ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ

July 29, 2018

ಮೈಸೂರು: ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಾಜು 2 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಚಾಲನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯ ವಾರ್ಡ್ ನಂ.24, 22 ಹಾಗೂ 16ರಲ್ಲಿ ಪಾಲಿಕೆ ಉಸ್ತುವಾರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೈಗೆತ್ತಿಕೊಂಡಿರುವ ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ಬೋಗಾದಿ 2ನೇ ಹಂತದಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಇಲ್ಲಿನ ನೀರಾವರಿ ಇಲಾಖೆ ಬಡಾವಣೆಯಲ್ಲಿ 2017-18ನೇ ಸಾಲಿನ ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ವಿಶೇಷ ಅನುದಾನದಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿರುವ ಉದ್ಯಾನವನ ಕಾಮಗಾರಿಗೆ ಚಾಲನೆ ನೀಡಿದರು. ಒಟ್ಟು 300 ಮೀ. ಸುತ್ತಳತೆಯಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದ್ದು, 2 ಮೀ. ಅಗಲದಲ್ಲಿ ಇಂಟರ್ ಲಾಕ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ತುಂತುರು ಮಳೆ ನಡುವೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವರಿಗೆ ಸ್ಥಳೀಯ ಅಭಿಮಾನಿಗಳು ಹಾಗೂ ಬೆಂಬಲಿಗರು ಹಾರ-ತುರಾಯಿಯೊಂದಿಗೆ ಸನ್ಮಾನಿಸಿ, ಅಭಿಮಾನ ಮೆರೆದರು.

ಬಳಿಕ ಎಸ್‍ಎಫ್‍ಸಿ 2017-18ನೇ ಸಾಲಿನ ವಿಶೇಷ ಅನುದಾನದಡಿ 49.50 ಲಕ್ಷ ರೂ. ವೆಚ್ಚದಲ್ಲಿ ಸಾಹುಕಾರ್ ಚೆನ್ನಯ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ (ಚದುರಂಗ ರಸ್ತೆಯಿಂದ ಸಂಗಮ್ ಭಂಡಾರ್ ರಸ್ತೆಯವರೆಗೆ) ಬೋಗಾದಿ 2ನೇ ಹಂತದಲ್ಲಿರುವ ವಿಜಯಾ ಬ್ಯಾಂಕ್ ಬೋಗಾದಿ ಶಾಖೆ ಬಳಿ ಭೂಮಿ ಪೂಜೆ ನೆರವೇರಿಸಿದರು. ಇಲ್ಲಿ ಒಟ್ಟು 8 ಸಾವಿರ ಚ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಂತರ ವಾರ್ಡ್ ನಂ. 16ರ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ರಸ್ತೆಯ 8 ಮತ್ತು 9ನೇ ಅಡ್ಡ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೂ ಸಚಿವರು ಚಾಲನೆ ನೀಡಿದರು. ಎಸ್‍ಎಫ್‍ಸಿ 2017-18ನೇ ಸಾಲಿನ ವಿಶೇಷ ಅನುದಾನದಡಿ 25 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಅಭಿನಂದನೆಯ ಸುರಿಮಳೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದ ಬೋಗಾದಿ, ಜನತಾ ನಗರ, ಶಾರದದೇವಿನಗರಗಳಲ್ಲಿ ಇಂದು ವಿವಿಧ ಕಾಮಗಾರಿಗೆ ಚಾಲನೆ ನೀಡುವ ವೇಳೆ ಸ್ಥಳೀಯರು ತಮ್ಮ ನೆಚ್ಚಿನ ನಾಯಕರನ್ನು ಸುತ್ತವರಿದು ಶಾಲು ಹೊದಿಸಿ ಸನ್ಮಾನಿಸಿ, ಮೊಬೈಲ್‍ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ತುಂತುರು ಮಳೆ ನಡುವೆಯೂ ತಮ್ಮ ಅಭಿಮಾನದ ಸುರಿಮಳೆ ಸುರಿಸಿದರು. ಜೊತೆಗೆ ಅನೇಕರು ತಮ್ಮ ಸಮಸ್ಯೆಗಳನ್ನು ಸಚಿವರಲ್ಲಿ ಹೇಳಿಕೊಂಡರು. ರಸ್ತೆ ಬದಿ ನಿಂತಿದ್ದ ಜನರ ಕಂಡು ವಾಹನ ನಿಲ್ಲಿಸಿದ ಸಚಿವರು, ಅವರ ಸಮಸ್ಯೆ ಆಲಿಸಿದರು. ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜಿಟಿಡಿ ಪುತ್ರ ಜಿ.ಡಿ.ಹರೀಶ್‍ಗೌಡರಲ್ಲಿಯೂ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಮೇಯರ್ ಬಿ.ಭಾಗ್ಯವತಿ, ಮಾಜಿ ಮೇಯರ್ ಆರ್.ಲಿಂಗಪ್ಪ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಉಪ ಆಯುಕ್ತ (ಅಭಿವೃದ್ಧಿ) ಜಿ.ಎಸ್.ಸುರೇಶ್, ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ, ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ, ಸಹಾಯಕ ಇಂಜಿನಿಯರ್ ಅನಂತ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಈ ವೇಳೆ ಹಾಜರಿದ್ದರು.

ಶೀಘ್ರ ಬೋಧಕರ ನೇಮಕ

ಉಪನ್ಯಾಸಕರ ಕೊರತೆ ಹಿನ್ನೆಲೆಯಲ್ಲಿ ಯುವರಾಜ ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದ್ದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿ ನೇಮಕಕ್ಕೆ ಶೀಘ್ರ ಕ್ರಮ ಕೈಗೊಳ್ಳಲು ಹಣಕಾಸು ಇಲಾಖೆ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ವಹಿಸುವುದಾಗಿ ತಿಳಿಸಿದರು.

Translate »