ಮೈಸೂರಲ್ಲಿ ಬೀದಿ ದೀಪಗಳಿಗೆ  ಎಲ್‍ಇಡಿ ಬಲ್ಬ್ ಅಳವಡಿಕೆ ಚಿಂತನೆ
ಮೈಸೂರು

ಮೈಸೂರಲ್ಲಿ ಬೀದಿ ದೀಪಗಳಿಗೆ  ಎಲ್‍ಇಡಿ ಬಲ್ಬ್ ಅಳವಡಿಕೆ ಚಿಂತನೆ

July 6, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್‍ಗಳ ಅಳವಡಿಸುವ ಸಂಬಂಧ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ದಿನಗಳಲ್ಲಿ ಬೆಳದಿಂಗಳಂತಹ ಬೆಳಕಿನಲ್ಲಿ ನಗರದ ರಸ್ತೆಗಳು ಕಂಗೊಳಿಸುವುದು ಮಾತ್ರವಲ್ಲ, ವಿದ್ಯುಚ್ಛಕ್ತಿಯ ಉಳಿತಾಯದೊಂದಿಗೆ ಆರ್ಥಿಕ ಹೊರೆಯೂ ತಗ್ಗಲಿದೆ. ಸದ್ಯ ನಗರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಕಂಬಗಳಲ್ಲಿ ಒಟ್ಟು 61,501 ವಿವಿಧ ಬಗೆಯ ಬಲ್ಬ್‍ಗಳನ್ನು ಅಳವಡಿಸಲಾಗಿದೆ. ಈ ಪೈಕಿ 8432 ಎಲ್‍ಇಡಿ ಬಲ್ಬ್‍ಗಳು ಇದ್ದು, 22184 ಟ್ಯೂಬ್‍ಲೈಟ್‍ಗಳು, 28577 ಸೋಡಿಯಂ ಲೈಟ್‍ಗಳು, 2308 ಮೆಟಲ್ ಹಲೈಡ್ ಬಲ್ಬ್‍ಗಳು ಇವೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲಿಕೆ ಇಇ (ವಿದ್ಯುತ್) ಲಕ್ಷ್ಮಣೇಗೌಡ ಸದರಿ ವಿಷಯ ಪ್ರಸ್ತಾಪಿಸಿ ಈ ವಿವರಗಳನ್ನು ನೀಡಿದರು.

ಪಾಲಿಕೆ ಮೂಲಗಳ ಪ್ರಕಾರ ಬೀದಿ ದೀಪಗಳ ತಿಂಗಳ ವಿದ್ಯುತ್ ಶುಲ್ಕ ಸುಮಾರು ಒಂದೂವರೆ ಕೋಟಿ ರೂ. ಮುಟ್ಟುತ್ತಿದೆ. ಪೌರಾಡಳಿತ ನಿರ್ದೇಶನಾಲಯದ ಅನುಮೋದನೆ ದೊರೆತ ಬಳಿಕ ಎಲ್‍ಇಡಿ ಬಲ್ಬ್‍ಗಳ ಅಳವಡಿಕೆಯಿಂದ ಆಗುವ ವಿದ್ಯುತ್ ಉಳಿತಾಯ ಹಾಗೂ ವಿದ್ಯುತ್ ಶುಲ್ಕದ ಪ್ರಮಾಣಗಳ ಬಗ್ಗೆ ತುಲನೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಇದು ಪ್ರಯೋಜನಕಾರಿ ಎಂದು ವರದಿ ಸ್ಪಷ್ಟಪಡಿಸಿದರೆ, ಯೋಜನೆ ಅನುಷ್ಠಾನದ ಪ್ರಕ್ರಿಯೆ ಕೈಗೆತ್ತುಕೊಳ್ಳಲಾಗುತ್ತಿದೆ.

Translate »