ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್‍ಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ!
ಮೈಸೂರು

ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್‍ಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ!

July 17, 2018

ನವದೆಹಲಿ: “ಮುಖ್ಯಮಂತ್ರಿಯಾದರೂ ಸಂತೋಷ ವಾಗಿಲ್ಲ” ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಕಣ್ಣೀರಿಟ್ಟಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಕುಮಾರ ಸ್ವಾಮಿ ಅವರನ್ನು ಖಿನ್ನತೆಗೆ ದೂಡಿದೆ ಎಂದು ಆರೋಪಿಸಿರುವ ಅರುಣ್ ಜೇಟ್ಲಿ, ಕೇವಲ ಮೋದಿಯನ್ನು ಅಧಿಕಾರ ದಿಂದ ದೂರವಿಡುವುದಕ್ಕಾಗಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಕಾಂಗ್ರೆಸ್ ಅವಕಾಶವಾದಿತನದ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದು ನಮಗೆಲ್ಲಾ ಗೊತ್ತೇ ಇದೆ. ಕುಮಾರ ಸ್ವಾಮಿ ಅವರು ಕಣ್ಣೀರಿಟ್ಟಿದ್ದು, ನಮಗೆ ಹಳೆಯ ಹಿಂದಿ ಸಿನಿಮಾಗಳ ದಿನಗಳನ್ನು ನೆನಪಿಸುತ್ತವೆ ಎಂದು ಜೇಟ್ಲಿ ಹೇಳಿದ್ದಾರೆ. ಅವಕಾಶ ವಾದಿತನದ ಮೈತ್ರಿ ಎಂದಿಗೂ ವಿರೋಧಾಭಾಸದಿಂದಲೇ ಕೂಡಿ ರುತ್ತದೆ ಎಂದಿರುವ ಜೇಟ್ಲಿ, ಈ ಹಿಂದೆಯೂ ಕಾಂಗ್ರೆಸ್ ಪಕ್ಷ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರ ಸರ್ಕಾರಕ್ಕೆ ಬೆಂಬಲ ನೀಡಿತ್ತು, ಆದರೆ ಅವರಿಗೂ ಕಿರುಕುಳ ನೀಡಿತ್ತು, ದೇವೇಗೌಡರಿಗೆ ಮಾಡಿದ್ದನ್ನೇ ಕಾಂಗ್ರೆಸ್ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಈ ಅವಕಾಶವಾದಿ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದೇ ಆದರೆ ಆ ಮೈತ್ರಿಕೂಟದ ಪ್ರಧಾನಿ ಕ್ಯಾಮರಾ ಮುಂದೆ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾದರೆ ಅದು ಯುಪಿಎ-2 ಕ್ಕಿಂತಲೂ ಕೆಟ್ಟ ದ್ದಾಗಿರುತ್ತದೆ ಎಂದು ಜೇಟ್ಲಿ ಎಚ್ಚರಿಸಿದ್ದಾರೆ.

 

Translate »