ಕಾವ್ಯವೇ ಒಂದು ಬಗೆಯ ಚಿಕಿತ್ಸೆ: ಹಿರಿಯ ಸಾಹಿತಿ ಸಿಪಿಕೆ ಅಭಿಮತ
ಮೈಸೂರು

ಕಾವ್ಯವೇ ಒಂದು ಬಗೆಯ ಚಿಕಿತ್ಸೆ: ಹಿರಿಯ ಸಾಹಿತಿ ಸಿಪಿಕೆ ಅಭಿಮತ

July 29, 2018

ಮೈಸೂರು: ಕಾವ್ಯ ಒಂದು ಬಗೆಯ ಚಿಕಿತ್ಸೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಅಭಿಪ್ರಾಯಿಸಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಕಾವಲು ಪಡೆ ಸಾಂಸ್ಕೃತಿಕ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಕವಿ ಕೆ.ಎಸ್.ಪ್ರದೀಪ್ ಕುಮಾರ್ ಅವರ `ಪಯಣ’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರದೀಪ್ ಕುಮಾರ್, ಮಾನಸಿಕ ಆಘಾತದಿಂದ ಹೊರಬರಲು ಕಾವ್ಯ ರಚನೆ ಮಾರ್ಗ ಹಿಡಿದಿದ್ದಾರೆ. ನನ್ನನ್ನೂ ಒಳಗೊಂಡಂತೆ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾದವರೇ ಆಗಿದ್ದಾರೆ. ಈ ಬಗ್ಗೆ ನಾನು ಯು.ಆರ್.ಅನಂತಮೂರ್ತಿ ಅವರಲ್ಲಿ ಹೇಳಿಕೊಂಡಿದ್ದೆ. ಆಗ ಕವಿಗಳು ಒತ್ತಡದಿಂದ ಹೊರ ಬರಲು ಕಾವ್ಯವೇ ಮಾರ್ಗ ಎಂದಿದ್ದರು. ಇದು ಸತ್ಯವಾಯಿತು. ಮನಸ್ಸಿನ ಆತಂಕವನ್ನು ನಿವಾರಿಸಲು ಕಾವ್ಯವೇ ಚಿಕಿತ್ಸೆಯಾಗಿದೆ ಎಂದು ತಿಳಿಸಿದರು.

ಸಂಕೀರ್ಣವಾದ ಕಾವ್ಯ, ಕ್ಲಿಷ್ಟ ಅಥವಾ ಅಸ್ಪಷ್ಟವಾಗಿ ಪರಿಣಮಿಸಬಹುದು. ನಮಗೆ ಅರ್ಥವಾಗುತ್ತಿಲ್ಲವೋ? ಅಥವಾ ಅರ್ಥವೇ ಇಲ್ಲವೋ? ಎಂಬ ಸಂದೇಹವನ್ನೂ ಸೃಷ್ಟಿಸಬಹುದು. ಹೀಗೆ ಕ್ಲಿಷ್ಟವಾಗಿರುವ ಸಂದರ್ಭದಲ್ಲಿ ಸರಳತೆ ಕಡೆಗೆ ಹೊರಳುವುದು ಅನಿವಾರ್ಯ. ಜಾನಪದ, ಶರಣರ ವಚನಗಳು ಅತ್ಯಂತ ಸರಳವಾಗಿದ್ದರೂ ಅತ್ಯಂತ ಮಹತ್ವವಾಗಿವೆ. ಪಯಣ ಕವನ ಸಂಕಲನದಲ್ಲೂ ಅತ್ಯಂತ ಸರಳ ಹಾಗೂ ಮುಗ್ಧತೆಯ ಕವನಗಳಿವೆ. ಪ್ರೀತಿಯ ಸ್ವರ, ರೈತರ ಬಗ್ಗೆ ಕಾಳಜಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಮಾನವೀಯ ಮೌಲ್ಯ ಸೇರಿದಂತೆ ವೈವಿಧ್ಯಪೂರ್ಣ ವಸ್ತುಗಳನ್ನೊಳಗೊಂಡ ಕಾವ್ಯಗಳನ್ನೂ ಒಳಗೊಂಡಿದೆ ಎಂದು ಸಿಪಿಕೆ ಬಣ್ಣಿಸಿದರು.

ಹೆಣ್ಣನ್ನು ಕರ್ಪೂರ, ಸೆರಗಿನ ಕೆಂಡವಿದ್ದಂತೆ ಎಂದಿರುವುದು ವಾಸ್ತವವಾಗಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಮರಣ ದಂಡನೆ ವಿಧಿಸಲಾಗುತ್ತಿದೆ. ಆದರೆ ಕೆಟ್ಟ ಉನ್ಮಾದದಲ್ಲಿರುವ ಅತ್ಯಾಚಾರಿಗಳು ಮರಣ ದಂಡನೆ, ಜೀವಾವಧಿ ಶಿಕ್ಷೆಗೆ ಹೆದರುವಂತೆ ಕಾಣುತ್ತಿಲ್ಲ. ಕಾದ ಎಣ್ಣೆಯಲ್ಲಿ ಬಿಸಾಡುವ, ಕೊಬ್ಬರಿ ಗಾಣದಲ್ಲಿ ಅರೆಯುವ ಉಗ್ರಶಿಕ್ಷೆ ನೀಡಿದರೆ ಅವರಲ್ಲಿ ಹೆದರಿಕೆ ಹುಟ್ಟಬಹುದು ಎಂದು ಅಭಿಪ್ರಾಯಿಸಿದ ಸಿಪಿಕೆ, ಪತ್ರಿಕೆಗಳಲ್ಲಿ ದಿನನಿತ್ಯ ಹೆಣ್ಣಿಗೆ ಮರುಳಾಗಿ ಕರ್ತವ್ಯ ಮರೆತಿರುವ ಮಠಾಧೀಶರ ಬಗ್ಗೆ ವರದಿ ಪ್ರಕಟವಾಗುತ್ತಿದೆ. ನಿಜಕ್ಕೂ ನಾವು ಎಂತಹ ಸಮಾಜದಲ್ಲಿದ್ದೇವೆ ಎಂದು ಆತಂಕವಾಗುತ್ತದೆ. `ಇಂದಿಗೂ ಸ್ವಾಮೀಜಿಗಳ ಚಿತ್ತ, ಚಲನ-ವಲನ ಹೆಣ್ಣಿನ ಸುತ್ತ…’ ಎಂಬ ಸಾಲು ವಾಸ್ತವವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕಾವಲು ಪಡೆ ಸಾಂಸ್ಕøತಿಕ ಘಟಕದ ಅಧ್ಯಕ್ಷ, ಸಾಹಿತಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಮಾನಸಿಕ ಆಘಾತಕ್ಕೆ ಒಳಗಾಗಿ, ಹೊರ ಪ್ರಪಂಚದಿಂದ ದೂರವೇ ಉಳಿದಿದ್ದ ಪ್ರದೀಪ್ ಕುಮಾರ್ ಬೋಗಾದಿ ಅವರು, ಸಾಹಿತ್ಯವನ್ನು ಓದುವ ಹವ್ಯಾಸ ರೂಡಿಸಿಕೊಂಡು, ಕಾವ್ಯ ರಚನೆ ಮಾಡುವ ಮೂಲಕವೇ ಆಘಾತದಿಂದ ಹೊರ ಬಂದಿದ್ದಾರೆ. ಪಯಣ ಸೇರಿದಂತೆ 7 ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ. 1200 ಹನಿಗವಿತೆ, 750 ಕವಿತೆ, 60 ಇಂಗ್ಲಿಷ್ ಕವಿತೆ, 30 ಸಣ್ಣ ಹಗೂ 2 ದೊಡ್ಡ ಕತೆ, 10 ಪ್ರಬಂಧ ರಚಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್‍ಗೌಡ, ಯುವ ಸಾಹಿತಿ ಶಿಶಿರಂಜನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕವಿ ಕೆ.ಎಸ್.ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶುಕ್ರವಾರ ಯುವಕವಿ ಕೆ.ಎಸ್.ಪ್ರದೀಪ್ ಕುಮಾರ್ ಅವರ `ಪಯಣ’ ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಿಡುಗಡೆ ಮಾಡಿದರು.

Translate »