ಫಾ. ನರೋನ್ಹ ಇನ್ನಿಲ್ಲ
ಮೈಸೂರು

ಫಾ. ನರೋನ್ಹ ಇನ್ನಿಲ್ಲ

July 17, 2018
  • ಇಂದು ಸೆಂಟ್ ಜೋಸೆಫ್ ಕ್ಯಾಥಡ್ರಲ್‍ನಲ್ಲಿ ಅಂತ್ಯಕ್ರಿಯೆ
  • ಬನ್ನಿಮಂಟಪದ ಸೆಂಟ್ ಮೆರೀಸ್ ಸಭಾಂಗಣದಲ್ಲಿ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ

ಮೈಸೂರು:  ಮೈಸೂರು ಡಯಾಸಿಸ್‍ನ ಹೆಸರಾಂತ ಕ್ಯಾಥೋಲಿಕ್ ಧರ್ಮಗುರು ರೆವರೆಂಡ್ ಫಾದರ್ ಡೆನಿಸ್ ವಿ.ನರೋನ್ಹ(86) ಅವರು ಇಂದು ಬೆಳಿಗ್ಗೆ ಮೈಸೂರಿನ ಬನ್ನಿಮಂಟಪದ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ನಿಧನರಾದರು.

ಬನ್ನಿಮಂಟಪದ ಧರ್ಮಗುರುಗಳ ರಿಟೈರ್‍ಮೆಂಟ್ ಹೋಂ ‘ಪ್ರಶಾಂತ ನಿಲಯ’ ದಲ್ಲಿ ಪ್ರಸ್ತುತ ಫಾದರ್ ನರೋನ್ಹ ಅವರು ವಾಸವಾಗಿದ್ದರು. ಮೈಸೂರು ಡಯಾಸಿಸ್ ಎಜುಕೇಷನ್ ಸೊಸೈಟಿ (MDES) ಮಾಜಿ ಕಾರ್ಯದರ್ಶಿ ಹಾಗೂ ಸೇಂಟ್ ಫಿಲೋಮಿನಾ ಚರ್ಚ್ ಫ್ಯಾರಿಸ್ ಪ್ರೀನ್ಸ್ ಆಗಿ 7 ವರ್ಷ ಸೇವೆ ಸಲ್ಲಿಸಿದ್ದ ಫಾ. ನರೋನ್ಹ ಅವರಿಗೆ ಬ್ರೇನ್ ಎಮರೇಜ್ ಆದ ಕಾರಣ ಭಾನುವಾರ ಬೆಳಿಗ್ಗೆ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 11.39ರಲ್ಲಿ ಕೊನೆಯು ಸಿರೆಳೆದರು ಎಂದು ಸೆಂಟ್ ಜೋಸೆಫ್ ಆಸ್ಪತ್ರೆ ನಿರ್ದೇಶಕ ಫಾ.ಲೆಸ್ಲಿ ಮೊರಾಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರಿನ ಗಾಂಧಿನಗರದಲ್ಲಿರುವ ಸೆಂಟ್ ಜೋಸೆಫ್ ಕ್ಯಾಥಡ್ರಲ್‍ನಲ್ಲಿ ಮಂಗಳ ವಾರ ಬೆಳಿಗ್ಗೆ 10.30ಕ್ಕೆ ಫಾ.ನರೋನ್ಹ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರ ದರ್ಶನ ಕ್ಕಾಗಿ ಫಾದರ್ ನರೋನ್ಹ ಅವರ ಪಾರ್ಥಿವ ಶರೀರವನ್ನು ಬನ್ನಿ ಮಂಟಪದ ಎಲ್‍ಐಸಿ ಸರ್ಕಲ್ (ಮಿಲೇನಿಯಂ ಸರ್ಕಲ್)ನಲ್ಲಿ ರುವ ಸೆಂಟ್ ಮೇರಿಸ್
ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 8.30ರವರೆಗೆ ಇರಿಸಲಾಗುವುದು. ನಂತರ ಅಶೋಕ ರಸ್ತೆಯಲ್ಲಿರುವ ಸೆಂಟ್‍ಫಿಲೋಮಿನಾ ಚರ್ಚೆಗೆ ಕೊಂಡೊಯ್ದು ಸಾಮೂಹಿಕ ನಮನ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು.

ಬಿಷಪ್ ಸಂತಾಪ: ಫಾದರ್ ಡೆನಿಸ್ ವಿ.ನರೋನ್ಹ ಅವರ ನಿಧನಕ್ಕೆ ಮೈಸೂರು ಬಿಷಪ್ ರೆವರೆಂಡ್ ಫಾದರ್ ಕೆ.ಎ.ವಿಲಿಯಂ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಫಾ.ನರೋನ್ಹ ಅವರು ಮೈಸೂರು ಡಯಾಸಿಸ್‍ಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಡಯಾಸಿಸ್‍ನ ಚರ್ಚ್ ಆಸ್ತಿ ಖರೀದಿ, ಹಲವು ಚರ್ಚ್‍ಗಳ ನಿರ್ಮಾಣಗಳಲ್ಲೂ ಅವರ ಪಾತ್ರ ಅನನ್ಯ ಎಂದು ಫಾ.ವಿಲಿಯಂ ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ. ಮೈಸೂರು ಡಯಾಸಿಸ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿಯಾಗಿ ಹಲವು ಸ್ಥಳಗಳಲ್ಲಿ ಶಾಲಾ-ಕಾಲೇಜುಗಳನ್ನು ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಬಡವರಿಗೆ ಶಿಕ್ಷಣ ನೀಡುವಲ್ಲಿ ವಿಶೇಷ ಪಾತ್ರ ವಹಿಸಿದ್ದರು ಎಂದು ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಡಯಾಸಿಸ್‍ನ ಹಲವು ಆಡಳಿತಾತ್ಮಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಫಾದರ್ ನರೋನ್ಹ ಅವರು ಸಮಾಜದ ಜನಸಾಮಾನ್ಯರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದರು. ಅವರ ನಿಧನದಿಂದ ಮೈಸೂರು ಡಯಾಸಿಸ್‍ಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫಾ.ವಿಲಿಯಂ ಪ್ರಾರ್ಥಿಸಿದ್ದಾರೆ.

Translate »