ಹೈಟೆನ್ಷನ್ ಲೈನ್ ಕೆಳಗೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹ ಚಾಲನೆ
ಮೈಸೂರು

ಹೈಟೆನ್ಷನ್ ಲೈನ್ ಕೆಳಗೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹ ಚಾಲನೆ

July 29, 2018

ಮೈಸೂರು: ಮೈಸೂರಿನ ಶಾರದಾದೇವಿನಗರ ವೃತ್ತದ ಬಳಿಯಿಂದ ಬೋಗಾದಿ ಗದ್ದಿಗೆ ರಸ್ತೆಯವರೆಗೆ ಹಾದು ಹೋಗಿರುವ ಹೈಟೆನ್ಷನ್ ಲೈನ್‍ನಡಿಯ ಉದ್ಯಾನವನವನ್ನು ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡರು ಹಾಗೂ ಸಂಸದ ಪ್ರತಾಪ್ ಸಿಂಹ ಶನಿವಾರ ಚಾಲನೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ಸಂಖ್ಯೆ 24 ಹಾಗೂ 22ರ ವ್ಯಾಪ್ತಿಯಲ್ಲಿ ಈ ಹೈಟೆನ್ಷನ್ ಲೈನ್ ಪಾರ್ಕ್ ಹಾದು ಹೋಗಿದ್ದು, ಶಾರದಾದೇವಿನಗರದ ವೃತ್ತದ ಬಳಿ ಸಚಿವರು ಗುದ್ದಲಿ ನೆರವೇರಿಸಿದರು. ಕೇಂದ್ರ ಸರ್ಕಾರದ ಶೇ.50, ರಾಜ್ಯ ಸರ್ಕಾರದ ಶೇ.25 ಹಾಗೂ ಮಹಾನಗರ ಪಾಲಿಕೆಯ ಶೇ.25ರಷ್ಟು ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ.

ಇದೇ ವೇಳೆ ಸ್ಥಳೀಯರು ಉದ್ಯಾನವನ ಅಭಿವೃದ್ಧಿಪಡಿಸುವ ಜೊತೆಗೆ ಇಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಸಚಿವರು ಮತ್ತು ಸಂಸದರು, ಹೈಟೆನ್ಷನ್ ಲೈನ್ ಮೇಲೆ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕಬ್ಬಿಣದ ಸಲಕರಣೆಗಳನ್ನು ಅಳವಡಿಸಲು ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರಲ್ಲದೆ, ರೋಸ್ ಗಾರ್ಡನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ನಿರ್ದೇಶನ ನೀಡಿದರು.

ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಮೈಸೂರು ನಗರದ ನಾಲ್ಕು ಉದ್ಯಾನವನಗಳನ್ನು ತಲಾ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳ ಪೈಕಿ ಶಾರದಾದೇವಿನಗರ-ಬೋಗಾದಿ ನಡುವಿನ ಹೈಟೆನ್ಷನ್ ಲೈನ್‍ನಡಿಯ ಉದ್ಯಾನವನವೂ ಒಂದಾಗಿದೆ. ಉಳಿದಂತೆ ವಿಜಯನಗರ ಹೈಟೆನ್ಷನ್ ಲೈನ್ ಉದ್ಯಾನವನ, ಶ್ರೀರಾಂಪುರ ಉದ್ಯಾನವನ ಹಾಗೂ ಗಾಯಿತ್ರಿಪುರಂ ಉದ್ಯಾನವನ ಅಮೃತ್ ಯೋಜನೆಯಡಿ ಅಭಿವೃದ್ಧಿಯಾಗಲಿವೆ. -ಸಂಸದ ಪ್ರತಾಪ್ ಸಿಂಹ

Translate »