ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಿಸಿ
ಮೈಸೂರು

ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಿಸಿ

February 14, 2019

ಮೈಸೂರು -ಪಾರಂಪರಿಕ ಶೈಲಿಯ ಮೈಸೂರಿನ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕೆಂದು ಪಾರಂಪರಿಕ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಸಮಿತಿ ಸದಸ್ಯರಾದ ಪ್ರೊ. ಎನ್.ಎಸ್.ರಂಗ ರಾಜು, ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ಒಂಭತ್ಕೆರೆ, ಪ್ರೊ. ವಿ.ಎ.ದೇಶಪಾಂಡೆ, ಹೆಚ್.ಡಿ. ನಾಗೇಶ, ಎನ್.ಆರ್.ಅಶೋಕ್ ಹಾಗೂ ಈಚ ನೂರು ಕುಮಾರ್ ಅವರು ಸಹಿ ಮಾಡಿರುವ ಪತ್ರವನ್ನು ಸೋಮವಾರ ರಾಜ್ಯ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್ ಅವರಿಗೆ ರವಾನಿಸಿದ್ದಾರೆ.

ಶಿಥಿಲಗೊಂಡಿವೆ ಎಂಬ ಕಾರಣ ನೀಡಿ ಮೈಸೂ ರಿನ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿ ಸಲು ಜನವರಿ 29ರಂದು ನಡೆದ ಕೌನ್ಸಿಲ್ ಸಭೆ ಯಲ್ಲಿ ಪಾಲಿಕೆ ಸದಸ್ಯರು ನಿರ್ಣಯ ಕೈಗೊಂಡಿ ರುವುದು ಸರಿಯಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಪಾರಂಪರಿಕ ಹಿನ್ನೆಲೆ ಹಾಗೂ ಸಂರಕ್ಷಣೆಯಲ್ಲಿ ಜ್ಞಾನವಿಲ್ಲದ ಇಂಜಿನಿಯರ್‍ಗಳನ್ನೊಳಗೊಂಡ ಪಾಲಿಕೆ ರಚಿಸಿದ ಟಾಸ್ಕ್‍ಫೋರ್ಸ್ ಸಮಿತಿ ನೀಡಿದ ವರದಿ ಆಧರಿಸಿ ತೆಗೆದುಕೊಂಡ ಏಕ ಪಕ್ಷೀಯ ನಿರ್ಧಾರದಿಂದಾಗಿ ಅಪರೂಪದ ಪಾರಂ ಪರಿಕ ಕಟ್ಟಡಗಳು ಕಣ್ಮರೆಯಾಗಲು ಬಿಡಬಾರದು. ಬದಲಾಗಿ ಯಥಾಸ್ಥಿತಿ ರಿಪೇರಿ ಮಾಡಿ ಸಂರಕ್ಷಿಸ ಬೇಕು ಎಂದು ತಜ್ಞರ ಸಮಿತಿ ತಿಳಿಸಿದೆ.

2016ರ ಆಗಸ್ಟ್ 20ರಂದು ದೇವರಾಜ ಮಾರುಕಟ್ಟೆಯ ಉತ್ತರ ಭಾಗದ ಕಮಾನು ಗೇಟ್ ಉರುಳಿದ ಬಗ್ಗೆ ತನಿಖೆ ನಡೆಸಿ ಕಾರಣ ತಿಳಿ ಯಲು ಪಾಲಿಕೆ ವಿಫಲವಾಗಿದೆ. ನಂತರ ಪಾರಂ ಪರಿಕ ತಜ್ಞರ ಸಮಿತಿ ಸದಸ್ಯರು ಎರಡೂ ಕಟ್ಟಡ ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಟ್ಟಡಗಳು ಶಿಥಿಲವಾಗಿಲ್ಲ. ಪಾರಂಪರಿಕ ತಜ್ಞ ಕೆಲಸಗಾರ ರಿಂದ ರಿಪೇರಿ ಮಾಡಿದರೆ, ಕಟ್ಟಡಗಳನ್ನು ಸದೃಢ ಗೊಳಿಸಿ ಬಾಳಿಕೆ ಹೆಚ್ಚಿಸಬಹುದಾಗಿದೆ ಎಂದು ವರದಿ ಸಲ್ಲಿಸಿದ್ದೇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕಟ್ಟಡಗಳ ಬಾಡಿಗೆದಾರರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ, ತಮ್ಮನ್ನು ತೆರವುಗೊಳಿಸಿ ಕಟ್ಟಡ ನೆಲಸಮಗೊಳಿಸಲುದ್ದೇಶಿಸಿರುವ ಪಾಲಿಕೆ ವಿರುದ್ಧ ದೂರು ಸಲ್ಲಿಸಿದ್ದಾರೆ. 2016ರ ನವೆಂಬರ್ 7ರಂದು ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ ಎಂದಿರುವ ಸದಸ್ಯರು, ಪಾಲಿಕೆ ನಿರ್ಣಯದಂತೆ ಕಟ್ಟಡಗಳ ನೆಲಸಮಗೊಳಿಸಿದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಮುಖ್ಯ ಕಾರ್ಯ ದರ್ಶಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಮ್ಮೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರೂ ಈ ಎರಡೂ ಪಾರಂಪರಿಕ ಕಟ್ಟಡಗಳನ್ನು ಕೆಡವದೇ ಹಾಗೆಯೇ ರಿಪೇರಿ ಮಾಡಿ ಸಂರಕ್ಷಿಸಬೇಕೆಂದು ಫೆಬ್ರವರಿ 4ರಂದು ಸಲಹೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳ ಮನ ವೊಲಿಸಿ ಪಾರಂಪರಿಕ ನಗರಿ ಎಂಬ ಖ್ಯಾತಿಯ ಮೈಸೂ ರಲ್ಲಿ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕೆಂದು ಎಸ್.ಜಿ.ಒಂಭತ್ಕೆರೆ, ಪ್ರೊ. ಎನ್.ಎಸ್.ರಂಗರಾಜು ನೇತೃತ್ವದ ಸಮಿತಿ ಸದಸ್ಯರು ಮುಖ್ಯ ಕಾರ್ಯ ದರ್ಶಿಗಳನ್ನು ಒತ್ತಾಯಿಸಿದ್ದಾರೆ.

Translate »