ಶ್ರೀರಂಗಪಟ್ಟಣ: ಪಕ್ಷಿ ಸಂಕುಲದ ಸುರಕ್ಷಿತ ತಾಣ, ವಿದೇಶಿ ಪಕ್ಷಿಗಳ ಸಂತಾನೋತ್ಪತ್ತಿ ದ್ವೀಪ ರಂಗನತಿಟ್ಟು, ಉಕ್ಕಿ ಹರಿಯುತ್ತಿರುವ ಕಾವೇರಿ ನೀರಿನಿಂದ ಮುಳುಗಡೆಯಾಗಿದ್ದು, ಅಪಾರ ಸಂಖ್ಯೆಯ ಪಕ್ಷಿಗಳು ಕೊಚ್ಚಿ ಹೋಗಿರುವ ಆತಂಕ ವ್ಯಕ್ತವಾಗಿದೆ.
ಕೆಆರ್‌ಎಸ್ ಜಲಾಶಯದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣ ದಲ್ಲಿ ನೀರನ್ನು ಕಾವೇರಿ ನದಿಗೆ ಬಿಡ ಲಾಗುತ್ತಿತ್ತಾದರೂ ರಂಗನತಿಟ್ಟು ಪಕ್ಷಿ ಧಾಮದ ಪಕ್ಷಿ ಸಂಕುಲಕ್ಕೆ ಯಾವುದೇ ಅಪಾಯವಾಗಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್ ವ್ಯವಸ್ಥೆ ನಿಷೇಧಿಸಲಾಗಿತ್ತು.
ಆದರೆ ಕಳೆದ ರಾತ್ರಿಯಿಂದ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣ ದಲ್ಲಿ ನೀರು ಬಿಡುತ್ತಿರುವುದರಿಂದ ರಂಗನ ತಿಟ್ಟು ಪಕ್ಷಿಧಾಮದಲ್ಲಿರುವ ದ್ವೀಪಗಳು ಬಹುಪಾಲು ಮುಳುಗಿವೆ. ದ್ವೀಪದಲ್ಲಿರುವ ಮರಗಳು ಹಾಗೂ ಕಲ್ಲುಬಂಡೆಯ ಕೆಳಗೆ ಗೂಡು ಕಟ್ಟಿಕೊಂಡು ನೆಲೆಸಿದ್ದ ಪಕ್ಷಿಗಳು, ಅವುಗಳ ಮೊಟ್ಟೆ, ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಲ್ಲದೆ ಅಲ್ಲಿನ ಮರಗಳು ಅರ್ಧ ಭಾಗ ನೀರಿನಲ್ಲಿ ಮುಳುಗಿ ರುವುದರಿಂದ ಕೊಂಬೆಗಳಲ್ಲಿದ್ದ ಗೂಡುಗಳು ನೀರಿನಲ್ಲಿ ತೇಲಿ ಹೋಗಿವೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿದ್ದ ಪಕ್ಷಿ ಸಂಕುಲ ನಲುಗು ವಂತಾಗಿದೆ.
ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ,ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿರುವ ಪಕ್ಷಿ ಸಂಕುಲಕ್ಕೆ ಆಗಿರುವ ಹಾನಿಯ ಪ್ರಮಾಣ ಅಂದಾಜಿಸಲು ಸಾಧ್ಯವಿಲ್ಲ. ಇಲ್ಲಿನ ಹಲವು ದ್ವೀಪಗಳಲ್ಲಿದ್ದ ಪಕ್ಷಿಗಳು ಏನಾಗಿವೆ ಎಂಬುದು ನೀರು ಕಡಿಮೆಯಾದ ನಂತರವಷ್ಟೇ ಗೊತ್ತಾಗಲಿದೆ.
ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರು ನದಿಯ ದಡದತ್ತ ಹೋಗದಂತೆ ತಡೆಗಟ್ಟುವುದಕ್ಕಾಗಿ ಬ್ಯಾರಿಕೇಡ್ ಹಾಗೂ ಟೇಪ್ ಕಟ್ಟಲಾಗಿದೆ. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.