ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ
ಮೈಸೂರು

ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ

July 22, 2018
  • ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ
  • ಡಾ.ಕೆ.ಕೃಷ್ಣ ಮೂರ್ತಿ ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು ಮರುಮುದ್ರಣ ಕೃತಿ ಬಿಡುಗಡೆ

ಮೈಸೂರು: ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಸೇರಿದಂತೆ ಹಲವು ನಾಟಕಗಳು ಅಗ್ರಪಂಕ್ತಿ ಪಡೆದಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಉತ್ತರ ದ್ವಾರದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ 95ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ `ಡಾ.ಕೆ.ಕೃಷ್ಣಮೂರ್ತಿ-ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು’ ಮರು ಮುದ್ರಣ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಭಿಜ್ಞಾನ ಶಾಕುಂತಲಾ ನಾಟಕದಲ್ಲಿ `ಶೃಂಗಾರ ರಸ’ಕ್ಕೆ ಕವಿ ಕಾಳಿದಾಸ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಈ ನಾಟಕದಲ್ಲಿ ಚಿತ್ರಿಸಿರುವ ಶೃಂಗಾರ ರಸವನ್ನು ಕೇವಲ ಸೀಮಿತ ರೂಪಕವಾಗಿ ನೋಡಲು ಸಾಧ್ಯವಿಲ್ಲ. ಅದೊಂದು ವೈಭವಯುತ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿದೆ. ಆದ್ದರಿಂದಲೇ ಜಗತ್ತಿನ ಪ್ರಖ್ಯಾತ ಕವಿಗಳ ಸಾಲಿನಲ್ಲಿ ಕಾಳಿದಾಸ ತನ್ನ ವಿದ್ವತ್ ಪ್ರತಿಭೆಯಲ್ಲಿ ದಾಖಲಿಸಿದ್ದಾನೆ ಎಂದರು.

ಸಾಹಿತಿ ಡಾ.ಕೆ.ಕೃಷ್ಣಮೂರ್ತಿ ಅವರ ಪ್ರಕಾರ ಕಾಳಿದಾಸ ಸಂಸ್ಕøತ ಕಾವ್ಯದ ಅತ್ಯುನ್ನತ ಶಿಖರ. ಕಾಳಿದಾಸರ ವಿದ್ವತ್‍ಗೆ ಕೈ ಮುಗಿಯದ ಕವಿಗಳಿಲ್ಲ. ಅವರನ್ನು ಮೆಚ್ಚದ ವಿಮರ್ಶಕನಿಲ್ಲ. ಅವರ ಹೆಸರನ್ನು ಗೌರವಿಸದ ಭಾರತೀಯನಿಲ್ಲ. ಅವನ ಕಲ್ಪನಾದೃಷ್ಟಿಯಲ್ಲಿ `ಶೃಂಗಾರ ರಸ’ ಅಂಗ್ರಪಂಕ್ತಿಯೂ ಹೌದು, ಸಮಗ್ರವೂ ಹೌದು. ಆದ್ದರಿಂದ ಕಾಳಿದಾಸನ ಕಾವ್ಯ ಸೃಷ್ಟಿ ಸಾಹಿತ್ಯ ಪ್ರಿಯರ ಮನಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ ಎಂದು ವರ್ಣಿದರು.

ಹೀಗೆ ಕಾಳಿದಾಸನ ಸೃಷ್ಟಿಯಲ್ಲಿ ಪ್ರತಿಭೆ, ವರ್ಣನೆ, ರಸಪುಷ್ಟಿ, ಪಾತ್ರ-ಪರಿಪೋಷಣೆ ಜೊತೆಗೆ ಕವಿಯ ಮಾನವೀಯ ದೃಷ್ಟಿ, ಸಮಸೃಷ್ಟಿಯೂ ಆತನ ಹೃದಯದಲ್ಲಿ ಅಡಕವಾಗಿದೆ ಎಂದು ಡಾ.ಕೆ.ಕೃಷ್ಣಮೂರ್ತಿಯವರು ವರ್ಣಿಸಿದ್ದಾರಲ್ಲದೆ , `ಮಾಳವಿಕಾಗ್ನಿ ಮಿತ್ರ’, `ವಿಕ್ರಮೋರ್ವಶಿಯ’ ನಾಟಕಗಳಲ್ಲಿ ನಾಟ್ಯಶಾಸ್ತ್ರದ ನಿಯಮದಂತೆಯೇ ರಚಿತವಾಗಿವೆ. ಒಟ್ಟಿನಲ್ಲಿ ಕಾಳಿದಾಸ ಭಾರತೀಯ ಕಾವ್ಯ ಮಿಮಾಂಸೆಯಲ್ಲಿ ಮೇರು ಪರ್ವತ ಎಂದರೆ ತಪ್ಪಾಗಲಾರದು. ಕಾಳಿದಾಸ, ಸರಸ್ವತಿ ಪುತ್ರನೋ ಅಥವಾ ಸರಸ್ವತಿಯ ಅವತಾರವೇ ಕಾಳಿದಾಸನೋ ಎರಡನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದು ಬಣ್ಣಿಸಿದ್ದಾರೆ ಎಂದರು.

ಕೃಷ್ಣಮೂರ್ತಿ ಅವರು ಸಂಸ್ಕøತದ ಮೇಲಿನ ಹಿಡಿತದಿಂದ ಅಲಂಕಾರ ಶಾಸ್ತ್ರದ ಬಗ್ಗೆ ಅಧಿಕಾರವಾಣಿಯಲ್ಲಿ ಮಾತನಾಡುತ್ತಿದ್ದರು. ಇದು ಅವರ ವಿದ್ವತ್ತಿನ ಮಹತ್ವ ತಿಳಿಸುತ್ತದೆ. ಇಂತಹವರ ಮೇರು ಪಂಡಿತರ ಸ್ಮರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಡಾ.ಕೃಷ್ಣಮೂರ್ತಿ ಸಂಶೋಧನಾ ಟ್ರಸ್ಟ್ ವತಿಯಿಂದ ಆಯೋಜಿಸಿರುವುದು ಮೈಸೂರು ಸಾಹಿತ್ಯ ಪ್ರಿಯರ ಪುಣ್ಯ ಎಂದರು.

ಹಿರಿಯ ಲೇಖಕಿ ಡಾ.ಲೀಲಾಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ.ಕೆ.ಕೃಷ್ಣಮೂರ್ತಿ ಅವರು ನನ್ನ ತಂದೆ ಎನ್ನುವುದಕ್ಕಿಂತ ನನಗೆ ಗುರುಗಳು ಎಂದರೆ ತಪ್ಪಾಗಲಾರದು. ಅವರನ್ನು ನಾನು ತಂದೆಯ ಸ್ಥಾನದ ಜೊತೆಗೆ ಗುರುವಿನ ಸ್ಥಾನದಲ್ಲಿ ನಿಂತು ಲೋಕದ ವಿಚಾರಗಳನ್ನು ನನಗೆ ಪರಿಚಯಿಸಿದ್ದಾರೆ. ಇವರು, ಹಾಸನ ಜಿಲ್ಲೆಯ ಕೇರಳಾಪುರದಲ್ಲಿ 1923ರ ಜು.30ರಂದು ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದಿದ್ದರು. ಕನ್ನಡ ಪಂಡಿತ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಹಿಡಿತ ಸಾಧಿಸಿದ್ದರು ಎಂದು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ.ಹೆಚ್.ವಿ.ನಾಗರಾಜರಾವ್, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಡಾ.ಜಯಪ್ಪ ಹೊನ್ನಾಳಿ, ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ಸಂಚಾಲಕ ಸಿ.ಎನ್.ಕೇಶವ ಪ್ರಕಾಶ್, ರಾಜಶೇಖರ ಕದಂಬ, ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡೀಕೆರೆ ಗೋಪಾಲ್ ಸೇರಿದಂತೆ ಇತರರಿದ್ದರು.

ಮೈಸೂರು ಅರಮನೆ ಉತ್ತರ ದ್ವಾರದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ 95ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ `ಡಾ.ಕೆ.ಕೃಷ್ಣಮೂರ್ತಿ-ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು’ ಮರು ಮುದ್ರಣ ಕೃತಿಯನ್ನು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಿಡುಗಡೆಗೊಳಿಸಿದರು.

Translate »