ಗಾನಭಾರತಿ ರಂಗಮಂದಿರದ ಗ್ಯಾಲರಿ ಆಸನಗಳ ಉದ್ಘಾಟನೆ
ಮೈಸೂರು

ಗಾನಭಾರತಿ ರಂಗಮಂದಿರದ ಗ್ಯಾಲರಿ ಆಸನಗಳ ಉದ್ಘಾಟನೆ

July 29, 2018

ಮೈಸೂರು: ಕುವೆಂಪುನಗರ ಗಾನಭಾರತಿ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂದಿರದ ಗ್ಯಾಲರಿ ಆಸನಗಳ ಉದ್ಘಾಟನೆ ಮತ್ತು ವೆಬ್‍ಸೈಟ್ ಅನ್ನು ಲೋಕಾರ್ಪಣೆ ಮಾಡಲಾಯಿತು.

ಗಾನಭಾರತಿ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ರಮಾಬಾಯಿ ಗೋವಿಂದರಾವ್ ರಂಗಮಂದಿರದ ಗ್ಯಾಲರಿ ಆಸನಗಳನ್ನು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹಾಗೂ ಗಾನಭಾರತಿಯ ನೂತನ ವೆಬ್‍ಸೈಟ್ ಅನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು.

ನಂತರ ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಸಂಗೀತ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳು ಒಂದು ವರ್ಗ, ಜಾತಿಗೆ ಮಾತ್ರ ಸೀಮಿತ ಎನ್ನುವುದು ತಪ್ಪು. ಇವು ಎಲ್ಲಾ ಹಂತದ ಜನರನ್ನು ತಲುಪಿದಾಗ ಮಾತ್ರ ಉಳಿಯಲು ಸಾಧ್ಯ. ಆದರೆ, ಇಂದಿನ ರಾಜಕಾರಣಗಳಿಗೆ ಸಂಸ್ಕೃತಿ ಬೇಡವಾಗಿದ್ದು, ರಾಜಕೀಯ-ಸಂಸ್ಕೃತಿ ಬೇರೆ ಎಂದು ಭಾವಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಸಚಿವನಾಗಿದ್ದ ವೇಳೆ ಪ್ರಾಥಮಿಕ ಶಾಲೆಯ ಪಠ್ಯಗಳಿಗೆ ಯೋಗ-ಸಂಗೀತವನ್ನು ಪರಿಚಯ ಮಾಡಲಾಗಿತ್ತು. ಆದರೆ ಇಂದು ಯೋಗವನ್ನು ಒಂದು ರೀತಿ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪ್ರಸ್ತುತ ಮಕ್ಕಳು ಮಾದಕ ವ್ಯಸನಗಳಾಗಿ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜತೆಗೆ 7 ವರ್ಷ ಸಂಶೋಧನೆ ನಡೆಸಿದ ಬಳಿಕ ಮಾನಸಿಕ ಖಿನ್ನತೆಗೆ ಸಂಗೀತವನ್ನು ಥೆರಪಿಯಾಗಿ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು ಎಂದ ಅವರು, ಗಾನಭಾರತಿಯು 4 ದಶಕಗಳನ್ನು ಪೂರೈಸಿದ್ದು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್‍ರವರು ವೀಣೆ ಶೇಷಣ್ಣ ಭವನಕ್ಕೆ ಜನರೇಟರ್ ವ್ಯವಸ್ಥೆ ಆಗಬೇಕು. ಸೀಟುಗಳು ತುಂಬ ಹಳೆಯದಾಗಿದ್ದು, ಹೊಸ ಸೀಟುಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಎಸ್.ಎ.ರಾಮದಾಸ್‍ರಲ್ಲಿ ಮನವಿ ಮಾಡಿದರು.

ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಉಪಾಧ್ಯಕ್ಷ ಹೆಚ್.ಆರ್.ಸುಂದರೇಶನ್, ಕಾರ್ಯದರ್ಶಿ ಟಿ.ಎಸ್.ವೇಣುಗೋಪಾಲ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು ಕುವೆಂಪುನಗರ ಗಾನಭಾರತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್ ವೆಬ್‍ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.

Translate »