಲ ಮನ್ನಾ ಹಣ ಹೊಂದಿಸಲು ಪಟ್ಟ ಕಷ್ಟ ನನಗೆ ಗೊತ್ತು. ಇಂದು ಭೀಮನ ಅಮಾವಾಸ್ಯೆ. ಕಾವೇರಿ ಮಡಿಲಿನ ರೈತನ ಭೂಮಿಯಲ್ಲಿ ಭತ್ತದ ನಾಟಿ ಮಾಡಿದ್ದೇನೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಾನು ಮುಖ್ಯಮಂತ್ರಿಯಾದ ದಿನದಿಂದಲೂ ಮಳೆಯಾಗುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ರೈತರನ್ನೂ ದೇವರು ಉಳಿಸಿದ್ದಾರೆ. ಕರುಣಾನಿಧಿಯವರ ಅಂತ್ಯಕ್ರಿಯೆಗೆ ತೆರಳಿದ್ದಾಗ ಅಲ್ಲಿನ ಜನರು ನನ್ನ ಮತ್ತು ತಂದೆ ದೇವೇಗೌಡರಿಗೆ ವಾಳ್ಗ (ಜೈಕಾರ) ಎಂದು ಕೂಗುತ್ತಿದ್ದರು.

ನಾನು ದೇವರ ದಯೆಯಿಂದ ಸಿಎಂ ಆದೆ. ಮಂಡ್ಯದ ಜನರು ಏಳಕ್ಕೆ ಏಳೂ ಕ್ಷೇತ್ರವನ್ನೂ ಗೆಲ್ಲಿಸಿ ಕೊಟ್ಟಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ನಾನು ಕೇವಲ ನಾಲ್ಕು ಜಿಲ್ಲೆಗೆ ಮುಖ್ಯಮಂತ್ರಿಯಲ್ಲ, ರಾಜ್ಯದ 30 ಜಿಲ್ಲೆಗಳಿಗೂ ಸಿಎಂ. ಪ್ರತಿಯೊಂದೂ ಜಿಲ್ಲೆಯನ್ನೂ ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಇದೇ ವೇಳೆ ಭರವಸೆ ನೀಡಿದರು.

ತಿಂಗಳಿಗೊಂದು ಜಿಲ್ಲೆ: ಇಂದಿನಿಂದಲೇ ರೈತರ ಜಮೀನಿನಲ್ಲಿ ಕಾರ್ಯಕ್ರಮ ನೀಡಲು ಚಾಲನೆ ನೀಡಿದ್ದು, ಮುಂದೆ ತಿಂಗಳಿಗೊಂದು ಜಿಲ್ಲೆಯಂತೆ ರಾಜ್ಯದ 30 ಜಿಲ್ಲೆಗಳಿಗೆ ತೆರಳಿ ಒಂದು ದಿನ ರೈತರೊಂದಿಗಿದ್ದು, ಕಷ್ಟ-ಕಾರ್ಪಣ್ಯ ಅರಿತು ನಿವಾರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈಶ್ವರಪ್ಪಗೆ ಟಾಂಗ್: ನಾನು ಏನು ಮಾಡಿದರೂ ಹೃದಯದಿಂದ ಮಾಡುತ್ತೇನೆ. ಡ್ರಾಮಾ ಮಾಡಿ ಅಭ್ಯಾಸವಿಲ್ಲ. ಬಗರ್ ಹುಕುಂ ನನಗೂ ಗೊತ್ತಿದೆ. ನಾಟಿ ಮಾಡುತ್ತಿರುವುದು ನಾಟಕವಲ್ಲ. ರೈತರೊಂದಿಗೆ ಸರ್ಕಾರ ಇದೆ ಹಾಗೂ ಯುವ ಸಮುದಾಯಕ್ಕೆ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ಎಂದು ಸಂದೇಶ ಸಾರಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿದೆ ಎನ್ನುವ ಮೂಲಕ ಮುಖ್ಯಮಂತ್ರಿಗಳು, ನಾಟಿ ಕಾರ್ಯಕ್ರಮ ಕೇವಲ ನಾಟಕ ಎಂಬ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಟೀಕೆಗೆ ಎದಿರೇಟು ನೀಡಿದರು.

ಮಾಧ್ಯಮ ಮಿತ್ರರಿಗೆ ಧನ್ಯವಾದ: ಬ್ರದರ್ಸ್, ನಾವು-ನೀವು ಅಣ್ಣ-ತಮ್ಮಂದಿರು. ನನಗೆ ಕೆಲಸ ಮಾಡಲು ಹುಮ್ಮಸ್ಸು ನೀಡಿ. ನಿಮ್ಮ ನಿರೀಕ್ಷೆಗಿಂತ ದುಪ್ಪಟ್ಟು ಕೆಲಸ ಮಾಡುತ್ತೇನೆ. ನೀವು-ನಾವು ಸೇರಿ ಈ ನಾಡಿನ ರೈತರನ್ನು ಉಳಿಸೋಣ, ರಾಜ್ಯ ಅಭಿವೃದ್ಧಿ ಪಡಿಸೋಣ ಎಂದ ಕುಮಾರಸ್ವಾಮಿ, ಇಂದು ಕಾರ್ಯಕ್ರಮಕ್ಕೆ ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳು ಎಂದರು.

25 ವರ್ಷವಾಗಿತ್ತು: ನಾನು ಗದ್ದೆಗಿಳಿದು 25 ವರ್ಷವಾಗಿತ್ತು. ಇಂದು ನಿಮ್ಮೊಂದಿಗೆ ಕೆಸರು ಗದ್ದೆಯಲ್ಲಿ ನಾಟಿ ಮಾಡಿದಾಗ ಜಮೀನಿನ ಕೆಲಸ ಎಷ್ಟು ಕಷ್ಟ ಎಂಬುದು ಮತ್ತೆ ನೆನಪಾಯಿತು ಎಂದು ಸಿಎಂ ಹೇಳುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮದಿಂದ ಭಾರೀ ಕರತಾಡನ ಕೇಳಿ ಬಂದಿತು.

ಸಕ್ಕರೆ ಕಾರ್ಖಾನೆಗಳಿಗೆ ಜೀವ: ರೈತರ ಜೀವನಾಡಿಯಾಗಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ಮತ್ತು ಮಂಡ್ಯದ ಮೈಷುಗರ್ಸ್‍ಗೆ ಜೀವ ನೀಡಿ, ಮುನ್ನಡೆಸುತ್ತೇನೆ ಎಂದ ಕುಮಾರಸ್ವಾಮಿ ಅವರು, ಸಚಿವ ಸಿ.ಎಸ್.ಪುಟ್ಟರಾಜು ಅವರ ಕೋರಿಕೆಯಂತೆ ಎಣ್ಣೆಹೊಳೆ ಕೊಪ್ಪಲು ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಿಸಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆಗೆ ನಾನೇ ಶಂಕುಸ್ಥಾಪನೆ ಮಾಡುತ್ತೇನೆ ಎಂದೂ ಇದೇ ವೇಳೆ ಭರವಸೆ ನೀಡಿದರು.

ಪ್ರತಿ ಹಳ್ಳಿಗೆ ನೀರು: ಮಂಡ್ಯ ಜಿಲ್ಲೆಯ ಪ್ರತಿಹಳ್ಳಿಗೆ ಕುಡಿಯುವ ನೀರು ಸರಬರಾಜು, ಮಂಡ್ಯ ನಗರದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಯ ಜನರ ಋಣ ತೀರಿಸಲು ಸಂಕಲ್ಪ ಮಾಡಿದ್ದೇನೆ. ನಾನು ಈ ರಾಜ್ಯದ ಆರೂವರೆ ಕೋಟಿ ಜನರ ಸಿಎಂ. ನಾನು ಯಾವುದೇ ಪ್ರಾಂತ್ಯಕ್ಕೆ ಸೀಮಿತನಾದವನಲ್ಲ. ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ಹೆದರುವುದು ಈ ನಾಡಿನ ಜನರಿಗೆ ಹಾಗೂ ನನ್ನ ರೈತ ತಂದೆ-ತಾಯಿಯರಿಗೆ ಎಂದು ಅವರು ನುಡಿದರು.

ಸಾಲ ಮನ್ನಾ ಕಾರ್ಯಕ್ಕೆ ಎಲ್ಲರೂ ಪ್ರಶಂಸಿಸಬೇಕು

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಾಲ ಮನ್ನಾ ಕಾರ್ಯಕ್ರಮವನ್ನು ಎಲ್ಲರೂ ಪ್ರಶಂಸಿಸಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲಾನಂದ ಮಹಾಸ್ವಾಮೀಜಿ ಅವರು ವಿರೋಧ ಪಕ್ಷಗಳ ಟೀಕೆಗೆ ಇಂದಿಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಪಾಂಡವಪುರ ತಾಲೂಕು ಸೀತಾಪುರದ ಜಮೀನಿನಲ್ಲಿ ಮುಖ್ಯಮಂತ್ರಿಗಳು ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಈಗಾಗಲೇ ರೈತರ ಸಾಲ ಮನ್ನಾ ಮಾಡಿದ್ದು, ಇನ್ನೂ ರೈತರ ಉಳಿವಿಗೆ ಕಾರ್ಯಕ್ರಮ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.

50ರಷ್ಟಿದ್ದ ರಾಜ್ಯದ ಕೃಷಿ ಉತ್ಪನ್ನಗಳ ಜಿಡಿಪಿಯು ಈಗ 15ಕ್ಕಿಳಿದಿದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿಯೂ ಸಹ ಶೇ.79ರಷ್ಟು ಜನ ಗ್ರಾಮೀಣ ಭಾಗದಲ್ಲಿದ್ದರೂ, ಕೃಷಿ ಉತ್ಪನ್ನ ಹೆಚ್ಚದಿರುವುದು ವಿಷಾದನೀಯ. ವಾರಕ್ಕೊಂದು ಬಾರಿಯಾದರೂ ಯುವಕರು ಹಳ್ಳಿಗೆ ಬಂದು ಬೇಸಾಯದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಮೂಲ ಕಸುಬನ್ನು ಉಳಿಸಬೇಕು ಎಂದು ಶ್ರೀಗಳು ನುಡಿದರು. ನಾಡಿನ ಮುಖ್ಯಮಂತ್ರಿಗಳೇ ಬಂದು ಗದ್ದೆಗಿಳಿದು ನಾಟಿ ಮಾಡಿದ್ದಾರೆ. ಅದು ಯುವ ಸಮೂಹ ಮತ್ತು ರೈತರಿಗೆ ಪ್ರೇರಣೆಯಾಗಲಿದೆ ಎಂದು ಅವರು ನುಡಿದರು.

ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ

ಪಾಂಡವಪುರ: ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಸೀತಾಪುರ ಗ್ರಾಮದ ಹೊರವಲಯದÀ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮದ ನಂತರ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃಷ್ಣರಾಜ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ಸೊಬಗನ್ನು ಕಣ್ತುಂಬಿಕೊಂಡರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಅವರೊಂದಿಗೆ ಜಲಾಶಯದಲ್ಲಿ ವಿಹರಿಸಿದ ಕುಮಾರಸ್ವಾಮಿ ಅವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದರು. ಭೇಟಿ ವೇಳೆ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ, ಶ್ರೀಕಂಠೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

Translate »