ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದನ್ನು ತಡೆಯಲು ಕಾನೂನು ತಿದ್ದುಪಡಿ ಅವಶ್ಯ
ಮೈಸೂರು

ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದನ್ನು ತಡೆಯಲು ಕಾನೂನು ತಿದ್ದುಪಡಿ ಅವಶ್ಯ

February 14, 2019

ಮೈಸೂರು: ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾದ ಜನಪ್ರತಿನಿಧಿ ಗಳು ಅಧಿಕಾರ ಸಿಗದಿದ್ದಲ್ಲಿ ಪಕ್ಷಾಂತರ ಮಾಡುವುದಾಗಿ ಪಕ್ಷಕ್ಕೆ ಬೆದರಿಕೆ ಹಾಕುವುದು ತರವಲ್ಲ. ಈ ರೀತಿಯ ರಾಜಕಾರಣಕ್ಕೆ ಕಾನೂನು ತಿದ್ದುಪಡಿ ಮೂಲಕ ಕಡಿವಾಣ ಹಾಕುವುದು ಅಗತ್ಯ ಎಂದು ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ರಾಜಕಾರಣ ದಲ್ಲಿ ಮುತ್ಸದ್ಧಿ ರಾಜಕಾರಣಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಎಲ್ಲಾ ಪಕ್ಷಗಳಲ್ಲೂ ಸಾಮಾಜಿಕ ಮೌಲ್ಯ ಮತ್ತು ಸಿದ್ಧಾಂತ ರೂಢಿಸಿಕೊಂಡ ರಾಜಕಾರಣಿ ಗಳ ಕೊರತೆ ಇದೆ ಎಂದು ವಿಷಾದಿಸಿದರು.

ಯಾವುದೇ ಪಕ್ಷದ ಕಾರ್ಯಕರ್ತ ಅಧಿಕಾರ ಕೇಳುವುದು ತಪ್ಪಲ್ಲ. ಆದರೆ, ಆ ಮನವಿಯಲ್ಲಿ ರೀತಿ-ನೀತಿ, ಇತಿಮಿತಿ ಇರಬೇಕು ಮತ್ತು ಪಕ್ಷ ಅವರಿಗಾಗಿ ಏನು ಮಾಡಿದೆ ಎಂಬುದನ್ನು ತಿಳಿದುಕೊಳ್ಳ ಬೇಕು. ಬೆದರಿಕೆ ರಾಜಕಾರಣ ಮಾಡುವ ಜನಪ್ರತಿನಿಧಿಗಳು ಪಕ್ಷ ಬಿಡುವುದಾದರೆ ನೇರವಾಗಿ ಹೇಳಬೇಕು. ಅದನ್ನು ಬಿಟ್ಟು ಬೆದರಿಕೆ ಸ್ವರೂಪದಲ್ಲಿ ಆಡಳಿತಾರೂಢ ಸರ್ಕಾರವನ್ನು ಅಸ್ಥಿರತೆಗೆ ದೂಡುವುದು ತರವಲ್ಲ. ಈ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳ ಹೊಣೆ ಏನು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಈಗಿನದು ಬಂಡವಾಳ ರಾಜಕೀಯ. ಹಣದ ತೀವ್ರತೆ ಇದ್ದರೆ ಮಾತ್ರ ಸಾರ್ವಜನಿಕ ಕ್ಷೇತ್ರ ಮತ್ತು ಪಕ್ಷದಲ್ಲಿ ಗುರುತಿಸಿ ಕೊಳ್ಳುವ ಪರಿಸ್ಥಿತಿ ಎನ್ನುವಂತಾಗಿರುವುದೇ ಈಗಿನ ಪರಿಸ್ಥಿತಿಗೆ ಕಾರಣ ಎಂದು ತಿಳಿಸಿದರು.

ಕಡಿವಾಣ ಅಗತ್ಯ: ಪ್ರಜಾಪ್ರಭುತ್ವದಲ್ಲಿ ಎಲ್ಲದ್ದಕ್ಕೂ ಕೊನೆ ಮೊದಲಿರಬೇಕು. ಎಲ್ಲಾ ಮುಖಂಡರಲ್ಲಿ ಸ್ವಚ್ಛ ರಾಜಕಾರಣದ ಚಿಂತನೆ ಬರಬೇಕಾದರೆ, ಸಾಮಾಜಿಕ ಚಳವಳಿ ಹಿನ್ನೆಲೆಯಿಂದ ಬಂದವರಿಂದ ಕಾಣಬಹುದು. ಪ್ರಸ್ತುತ ಸಾಮಾಜಿಕ ಸಮಸ್ಯೆಗಳಾದ ರೈತರ ಸಮಸ್ಯೆ, ಉದ್ಯೋಗ ಸೃಷ್ಟಿ, ಜಲಸಂಪ ನ್ಮೂಲ ರಕ್ಷಣೆ ಸೇರಿದಂತೆ ದೇಶದ ಗಂಭೀರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಯಾಗಬೇಕು. ಈ ರೀತಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕಾದರೆ ಜನಪ್ರತಿನಿಧಿ ಗಳ ಬೆದರಿಕೆ ರಾಜಕಾರಣಕ್ಕೆ ಕಡಿವಾಣ ಹಾಕುವುದು ಪ್ರಸ್ತುತ ಅನಿವಾರ್ಯ ಎಂದು ಪ್ರತಿಪಾದಿಸಿದರಲ್ಲದೆ, ನಿನ್ನೆ ನಡೆದ ವಿಧಾನ ಸಭೆ ಅಧಿವೇಶನದಲ್ಲಿ ಶಾಸಕರೊಬ್ಬರು ಸಾಮಾಜಿಕ ಮೌಲ್ಯಗಳ ಮರು ಸ್ಥಾಪಿಸುವ ಬಗ್ಗೆ ದನಿಯೆತ್ತಿರುವುದು ಸ್ವಾಗತಾರ್ಹ ಅಂಶ ಎಂದರು. ಅದೇ ರೀತಿ ಜನರ ಜೀವನಾಡಿ ಯಾಗಿರುವ ಪಶ್ಚಿಮ ಘಟ್ಟ ಅಪಾಯದ ಅಂಚಿನಲ್ಲಿದೆ, ಇದಕ್ಕೆ ಹಲವಾರು ಕಾರಣ ಗಳಿವೆ. ಕಾರಣಗಳು ಏನೇ ಇದ್ದರೂ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಜನಪ್ರತಿನಿಧಿ ಗಳು ಈಗಲಾದರೂ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ 30 ವರ್ಷಗಳಲ್ಲಿ ಪಶ್ಚಿಮಘಟ್ಟಗಳ ಅವನತಿ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿಲ್ಲ: ಹವಾಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬಿಕ್ಕಟ್ಟು ಎದುರಾಗು ತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನಜೀವನ ತೀವ್ರ ತೊಂದರೆಗೆ ಸಿಲುಕಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಒಂದು ದಿನವೂ ಚಕಾರವೆತ್ತಲಿಲ್ಲ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಸ್ಪಂದಿಸಿ 3 ದಿನಗಳ ವಿಶೇಷ ಅಧಿವೇಶನ ನಡೆಸಿ, ರೈತರು ಮತ್ತು ಗ್ರಾಮೀಣ ಪ್ರದೇ ಶದ ಸಮಸ್ಯೆಗಳ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕಾಗಿ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೂ ಕೇಂದ್ರ ಸರ್ಕಾರ ಸಭೆ ನಡೆಸ ಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ, ಈ ಸೌಲಭ್ಯ ಎಲ್ಲರಿಗೂ ಸಿಗುವಂತೆ ನೋಡಿ ಕೊಳ್ಳುವುದು ರಾಜ್ಯ ಮತ್ತು ಕೇಂದ್ರ ಸರ್ಕಾ ರದ ಕರ್ತವ್ಯ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ನಮ್ಮ ರಾಜ್ಯದ ಜನರಲ್ಲದೆ, ಉತ್ತರ ಭಾರತ ರಾಜ್ಯಗಳಿಂದಲೂ ಬರುತ್ತಿದ್ದಾರೆ. ಇದರ ಮೇಲಿನ ಒತ್ತಡ ತಪ್ಪಬೇಕಾದರೆ, ಕೇಂದ್ರ ಸರ್ಕಾರ ಇಂಥ ಘಟಕಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ತೆರೆಯಲು ಚಿಂತನೆ ನಡೆಸಬೇಕು ಎಂದರು.

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಅವಶ್ಯ
ಮೈಸೂರು:ಸಾಂಸ್ಕøತಿಕ ನಗರಿ ಮೈಸೂರು ವಿಶ್ವಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಈ ಕೀರ್ತಿಗೆ ಮೈಸೂರು ವಿವಿಯೂ ಸೇರಿಕೊಂಡಿದೆ. ಇದಕ್ಕೆ ಹೊಂದಿಕೊಂಡಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಸಲಹೆ ನೀಡಿದರು.

ಕಳೆದ ಮೂರು ತಿಂಗಳ ಹಿಂದೆ ಕಾರ್ಯ ನಿಮಿತ್ತ ಮೈಸೂರಿಗೆ ಆಗಮಿಸಿದ್ದಾಗ ಸಂಜೆ ವೇಳೆ ಕುಕ್ಕರಹಳ್ಳಿ ಕೆರೆಗೆ ವಾಯುವಿಹಾರಕ್ಕೆ ಹೋಗಿದ್ದೆ. ಈ ವೇಳೆ ವಾಕಿಂಗ್ ಪಾತ್‍ನಲ್ಲಿ ಹರಡಿದ್ದ ಕಲ್ಲುಗಳಿಂದ ಜಾರಿಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನನ್ನಂತೆ ದಿನನಿತ್ಯ ಸಾವಿರಾರು ಮಂದಿ ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಅವರಿಗೆ ವಾಕಿಂಗ್ ಪಾತ್‍ನಲ್ಲಿ ಹರಡಿರುವ ಕಲ್ಲುಗಳಿಂದ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ಕುಕ್ಕರಹಳ್ಳಿ ಕೆರೆಗೆ ಯುಜಿಡಿ ನೀರು ಬರುತ್ತಿದೆ. ಈ ವಾಸನೆಯಿಂದ ವಾಯುವಿಹಾರಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರು, ಮೈಸೂರು ಕುಲಪತಿಗಳಿಗೆ ಪತ್ರ ಬರೆದು ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

Translate »