3 ವಿಕೆಟ್ ನಷ್ಟಕ್ಕೆ 282: ಸುಸ್ಥಿತಿಯಲ್ಲಿ ಭಾರತ
ಮೈಸೂರು

3 ವಿಕೆಟ್ ನಷ್ಟಕ್ಕೆ 282: ಸುಸ್ಥಿತಿಯಲ್ಲಿ ಭಾರತ

February 14, 2019

ಮೈಸೂರು: ಮೈಸೂ ರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ಬುಧವಾರ ಆರಂಭವಾದ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಟಾಸ್ ಗೆದ್ದ ಭಾರತ `ಎ’ ತಂಡದ ನಾಯಕ ಕೆ.ಎಲ್.ರಾಹುಲ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆರಂ ಭಿಕ ಆಟಗಾರರಾಗಿ ಕ್ರೀಸ್‍ಗೆ ಇಳಿದ ಕೆ.ಎಲ್. ರಾಹುಲ್, ಜೊತೆಗಾರ ಅಭಿಮನ್ಯು ಈಶ್ವ ರನ್‍ನೊಂದಿಗೆ ಎದುರಾಳಿ ತಂಡದ ಬೌಲರ್ ಗಳನ್ನು ರಕ್ಷಣಾತ್ಮಕವಾಗಿ ಎದುರಿಸಿ ನಿಧಾನಗತಿಯಲ್ಲಿಯೇ ತಂಡದ ಮೊತ್ತ ಕಟ್ಟುತ್ತಾ ಹೋದರು. ಭಾರತ ತಂಡ ಭೋಜನ ವಿರಾಮ ವೇಳೆಗೆ ವಿಕೆಟ್ ನಷ್ಟ ವಿಲ್ಲದೆ 82 ರನ್ ಕಲೆಹಾಕಿತ್ತು.

ಆರಂಭಿಕ ಆಟಗಾರರಿಬ್ಬರೂ ಅರ್ಧ ಶತಕ ಪೂರೈಸಿ ಉತ್ತಮ ಬ್ಯಾಟಿಂಗ್ ಪ್ರದ ರ್ಶನ ನೀಡಿ ಬೌಲರ್‍ಗಳ ಬೆವರಿಳಿ ಸಿದರು. ಆರಂಭಿಕ ಆಟಗಾರರನ್ನು ಬೇರ್ಪಡಿಸಲು ಎದುರಾಳಿ ತಂಡದ ಆರು ಬೌಲರ್‍ಗಳು ಹರಸಾಹಸ ಮಾಡಿದ ರಾದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ. ಇಬ್ಬರೂ ಆರಂಭಿಕರು ಶತಕ ದಾಖಲಿಸುವ ಮುನ್ಸೂಚನೆ ನೀಡಿದ್ದರು. ತಂಡದ ಮೊತ್ತ 179 ಆಗಿದ್ದಾಗ ಕೆ.ಎಲ್.ರಾಹುಲ್ 55ನೇ ಓವರ್‍ನ ಕೊನೆ ಎಸೆತದಲ್ಲಿ ಭಾರೀ ಹೊಡೆತಕ್ಕೆ ಯತ್ನಿಸಿ ಕೀಪರ್ ಪೋಪೆಗೆ ಕ್ಯಾಚ್ ನೀಡಿ ಚಾಪೆಲ್‍ಗೆ ವಿಕೆಟ್ ಒಪ್ಪಿಸಿದರು.

ಕೆ.ಎಲ್.ರಾಹುಲ್ 11 ಬೌಂಡರಿಯೊಂದಿಗೆ 81(166 ಎಸೆತ) ರನ್ ಗಳಿಸಿದ್ದರು. ಮೂರನೇ ಕ್ರಮಾಂಕ ದಲ್ಲಿ ಆಡಲು ಬಂದ ಪಿ.ಕೆ.ಚಹಲ್ ನೊಂದಿಗೆ ಆಟ ಮುಂದುವರೆಸಿದ ಅಭಿ ಮನ್ಯು ಈಶ್ವರ್ ತಂಡದ ಮೊತ್ತ ಹೆಚ್ಚಿಸಿ ದರು. 13 ಬೌಂಡರಿ, ಒಂದು ಸಿಕ್ಸರ್ ನೊಂದಿಗೆ 222 ಎಸೆತಗಳಲ್ಲಿ 117 ರನ್ ಕಲೆ ಹಾಕಿದ ಅಭಿಮನ್ಯು, ಬೇಸ್ ಎಸೆದ 73ನೇ ಓವರ್‍ನ ಕೊನೆ ಬಾಲ್‍ನಲ್ಲಿ ಕೀಪರ್ ಪೋಪೆಗೆ ಕ್ಯಾಚ್ ನೀಡಿದರು. ಆಗ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 252 ರನ್ ಆಗಿತ್ತು.

ಬಳಿಕ ಕರುಣ್ ನಾಯರ್‍ನೊಂದಿಗೆ ಪ್ರಿಯಾಂಕ್ ಪಂಚಲ್ ಉತ್ತಮ ಆಟ ಪ್ರದರ್ಶಿಸಿ 7 ಬೌಂಡರಿ ನೆರವಿನೊಂದಿಗೆ ವೇಗದ ಅರ್ಧ ಶತಕ ದಾಖಲಿಸಿದರು. ದಿನದಾಟದ ಅಂತ್ಯದಲ್ಲಿ ಥಾಮಸ್ ಬೇಲಿ ಎಸೆದ 84ನೇ ಓವರ್ 5ನೇ ಎಸೆತವನ್ನು ಸರಿಯಾಗಿ ಗುರುತಿಸಲಾಗದೆ ಬೌಲ್ಡ್ ಆದರು. ಭಾರತ `ಎ’ ತಂಡ ದಿನದಾಟದ ಅಂತ್ಯಕ್ಕೆ 84.5 ಓವರ್‍ನಲ್ಲಿ 3 ವಿಕೆಟ್ ಕಳೆದುಕೊಂಡು 282 ಗಳಿಸಿ ಸುಸ್ಥಿತಿಯ ಲ್ಲಿದೆ. ನಾಳೆ(ಫೆ.14) ಬೆಳಿಗ್ಗೆ 9.30ಕ್ಕೆ ಎರ ಡನೇ ದಿನದ ಆಟ ಆರಂಭವಾಗಲಿದೆ.

ಇಂಗ್ಲೆಂಡ್ ಪರವಾಗಿ ಥಾಮಸ್ ಬೇಲಿ (18.5 ಓವರ್‍ನಲ್ಲಿ 46 ರನ್), ಜಾಕ್ ಚಾಪೆಲ್ (14 ಓವರ್‍ನಲ್ಲಿ 32 ರನ್) ಮತ್ತು ಡಾಮನಿಕ್ ಬೇಸ್ (18 ಓವರ್‍ನಲ್ಲಿ 71 ರನ್) ತಲಾ ಒಂದು ವಿಕೆಟ್ ಪಡೆದರು.
ವಿಕೆಟ್ ಪತನ: 1-179(ಕೆ.ಎಲ್. ರಾಹುಲ್), 2-252(ಅಭಿಮನ್ಯು ಈಶ್ವರನ್), 3-282(ಪ್ರಿಯಾಂಕ್ ಪಂಚಲ್).

Translate »