ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ
ಮಂಡ್ಯ

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ

August 12, 2018

ಮೈಸೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಕೆಸರು ಗದ್ದೆಯಲ್ಲಿ ರೈತ ಮಹಿಳೆ ಯರೊಂದಿಗೆ ಭತ್ತದ ನಾಟಿ ಮಾಡಿದರು.

ಸಾಲ ಭೀತಿಯಿಂದ ಹತಾಶರಾಗಿ ಆತ್ಮಹತ್ಯೆ ಹಾದಿ ಹಿಡಿದಿರುವ ಮಣ್ಣಿನ ಮಕ್ಕಳಿಗೆ ಸರ್ಕಾರ ನಿಮ್ಮೊಂದಿಗಿದೆ ಎಂಬ ಸಂದೇಶ ದೊಂದಿಗೆ ಸೀತಾಪುರದ ಕುಳ್ಳಮ್ಮ ಮತ್ತು ಕೆಂಚೇಗೌಡ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿಗಳು ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ.

ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಅಶ್ವಿನ್‍ಕುಮಾರ್, ಸುರೇಶ್ ಗೌಡ, ನಾರಾಯಣಗೌಡ, ಡಾ. ಅನ್ನದಾನಿ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯ್ತಿ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಮಾಜಿ ಮೇಯರ್ ರವಿಕುಮಾರ್ ಸೇರಿ ದಂತೆ ಹಲವು ಜನಪ್ರತಿನಿಧಿಗಳು ಮುಖ್ಯ ಮಂತ್ರಿಗಳಿಗೆ ಸಾಥ್ ನೀಡಿದರು.

ಅದ್ಧೂರಿ ಸ್ವಾಗತ: ಭತ್ತದ ನಾಟಿ ಕಾರ್ಯಕ್ರಮಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಕೆಆರ್‍ಎಸ್-ಮಂಡ್ಯ ರಸ್ತೆಯ ಅರಳಕುಪ್ಪೆ ಸರ್ಕಲ್ ಬಳಿ ರೈತ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಪೂರ್ಣ ಕುಂಭ ಸ್ವಾಗತ ನೀಡಿ, ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಭತ್ತದ ನಾಟಿ ಮಾಡುವ ಗದ್ದೆಗೆ ಕರೆದೊಯ್ಯಲಾಯಿತು.

ಆಂಜನೇಯಸ್ವಾಮಿಗೆ ಪೂಜೆ: ಮಧ್ಯಾಹ್ನ 1.30 ಗಂಟೆಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಜಮೀನು ಬಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಂಚೆ ಎತ್ತಿ ಕಟ್ಟಿ, ಗದ್ದೆಗಿಳಿದು ಭೂತಾಯಿ ಮತ್ತು ಉಳುವ ಎತ್ತುಗಳಿಗೂ (ಏರು) ಪೂಜೆ ಸಲ್ಲಿಸಿ, ಮಹಿಳೆಯರೊಂದಿಗೆ ಭತ್ತದ ನಾಟಿ ಮಾಡಿದರು. ಈ ವೇಳೆ ‘ಉಳುವಾ ಯೋಗಿಯ ನೋಡಲ್ಲಿ’ ರೈತಗೀತೆ ಮೊಳಗಿತು. ನೆರೆದಿದ್ದ ಸಾವಿರಾರು ರೈತರ ಮೊಗದಲ್ಲಿ ಹರ್ಷದ ಹೊನಲು. 25 ಜೋಡೆತ್ತುಗಳಲ್ಲಿ ರೈತರು ಗದ್ದೆ ಉಳುಮೆ ಮಾಡಿದರೆ, 100 ಮಂದಿ ಮಹಿಳೆಯರ ಜೊತೆ ಭತ್ತದ ಸಸಿ ಗದ್ದೆಯಲ್ಲಿ ನಾಟಿ ಮಾಡಿದರು.

ಮುಗಿಯುವವರೆಗೂ…: ಸಾಂಕೇತಿಕವಾಗಿ ಭತ್ತ ನಾಟಿ ಮಾಡಿದ ಮುಖ್ಯಮಂತ್ರಿಗಳು ನಂತರ ಕೆಸರು ಗದ್ದೆಯಿಂದ ನಾಲೆ ದಂಡೆಗೆ ಬಂದು ರೈತರನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡುವುದರೊಳಗಾಗಿ ಮಹಿಳೆಯರು ಸುಮಾರು 45 ನಿಮಿಷಗಳಲ್ಲಿ ಬಹುತೇಕ ನಾಟಿ ಕೆಲಸವನ್ನು ಮುಗಿಸಿದರು.

ಮಹಿಳೆಯರೊಂದಿಗೆ ಊಟ: ನಾಟಿ ಕೆಲಸ ಮುಗಿದ ನಂತರ ಸ್ಥಳದಲ್ಲೇ ಸಿಎಂ ಕುಮಾರಸ್ವಾಮಿ ಅವರು ಗದ್ದೆ ನಾಟಿಯಲ್ಲಿ ನಿರತರಾಗಿದ್ದ ರೈತರು, ಮಹಿಳೆಯರೊಂದಿಗೆ ಮುದ್ದೆ, ಉಪ್ಸಾರು, ಹುರುಳಿ ಮೊಳಕೆ ಸಾರು, ಅನ್ನ ಊಟ ಮಾಡಿದರಲ್ಲದೆ, ನಾಟಿ ಕೆಲಸ ಮಾಡಿದ ಮಹಿಳೆಯರಿಗೆ ಸೀರೆಗಳನ್ನೂ ವಿತರಿಸಿದರು.

ಕುಮಾರಸ್ವಾಮಿ ದಂಪತಿ ಭಾವಚಿತ್ರ: ಅರಳಕುಪ್ಪೆ ಗ್ರಾಮ ಪಂಚಾಯ್ತಿ ವತಿಯಿಂದ ಕುಮಾರಸ್ವಾಮಿ ಅವರು ನೇಗಿಲು ಹಿಡಿದು ಹೊಲ ಉಳುತ್ತಿರುವ ಮತ್ತು ಪತ್ನಿ ಶ್ರೀಮತಿ ಅನಿತಾ ಅವರು ತಲೆ ಮೇಲೆ ಕುಕ್ಕೆಯಲ್ಲಿ ಊಟ ಹೊತ್ತು ತರುತ್ತಿರುವ ಬೃಹತ್ ಭಾವಚಿತ್ರವನ್ನು ಕಾರ್ಯಕ್ರಮದ ನೆನಪಿನ ಉಡುಗೊರೆಯಾಗಿ ನೀಡಲಾಯಿತು.

ನಿರ್ಮಲಾನಂದ ಸ್ವಾಮೀಜಿ ಸಾಥ್: ಮುಖ್ಯಮಂತ್ರಿ ಭತ್ತದ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದ ಸ್ವಾಮೀಜಿ ಸಹ ಭಾಗವಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು.

ಜನಸಾಗರ: ಈ ವಿಶೇಷ ಕಾರ್ಯಕ್ರಮ ವೀಕ್ಷಿಸಲು ಅರಳಕುಪ್ಪೆ, ಸೀತಾಪುರ, ಹರವು, ಶ್ಯಾದನಹಳ್ಳಿ, ಕ್ಯಾತನಹಳ್ಳಿ, ಕಟ್ಟೇರಿ, ನಾರ್ತ್ ಬ್ಯಾಂಕ್, ಎಲೆಕೆರೆ, ಎಣ್ಣೆಹೊಳೆ ಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಯುವಕರು, ವೃದ್ಧರೆನ್ನದೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಜನ ಬಂದಿದ್ದರಿಂದ ಸ್ಥಳದಲ್ಲಿ ನೂಕು-ನುಗ್ಗಲು ತಡೆಯಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಇದರ ನಡುವೆ ಮುಖ್ಯಮಂತ್ರಿಗಳ ಸನ್ಮಾನಿಸಲು ಜನ ಮುಗಿಬಿದ್ದರು.

ಹಬ್ಬದಂತೆ ಸಿಂಗಾರ: ಮುಖ್ಯಮಂತ್ರಿಗಳು ಭತ್ತದ ನಾಟಿ ಮಾಡಲು ಆಗಮಿಸಿದ್ದರಿಂದ ಅರಳಕುಪ್ಪೆ, ಸೀತಾಪುರ ಗ್ರಾಮದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತಲ್ಲದೆ, ಫ್ಲೆಕ್ಸ್, ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಜಮೀನಿಗೆ ತೆರಳುವ ಮಾರ್ಗದುದ್ದಕ್ಕೂ ಸಿಂಗಾರ ಮಾಡಿ ಟಯರ್ ಗಾಡಿಗಳಿಗೆ ಹಸಿರು, ನೀಲಿ, ಕೆಂಪು ಬಣ್ಣದ ಹೊದಿಕೆ ಹಾಕಿ ಸಿಡಿಎಸ್ ನಾಲಾ ಏರಿ ಮೇಲೆ ಸಾಲಾಗಿ ನಿಲ್ಲಿಸಿದ್ದ ದೃಶ್ಯ ಹಬ್ಬದ ವಾತಾವರಣದಂತಿತ್ತು.

ಸೋಬಾನೆ ಪದದ ಇಂಪು: ಕುಮಾರಸ್ವಾಮಿ ಅವರು ಗದ್ದೆಗಿಳಿದು ನಾಟಿ ಕೆಲಸ ಆರಂಭಿಸುತ್ತಿದ್ದಂತೆಯೇ ಗ್ರಾಮದ ಮಹಿಳೆಯರು ಸೋಬಾನೆ ಪದ ಹಾಡಿ ಕೃಷಿ ಚಟುವಟಿಕೆಗಳ ಹಿಂದಿನ ಸಂಪ್ರದಾಯವನ್ನು ನೆನಪಿಸಿದರು. ಈ ವೇಳೆಯೂ ಜಾನಪದ ಕಲಾ ತಂಡಗಳ ಪ್ರದರ್ಶನ ಮೇಳೈಸಿ, ರೈತರು ಸಂಭ್ರಮಿಸಿದರು.

ಜಮೀನಿಗೆ ಜಿಲ್ಲಾಡಳಿತ: ಈ ಅಪರೂಪದ ಕಾರ್ಯಕ್ರಮವನ್ನು ನಾಡಿನ ದೊರೆಯೇ ನೆರವೇರಿಸಿ ಕೊಟ್ಟಿದ್ದರಿಂದ ಇಡೀ ಮಂಡ್ಯ ಜಿಲ್ಲಾಡಳಿತವೇ ಇಂದು ಸೀತಾಪುರ ಗ್ರಾಮದ ಜಮೀನಿನಲ್ಲಿ ಜಮಾಯಿಸಿತ್ತು. ಕೃಷಿ, ನೀರಾವರಿ, ಜಲಸಂಪನ್ಮೂಲ, ಕಂದಾಯ, ಲೋಕೋಪಯೋಗಿ ಸೇರಿದಂತೆ ಎಲ್ಲಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳ ದಂಡೇ ನೆರೆದಿತ್ತು.

ಡಾಂಬರು ಕಂಡ ರಸ್ತೆ: ಸಿಎಂ ಆಗಮನದ ಹಿನ್ನೆಲೆಯಲ್ಲಿ ಅರಳಕುಪ್ಪೆಯಿಂದ ಸೀತಾಪುರದವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದ್ದು, ಸೀತಾಪುರದಿಂದ ನಾಟಿ ಮಾಡುವ ಗದ್ದೆಗೆ ಹೋಗುವ ಹಳ್ಳಿಗಾಡಿನ ರಸ್ತೆಯ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡುವ ಜೊತೆಗೆ ಸಿಡಿಎಸ್ ನಾಲಾ ಏರಿಯ ರಸ್ತೆಯನ್ನೂ ಮಣ್ಣು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿತ್ತು.

ಭಾರೀ ಭದ್ರತೆ: ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ ನೇತೃತ್ವದಲ್ಲಿ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜು, ಎಎಸ್ಪಿ ಲಾವಣ್ಯ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.

ಸೆಲ್ಫಿ ಕ್ರೇಜ್: ಸಿಎಂ ಕುಮಾರಸ್ವಾಮಿ ಅವರು ನಾಟಿ ಮಾಡುವಾಗ ಹಾಗೂ ಅವರನ್ನು ಕರೆತುವಾಗ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು, ಯುವಕರು ಹಾಗೂ ಮಹಿಳೆಯರು ಮುಗಿ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು.

ಮಳೆಯ ಕೃಪೆ: ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಪಂಚೆ ಎತ್ತಿ ಕಟ್ಟಿ ಕುಮಾರಸ್ವಾಮಿ ಅವರು ಗದ್ದೆಗಿಳಿಯುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಬೆಂಗಾವಲು ಪಡೆ ಕೊಡೆ ಹಿಡಿಯಲೆತ್ನಿಸಿದರಾದರೂ, ಜನಜಂಗುಳಿಯಿಂದಾಗಿ ಅದು ಸಾಧ್ಯವಾಗದ ಕಾರಣ ಸಿಎಂ ಮಳೆಯಲ್ಲೇ ಕೆಲ ಹೊತ್ತು ನಾಟಿ ಹಾಕಿದರು.

ರೈತರ ಮೊಗದಲ್ಲಿ ಸಂತಸ: ನಾಡಿನ ದೊರೆಯೇ ಜಮೀನಿಗಿಳಿದು ಮಹಿಳೆಯರೊಂದಿಗೆ ಭತ್ತದ ನಾಟಿ ಮಾಡಿದ್ದರಿಂದ ರೈತ ಸಮುದಾಯ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಯುವಕರ ಮೊಗದಲ್ಲಿ ಸಂತಸ ಮನೆ ಮಾಡಿತ್ತು.

Translate »