ಮೈಸೂರು ಮಹಾರಾಣಿ ಕಾಲೇಜಲ್ಲಿ ಶಾಸಕ  ನಾಗೇಂದ್ರ ನೇತೃತ್ವದಲ್ಲಿ ಸ್ವಚ್ಛತೆ
ಮೈಸೂರು

ಮೈಸೂರು ಮಹಾರಾಣಿ ಕಾಲೇಜಲ್ಲಿ ಶಾಸಕ  ನಾಗೇಂದ್ರ ನೇತೃತ್ವದಲ್ಲಿ ಸ್ವಚ್ಛತೆ

July 22, 2018

ಮೈಸೂರು: ಮೈಸೂರಿನ ಮಹಾರಾಣಿ ವಿಜ್ಞಾನ-ಕಲಾ ಕಾಲೇಜಿನಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆ, ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿಗಳೊಂದಿಗೆ ಶ್ರಮದಾನ ಮಾಡುವುದರ ಮೂಲಕ ಮಹಾರಾಣಿ ಕಾಲೇಜಿನ ಕಸ ಮುಕ್ತಗೊಳಿಸುವ ಅಭಿಯಾನಕ್ಕೆ ನಾಂದಿ ಹಾಡಿದರು.

ಶಾಸಕ ಎಲ್.ನಾಗೇಂದ್ರ, ಮೇಯರ್ ಭಾಗ್ಯವತಿ, ನಗರ ಪಾಲಿಕೆ ಆಯುಕ್ತ ಜಗದೀಶ್, ಆರೋಗ್ಯಾಧಿಕಾರಿ ನಾಗರಾಜ್, ಕಾಲೇಜಿನ ಜಂಟಿ ನಿರ್ದೇಶಕ ಉದಯಶಂಕರ್ ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕಸ ಗುಡಿಸಿ, ಅಲ್ಲಲ್ಲಿ ಬಿದ್ದಿದ್ದ ಕಸ-ಕಡ್ಡಿಗಳನ್ನು ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆಸಿಬಿ, ಟ್ರಾಕ್ಟರ್‍ಗಳ ಮೂಲಕ ಮಣ್ಣು ಗುಡ್ಡೆಗಳನ್ನು ತೆಗೆದುಹಾಕುವ ಕಾರ್ಯ ಮಧ್ಯಾಹ್ನದವರೆವಿಗೂ ಮುಂದುವರೆದಿತ್ತು.

ಇದೇ ವೇಳೆ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಜೊತೆಗೆ ಕಾಲೇಜಿನ ಆವರಣದಲ್ಲಿ ಇ-ಟಾಯ್ಲೆಟ್ ಅಳವಡಿಸುವ ಕಾರ್ಯಕ್ಕೂ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶುಚಿತ್ವ ಇಲ್ಲ, ಶೌಚಾಲಯದ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ಸಮಸ್ಯೆಗಳು ಇವೆ ಎಂದು ಹೇಳಿದ್ದಾರೆ.

ಎಲ್ಲವನ್ನೂ ಹಂತ ಹಂತವಾಗಿ ಸರಿ ಮಾಡುತ್ತೇನೆ. ಮೊದಲನೆಯ ಹಂತವಾಗಿ ಕಾಲೇಜು ಕಾಂಪೌಂಡ್ ಒಳಗೆ ಸ್ವಚ್ಛ ಮಾಡುವುದು, ಇಲ್ಲಿರುವ ಕಸ ತೆಗೆಯುವುದು. ನಂತರ ಹಂತ ಹಂತವಾಗಿ ಸಮಸ್ಯೆಗಳ ನಿವಾರಣೆ ಪ್ರಯತ್ನ ಮಾಡುವುದಾಗಿ ಹೇಳಿದರು. ಆಯುಕ್ತರು, ಆರೋಗ್ಯಾಧಿಕಾರಿಗಳು, ಮೇಯರ್ ಎಲ್ಲರೂ ಸೇರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಜೆಸಿಬಿ, ಡೋಜರ್ ತರಿಸಿ ಕೆಲಸ ಪ್ರಾರಂಭಿಸಲಾಗಿದೆ. ಮಹಾರಾಣಿ ಕಾಲೇಜಿಗೆ ಒಂದು ಇತಿಹಾಸ ಇದೆ. ಎರಡೂ ಕಾಲೇಜಿಂದ 10-12 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾಣಿಜ್ಯ ಕಾಲೇಜು ಹೊಸ ಕಟ್ಟಡಕ್ಕೆ ವರ್ಗಾವಣೆಯಾಗಿದೆ. ಹಾಗಾಗಿ ಇಲ್ಲಿ ಸುಮಾರು 4000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

Translate »