ತ್ರಿಕೋನ ಪ್ರೇಮ ಪ್ರಕರಣದಲ್ಲಿ ಹತ್ಯೆ
ಮೈಸೂರು

ತ್ರಿಕೋನ ಪ್ರೇಮ ಪ್ರಕರಣದಲ್ಲಿ ಹತ್ಯೆ

September 18, 2018

ಹುಣಸೂರು: ಯುವಕನೊಬ್ಬನ ನಿಗೂಢ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಹುಣಸೂರು ಪೊಲೀಸರು ಯಶಸ್ವಿಯಾಗಿದ್ದು, ಇದರೊಂದಿಗೆ ತ್ರಿಕೋನ ಪ್ರೇಮ ಪ್ರಕರಣವೇ ಹತ್ಯೆಗೆ ಕಾರಣ ವೆಂಬುದೂ ಬೆಳಕಿಗೆ ಬಂದಿದೆ.

ತಾಲೂಕಿನ ಜಾಬಗೆರೆ ಗ್ರಾಮದ ನೀಲನಾಯ್ಕ ಅವರ ಪುತ್ರ ರಮೇಶ ನಾಯಕ(22)ನ ನಿಗೂಢ ಹತ್ಯೆ ಪ್ರಕರಣವನ್ನು ಭೇದಿಸಿದ್ದು, ಮೋದೂರು ಗ್ರಾಮದ ರಮೇಶ್ ಅವರ ಪುತ್ರ ಪುಟ್ಟನಾಯಕ ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಓರ್ವ ಯುವತಿಯನ್ನು, ಹತ್ಯೆಯಾದ ರಮೇಶ ನಾಯಕ ಹಾಗೂ ಕೊಲೆಗಾರ ಪುಟ್ಟನಾಯಕ ಇಬ್ಬರೂ ಪ್ರೇಮಿಸುತ್ತಿದ್ದರು ಎನ್ನಲಾಗಿದ್ದು, ಈ ತ್ರಿಕೋನ ಪ್ರೇಮ ಪ್ರಕರಣ ಹತ್ಯೆಯಲ್ಲಿ ಅಂತ್ಯವಾದಂತಾಗಿದೆ.

ನಾಪತ್ತೆಯಲ್ಲ ಹತ್ಯೆ: ಕಳೆದ ಮೇ 13ರಂದು ಎಲ್ಲಿಗೋ ಹೋಗಿ ಬರುತ್ತೇನೆಂದು ಮನೆಯವರಿಗೆ ತಿಳಿಸಿ, ತನ್ನ ಬೈಕ್(ಕೆಎ-45, ಅರ್-8857)ನಲ್ಲಿ ತೆರಳಿದ್ದ ರಮೇಶ ನಾಯಕ, ಅಂದಿನಿಂದ ನಾಪತ್ತೆಯಾಗಿದ್ದ. ಕೆಲ ದಿನಗಳ ಕಾಲ ಹುಡುಕಾಟ ನಡೆಸಿದ್ದ ಮನೆಯವರು, ಹುಣಸೂರು ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಲ್ಲಾ ಕಡೆಗೆ ಮಾಹಿತಿ ರವಾನಿಸಿ, ರಮೇಶ ನಾಯಕನ ಪತ್ತೆಗೆ ಕ್ರಮ ಕೈಗೊಂಡಿದ್ದರು. ಈ ನಡುವೆ ಕೇರಳದ ಮಾನಂದವಾಡಿ ರಸ್ತೆಯಲ್ಲಿ ಕಾರೊಂದು ಅಪಘಾತ ವಾಗಿದ್ದ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ, ಅನತಿ ದೂರದ ಹಳ್ಳದಲ್ಲಿ ಬೈಕ್ ಬಿದ್ದಿರುವುದು ತಿಳಿಯಿತು.

ಬೈಕ್ ನೋಂದಣಿ ಸಂಖ್ಯೆ ಆಧಾರದಲ್ಲಿ ಹುಣಸೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದಾವಿಸಿದ ಹುಣಸೂರು ಪೊಲೀಸರು, ಬೈಕ್ ಮಾಲೀಕನನ್ನು ಪತ್ತೆ ಹಚ್ಚಿದರು. ನಾಪತ್ತೆಯಾಗಿರುವ ಯುವಕ ರಮೇಶ ನಾಯಕ ತೆರಳಿದ್ದು, ಇದೇ ಬೈಕ್‍ನಲ್ಲಿ ಎಂಬುದನ್ನು ಖಚಿತಪಡಿಸಿಕೊಂಡು, ತನಿಖೆಯನ್ನು ತೀವ್ರಗೊಳಿಸಿದರು. ನಾಪತ್ತೆಯಾದ ದಿನದಂದು ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನೊಬ್ಬನ ಜೊತೆ ತೆರಳಿದ್ದಾಗಿ ತಿಳಿದು ಬಂದಿತು. ಕೂಡಲೇ ಆ ಹುಡುಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದ.

ಕೊಡಗಿನಲ್ಲಿ ಹತ್ಯೆ: ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಯುವತಿಯನ್ನು ರಮೇಶ್‍ನಾಯಕ ಪ್ರೀತಿಸುತ್ತಿದ್ದ. ಅದೇ ಯುವತಿಯನ್ನು ಕೊಡಗಿನ ಕಕ್ಕಬ್ಬೆಯಲ್ಲಿ ಹೀರೋ ಹೋಂಡಾ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದ ಮೋದೂರಿನ ಪುಟ್ಟನಾಯಕನೂ ಪ್ರೇಮಿಸುತ್ತಿದ್ದ. ಆ ಯುವತಿ ಹಾಗೂ ರಮೇಶನಾಯಕನ ಪ್ರೀತಿ ಬಗ್ಗೆ ಸ್ನೇಹಿತರಿಂದ ಮಾಹಿತಿ ಪಡೆಯುತ್ತಿದ್ದ ಪುಟ್ಟನಾಯ್ಕ, ಕೆಟ್ಟ ನಿರ್ಧಾರಕ್ಕೆ ಬಂದಿದ್ದ. ರಮೇಶ್‍ನನ್ನು ಕೊಲೆ ಮಾಡಿದರೆ ನನ್ನ ಪ್ರೇಮ ಪಯಣಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಭಾವಿಸಿ, ಅದಕ್ಕೆ ಸಂಚು ರೂಪಿಸಿದ್ದ. ಅದರಂತೆ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತನ ಸಹಾಯ ಪಡೆದು, ರಮೇಶ ನಾಯಕನನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ. ಪುಟ್ಟನಾಯ್ಕ ಹೇಳಿಕೊಟ್ಟಂತೆ ನಿನ್ನ ಹುಡ್ಗಿ ಕೊಡಗಿನಲ್ಲಿದ್ದಾಳೆ. ನಿನ್ನ ಜೊತೆ ಮಾತನಾಡಬೇಕಂತೆ. ಕೂಡಲೇ ಬರಬೇಕಂತೆ ಎಂದು ಹೇಳಿ ರಮೇಶನಾಯನನ್ನು ಕೊಡಗಿಗೆ ಕರೆದುಕೊಂಡು ಹೋಗಿ ಪುಟ್ಟನಾಯ್ಕನನ್ನು ಪರಿಚಯಿಸಿದ್ದ. ಬಳಿಕ ಪುಟ್ಟನಾಯ್ಕ, ರಮೇಶನಾಯಕ ನನ್ನು ದೇವರಕಾಡು ಸಮೀಪದಲ್ಲಿರುವ ಕೇರಳ ಮೂಲದವರ ಕಾಫಿ ತೋಟಕ್ಕೆ ಕರೆದುಕೊಂಡು ಹೋಗಿ ತನ್ನ ಪ್ರೀತಿಯ ವಿಚಾರವನ್ನು ಹೇಳಿದ್ದಾನೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ವಿಕೋಪಕ್ಕೆ ತಿರುಗಿದೆ. ಪುಟ್ಟನಾಯ್ಕ, ಯಾವುದೋ ವಸ್ತುವಿನಿಂದ ರಮೇಶನಾಯಕನಿಗೆ ಹೊಡೆದು ಹತ್ಯೆ ಮಾಡಿದ. ಬಳಿಕ ರಮೇಶನಾಯಕನ ಬೈಕ್ ಅನ್ನು, ಮಾನಂದವಾಡಿ ರಸ್ತೆಯ ಒಂದು ಹಳ್ಳಕ್ಕೆ ಬಿಸಾಡಿ, ಪರಾರಿಯಾಗಿದ್ದರು. ಪೆಟ್ರೋಲ್ ಬಂಕ್ ಹುಡುಗ ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೊಳೆತಿದ್ದ ಮೃತದೇಹವನ್ನು ಪತ್ತೆ ಹಚ್ಚಿದ ಪೊಲೀಸರು, ಆತನ ಬಟ್ಟೆಯನ್ನು ಪೋಷಕರಿಗೆ ತೋರಿಸಿದರು. ಇದರ ಆದಾರದಲ್ಲಿ ನಾಪತ್ತೆಯಾಗಿದ್ದ ರಮೇಶನಾಯಕ ಕೊಲೆಯಾಗಿರುವುದು ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಕೊಲೆ ಆರೋಪಿಗಳಾದ ಪುಟ್ಟನಾಯ್ಕ ಹಾಗೂ ಬಾಲಕನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶ ನದಂತೆ ಸರ್ಕಲ್ ಇನ್ಸ್‍ಪೆಕ್ಟರ್ ಪೂವಯ್ಯ ನೇತೃತ್ವದ ತಂಡ ನಿಗೂಢ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಸಿಬ್ಬಂದಿ ಹರೀಶ್, ರಮೇಶ್, ಯೋಗೀಶ್, ಮಹದೇವಸ್ವಾಮಿ, ಪ್ರಸಾದ್, ಲಿಂಗರಾಜಪ್ಪ, ರಾಜೇಗೌಡ, ಮೋಹನ್, ನಾಗೇಶ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »