ಮಂಕಾದ ಮುಂಗಾರು: 87 ತಾಲೂಕಲ್ಲಿ ಬರ ಭೀತಿ
ಮೈಸೂರು

ಮಂಕಾದ ಮುಂಗಾರು: 87 ತಾಲೂಕಲ್ಲಿ ಬರ ಭೀತಿ

August 8, 2018
  •  ಇನ್ನೆರಡು ವಾರದಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಬೆಳೆ ಹಾಳು
  • ಕಡಿಮೆ ನೀರು ಬೇಕಾಗುವ ಬೆಳೆ ಮೊರೆ ಹೋಗಲು ಸೂಚನೆ
  • ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳೊಂದಿಗೆ ಸಭೆ, ಚರ್ಚೆ

ಬೆಂಗಳೂರು: ಮುಂಗಾರು ಮಳೆಯ ಆರ್ಭಟಕ್ಕೆ ರಾಜ್ಯದ ಎಲ್ಲಾ ಜಲಾಶಯ ಗಳು ಭರ್ತಿಯಾಗಿವೆ. ಆದರೆ, ಜಲಾನಯನ ಹೊರತುಪಡಿಸಿ, ಉಳಿದ ಭಾಗ ಬರದ ಸುಳಿಗೆ ಸಿಲುಕುವ ಆತಂಕವಿದೆ. ಇನ್ನೆರಡು ವಾರಗಳಲ್ಲಿ ಮಳೆ ಬೀಳದಿದ್ದರೆ, ಲಕ್ಷಾಂತರ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿರುವ ಬೆಳೆ ನಾಶವಾಗುವು ದಲ್ಲದೆ, 13 ಜಿಲ್ಲೆಗಳ 87 ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಲಿವೆ.

ಇಷ್ಟಾದರೂ, ರಾಜ್ಯದ 180 ಹಳ್ಳಿಗಳನ್ನು ಹೊರತು ಪಡಿಸಿದರೆ, ಯಾವ ಗ್ರಾಮೀಣ ಪ್ರದೇಶದಲ್ಲೂ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಮಳೆ ಬೀಳದಿದ್ದರೆ, ರಾಜ್ಯದ ಬಹುತೇಕ ಭಾಗ ಬರಕ್ಕೆ ತುತ್ತಾಗುತ್ತದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಇಂದಿಲ್ಲಿ ಪ್ರಕಟಿಸಿದ್ದಾರೆ.

ಮಳೆ ಇಲ್ಲದೆ, ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಕಡಿಮೆ ನೀರು ಬೇಕಾಗುವರಾಗಿ, ಜೋಳ ಸೇರಿ ದಂತೆ ಕೆಲವು ಬೆಳೆಯನ್ನು ರೈತರು ಬೆಳೆಯಲು ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಔಷಧಿಗಳನ್ನು ಶೇಖರಿಸಿಕೊಳ್ಳುವಂತೆ ಆದೇಶಿಸಲಾಗಿದೆ.

ಕೃಷಿ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟ ಗಾರಿಕೆ ಇಲಾಖೆಗಳು ಜಂಟಿಯಾಗಿ ಸಮನ್ವಯ ಸಾಧಿಸಿಕೊಂಡು ಕಡಿಮೆ ಅವಧಿಯಲ್ಲಿ ರೈತರು ಬೆಳೆ ತೆಗೆಯಲು ಅವಶ್ಯ ಸೌಲಭ್ಯಗಳನ್ನು ಕಲ್ಪಿಸು ವಂತೆ ಸರ್ಕಾರ ಸೂಚಿಸಿದೆ ಎಂದರು. ಮಳೆ ಹಾನಿ ಪರಿಹಾರ ಕ್ರಮಗಳಿಗೆ ವಿತರಿಸಲೆಂದು ಜಿಲ್ಲಾಧಿಕಾರಿ ಗಳ ಖಾತೆಗೆ ನೀಡಲಾಗಿರುವ 217 ಕೋಟಿ ರೂ. ಗಳನ್ನು ಬರ ಪರಿಹಾರ ಕಾಮಗಾರಿಗಳಿಗೆ ಬಳಸಿ ಕೊಳ್ಳುವಂತೆ ಆದೇಶಿಸಲಾಗಿದೆ. ಪರಿಹಾರಕ್ಕೆ ಹಣದ ಕೊರತೆ ಎಂದು ಯಾವುದೇ ಜಿಲ್ಲೆಗಳಿಂದ ಬೇಡಿಕೆ ಬಂದರೆ, ತಕ್ಷಣವೇ ಅಗತ್ಯ ಹಣವನ್ನು ಬಿಡುಗಡೆ ಮಾಡುವುದಾಗಿ ದೇಶಪಾಂಡೆ ತಿಳಿಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಲ ಸಂರಕ್ಷಣಾ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿಸಲು ಇದೇ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಬಿದ್ದ ಭಾರೀ ಮುಂಗಾರು ಮಳೆ ಇಡೀ ರಾಜ್ಯವನ್ನು ವ್ಯಾಪಿಸಿತು. ಜೂನ್ 10 ರ ಹೊತ್ತಿಗೆ ರಾಜ್ಯದ ಶೇ 93 ರಷ್ಟು ಪ್ರದೇಶ ನೀರಿನ ಕೊರತೆ ನೀಗಿಸಿತ್ತು. ಆದರೆ ನಂತರ ರಾಜ್ಯದ ಘಟ್ಟ ಮತ್ತು ಕರಾವಳಿ ಭಾಗಗಳ ಹೊರತುಪಡಿಸಿದರೆ, ಉಳಿದ ಭಾಗ ಮಳೆ ಕೊರತೆ ಎದುರಿಸುತ್ತಿದೆ.

ಸದ್ಯದ ಮಟ್ಟಿಗೆ ಶೇ. 3 ರಷ್ಟು ಮಳೆ ಕೊರತೆ ಉಂಟಾಗಿದೆ. ಮುಂದಿನ ಒಂದೆರಡು ವಾರದಲ್ಲಿ ವರುಣ ಕೃಪೆ ತೋರದಿದ್ದರೆ, ಬಿತ್ತನೆಗೊಂಡ 8.61 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಒಣಗಲಿದೆ. ಜಲಾಶಯಗಳಲ್ಲಿ ನೀರು ಭರ್ತಿಯಾಗಿರುವುದರಿಂದ 19.12 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಯಾಗುವುದಿಲ್ಲ. ಇದಕ್ಕಾಗಿ ಒಂದು ಬೆಳೆಗೆ ಅಗತ್ಯವಾದ ನೀರನ್ನು ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ವಾರ ಅಭಿವೃದ್ಧಿ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಮಾಹಿತಿ ಪಡೆಯುತ್ತಾರೆ. ಅಗತ್ಯ ಕಂಡು ಬಂದಲ್ಲಿ ತಕ್ಷಣವೇ ಸರ್ಕಾರದ ವತಿಯಿಂದ ಸಂಬಂಧಪಟ್ಟ ಜಿಲ್ಲೆಗಳಿಗೆ ನೆರವು ನೀಡಲಿದೆ ಎಂದರು. ಜಿಲ್ಲಾಧಿಕಾರಿಗಳು ಕೂಡ ಪ್ರತಿವಾರ ಸಭೆ ನಡೆಸಿ, ಮಳೆ ಪರಿಸ್ಥಿತಿ ಅವಲೋಕನ ಮಾಡಿ, ಕುಡಿಯುವ ನೀರು ಮತ್ತು ರೈತರಿಗೆ ಅಗತ್ಯ ನೆರವು ಮತ್ತು ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇಡೀ ರಾಜ್ಯಾದ್ಯಂತ ಭೂದಾಖಲೆ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಅವರ ಆಸ್ತಿಯ ಒಡೆತನ ಮತ್ತು ಆ ಭೂಮಿಯಲ್ಲಿ ಇರುವ ಬೆಳೆ ಇತರ ಸಂಪತ್ತಿನ ಬಗ್ಗೆ ಆಧಾರ್ ಮಾದರಿಯಲ್ಲಿ ಕಾರ್ಡ್‍ಗಳನ್ನು ವಿತರಿಸುವುದಾಗಿ ಹೇಳಿದರು.

ಈಗಾಗಲೇ ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿದ್ದು, ಅದು ಯಶಸ್ವಿ ಕಂಡಿದೆ. ಇದೀಗ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಯಲ್ಲಿ ಭೂಮಿ ಸರ್ವೇ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

Translate »