ಮೈಸೂರು: ಸೋಮವಾರ ನಿಧನರಾದ ಧರ್ಮಗುರು ಫಾದರ್ ಡೆನಿಸ್ ವಿಕ್ಟರ್ ನರೋನ್ಹ ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಿಗ್ಗೆ ಮೈಸೂರಿನ ಗಾಂಧಿನಗರದ ಮಹದೇವಪುರ ರಸ್ತೆಯಲ್ಲಿರುವ ಕ್ಯಾಥೋಲಿಕ ಸಿಮೆಟ್ರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಅಗಲಿದ ಧರ್ಮಗುರು ಫಾ. ನರೋನ್ಹ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಫಾ.ನರೋನ್ಹ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಿಲೇನಿಯಂ ಸರ್ಕಲ್‍ನಲ್ಲಿರುವ ಸೆಂಟ್ ಮೆರೀಸ್ ಸಭಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಕೊಡಗು, ಸೋಮವಾರಪೇಟೆ, ಮಂಡ್ಯ, ಚಾಮರಾಜನಗರ, ಮೈಸೂರು ಹಾಗೂ ಸುತ್ತಮುತ್ತಲಿನಿಂದ ನೂರಾರು ಮಂದಿ ಆಗಮಿಸಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಪಾರ್ಥಿವ ಶರೀರವನ್ನು ಅಶೋಕ ರಸ್ತೆಯಲ್ಲಿರುವ ಸೆಂಟ್ ಫಿಲೋಮಿನಾಸ್ ಚರ್ಚ್‍ಗೆ ಕೊಂಡೊಯ್ದು, ಮೈಸೂರು ಬಿಷಪ್ ರೆವರೆಂಡ್ ಫಾದರ್ ಕೆ.ಎ.ವಿಲಿಯಂ ಅವರಿಂದ ಪ್ರಾರ್ಥನೆ ಸಲ್ಲಿಸಲಾಯಿತು.