ಭೂ ಪರಿವರ್ತನೆ ಮತ್ತಷ್ಟು ಸರಳ ಆನ್‍ಲೈನ್ ಅರ್ಜಿ ಸಲ್ಲಿಸಿದ 10 ದಿನದಲ್ಲಿ ವಿಲೇವಾರಿ
ಮೈಸೂರು

ಭೂ ಪರಿವರ್ತನೆ ಮತ್ತಷ್ಟು ಸರಳ ಆನ್‍ಲೈನ್ ಅರ್ಜಿ ಸಲ್ಲಿಸಿದ 10 ದಿನದಲ್ಲಿ ವಿಲೇವಾರಿ

September 18, 2018

ಬೆಂಗಳೂರು:  ರಾಜ್ಯದ ನಗರ ಪ್ರದೇಶ ವ್ಯಾಪ್ತಿಯಲ್ಲಿನ ಭೂ ಪರಿವರ್ತನೆ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವಲ್ಲಿ ನಿಯಮದಲ್ಲಿ ಸರಳ ಮತ್ತು ಪಾರದರ್ಶಕತೆ ತಂದಿದೆ.

ಇನ್ನು ಮುಂದೆ ಆಸಕ್ತರು ನಗರ ಪ್ರದೇಶ ವ್ಯಾಪ್ತಿಯಲ್ಲಿ ತಮ್ಮ ಜಮೀನನ್ನು ಕೃಷಿಯಿಂದ ಬೇರೆ ಉದ್ದೇಶಕ್ಕೆ ಬಳಕೆ ಮಾಡಿ ಕೊಳ್ಳಲು ಆನ್‍ಲೈನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಅವರ ಮನವಿ ವಿಲೇವಾರಿಗೊಳ್ಳುತ್ತದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಆಸಕ್ತರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲೇ ಸ್ಥಳೀಯ ನಗರ ಯೋಜನಾ ಇಲಾಖೆಗೂ ರವಾನೆ ಆಗುತ್ತದೆ. ಅರ್ಜಿದಾರರು ತಮಗೆ ಸಂಬಂಧಿಸಿದ ಜಮೀನಿನ ಅರ್ಜಿಗಳನ್ನು ಸಮರ್ಪಕವಾಗಿ ಸಲ್ಲಿಸಿ, ಯಾವ ಉದ್ದೇಶಕ್ಕೆ ಪರಿ ವರ್ತನೆ ಬಯಸಿದ್ದೇವೆ ಎಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಬೇಕು.

ನಿಗಧಿತ ಅವಧಿಯಲ್ಲಿ ಜಿಲ್ಲಾಧಿಕಾರಿ ಗಳು ಅರ್ಜಿ ಪರಿಶೀಲಿಸಿ ಸಮರ್ಪಕವಾಗಿದ್ದರೆ, ಸರ್ಕಾರಕ್ಕೆ ನಿಗಧಿಪಡಿಸುವಷ್ಟು ಹಣ ಪಾವತಿಸಿದರೆ, ಭೂ ಪರಿವರ್ತನೆಗೊಂಡು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯೊಂದಿಗೆ ಪರಿವರ್ತನಾ ಪತ್ರ ಅರ್ಜಿದಾರರ ಮನೆ ಬಾಗಿಲಿಗೆ ಬರುತ್ತದೆ.

ಭೂ ಮಾಲೀಕರು ತಮ್ಮ ಭೂಮಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಭೂ ಪರಿವರ್ತನೆ ಮಾಡಿ ಕೊಳ್ಳಬಹುದು. ಒಂದು ವೇಳೆ ಭೂಮಿಯ ಬಹು ಮಾಲೀಕರು ಇದ್ದ ಸಂದರ್ಭದಲ್ಲಿ ಅಂತಹ ಪ್ರಕರಣಗಳಲ್ಲಿ 11ಎ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
ಪರಿವರ್ತನೆಗೆ ಒಳಪಡುವ ಜಮೀನು ಸ್ಥಳೀಯ ಯೋಜನಾ ಪ್ರದೇಶದ ಒಳಗಿದ್ದು, ಭೂ ಪರಿವರ್ತನೆ ಉದ್ದೇಶವು 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದಡಿ ಸರ್ಕಾರ ಪ್ರಕಟಿಸಿರುವ ಮಾಸ್ಟರ್ ಪ್ಲಾನ್‍ಗೆ ಅನುಗುಣವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಪ್ರಸ್ತಾಪಿತ ಭೂ ಪರಿವರ್ತನೆ ಉದ್ದೇಶವು ಮೇಲ್ಕಂಡ ಅಧಿನಿಯಮದ ಉಪಬಂಧದಡಿ ಪ್ರಕಟಪಡಿ ಸಿದ ಮಾಸ್ಟರ್ ಪ್ಲಾನ್‍ನಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿಯೂ ಇರಬೇಕು ಎಂದು ದೇಶಪಾಂಡೆ ತಿಳಿಸಿದರು. ಮೊದಲು ಅರ್ಜಿದಾರರು 10-15 ನಮೂನೆಯ ಅರ್ಜಿಗಳನ್ನು ಸಲ್ಲಿಸಬೇಕಿತ್ತು. ಇದೀಗ ಸಂಬಂಧಪಟ್ಟ ಜಮೀನಿನ ಸರ್ವೆ ನಂಬರ್ ಹಾಗೂ ಅಗತ್ಯ ವಿವರಗಳನ್ನು ಒಳಗೊಂಡ ಪ್ರಮಾಣಪತ್ರದ ಮನವಿ ಸಲ್ಲಿಸಿದರೆ ಸಾಕು. ಕಂದಾಯ ಭೂಮಿ ಸಾಗುವಳಿ ಮಾಡುತ್ತಿರುವ ಹಿಡುವಳಿದಾರರು ಹಕ್ಕುಪತ್ರ ಪಡೆದುಕೊಳ್ಳಲು ಸರ್ಕಾರ ಮತ್ತೊಮ್ಮೆ ಅವಕಾಶ ಮಾಡಿದೆ ಎಂದು ದೇಶಪಾಂಡೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಜನವರಿ 1, 2014 ರವರೆಗೆ ಕಂದಾಯ ಭೂಮಿಯನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿರುವ ಹಿಡುವಳಿದಾರರಿಗೆ ಆ ಭೂಮಿಯನ್ನು ಸಕ್ರಮಗೊಳಿಸಲಾಗುವುದು. ಇದಕ್ಕಾಗಿ ನಿಗದಿತ ಅರ್ಜಿ 57ರಡಿ ಪೂರ್ಣ ದಾಖಲೆಗಳನ್ನು ಸಲ್ಲಿಸಿದರೆ ಒಬ್ಬ ವ್ಯಕ್ತಿಗೆ ಐದು ಎಕರೆಗೆ ಮೀರದಂತೆ ಜಮೀನಿನ ಒಡೆತನದ ಹಕ್ಕು ನೀಡಲಾಗುವುದು. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಾಗಲಿ ಅಥವಾ ಎಸ್‍ಇಝೆಡ್ ವ್ಯಾಪ್ತಿಯ ಭೂಮಿಯನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Translate »