ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು
ಮೈಸೂರು

ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಫಲಿತಾಂಶದತ್ತ ಗಮನಹರಿಸಲು ಕಿವಿಮಾತು

July 22, 2018

ಮೈಸೂರು:  ಮೈಸೂರಿನ ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶನಿವಾರ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂವಾದ ನಡೆಸಿ, ಪರಿಸರ ಸಂರಕ್ಷಣೆಯೊಂದಿಗೆ ಹತ್ತನೇ ತರಗತಿಯ ಫಲಿತಾಂಶ ಉತ್ತಮಗೊಳಿಸಲು ಪೂರ್ವ ತಯಾರಿಯ ಬಗ್ಗೆ ಸಲಹೆ ನೀಡಿದರು.

ಕೆ.ಆರ್.ಕ್ಷೇತ್ರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ `ಬಲಿಷ್ಠ ಭಾರತ-ಹಸಿರು ಭಾರತ’ ಕಾರ್ಯಕ್ರಮದಡಿ ಪ್ರತಿ ಶನಿವಾರ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಶಾಸಕ ಎಸ್.ಎ.ರಾಮದಾಸ್, ಇಂದು ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಾಲ್ಕನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂವಾದ ನಡೆಸಿದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಸರ್.ಎಂ.ವಿಶ್ವೇಶ್ವರಯ್ಯ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ರಾಧಾಕೃಷ್ಣ, ಬನುಮಯ್ಯ, ವಿವೇಕಾನಂದ, ಪ್ರದಾನಿ ನರೇಂದ್ರ ಮೋದಿ ಬಗ್ಗೆ ಸಾಕಷ್ಟು ಮಾಹಿತಿ ಪಡೆದರು.

ಅಲ್ಲದೆ, ಶಾಲೆಯಲ್ಲಿ ಶೌಚಾಲಯದ ಸಮಸ್ಯೆ, ಸ್ವಚ್ಛತೆಯ ಬಗ್ಗೆ ಬೆಳಕು ಚೆಲ್ಲಿದರಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವ ಸಂಪುಟದ ಬಗ್ಗೆ ಮಾಹಿತಿ ಪಡೆದರು.

ಇದೇ ವೇಳೆ ಮಾತನಾಡಿದ ಎಸ್.ಎ.ರಾಮದಾಸ್ ಅವರು, ಡಿ.ಬನುಮಯ್ಯ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.100ಕ್ಕೆ 100 ರಷ್ಟು ಬರುವಂತೆ ಶಿಕ್ಷಕರು ಶ್ರಮಿಸಬೇಕು. ವಿವಿಧ ವಿಷಯದಲ್ಲಿ ದುರ್ಬಲರಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಅವಧಿಯಲ್ಲಿ ಬೋಧಿಸುವ ಮೂಲಕ ಪರೀಕ್ಷೆಗೆ ಸಜ್ಜುಗೊಳಿಸಬೇಕು. ಅಲ್ಲದೆ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿಷಯವನ್ನು ಮನನ ಮಾಡುವ ಮೂಲಕ ನೆನಪಿನಲ್ಲಿಟ್ಟುಕೊಳ್ಳಬೇಕು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಮುಖ ಘಟ್ಟವಾಗಿದ್ದು, ಯಾವುದೇ ದುಶ್ಚಟಕ್ಕೆ ದಾಸರಾಗದೆ, ಟಿವಿ, ಸಿನಿಮಾಗಳಿಂದ ದೂರವಿದ್ದು, ಅಧ್ಯಯನ ಕಡೆ ಗಮನಹರಿಸುವಂತೆ ಅವರು ಸಲಹೆ ನೀಡಿದರು.

ಕಳೆದ ಮೂರು ವಾರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೊದಲನೇ ವಾರದಲ್ಲಿ ಭೇಟಿ ನೀಡಿದ್ದ ಕನಕಗಿರಿ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಗಮಿಸಿ ಗಿಡ ಬೆಳೆಸುವ ಬಗ್ಗೆ ಮಾಹಿತಿ ನೀಡಿದ್ದರು. ರೈಲ್ವೆ ವರ್ಕ್ ಶಾಪ್ ಶಾಲೆಯಲ್ಲಿ ಮಕ್ಕಳಿಗೆ ಅವಶ್ಯಕವಾಗಿರುವ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುವ ಸಲುಯಾಗಿ ಧ್ಯಾನದ ತರಬೇತಿ ನೀಡಲಾಗುತ್ತಿದೆ.

ಕುವೆಂಪುನಗರದ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನಡೆಸಲಾಗುತ್ತಿದೆ. ಈ ರೀತಿಯಲ್ಲಿ ಪ್ರತಿಯೊಂದು ಶಾಲೆಯಲ್ಲಿ ಪ್ರತಿಯೊಂದು ವಾರವೂ ಒಂದೊಂದು ವಿಶೇಷ ತರಬೇತಿ ನೀಡಲಾಗುತ್ತಿದೆ. ಸಂವಾದ ನಡೆಸಿದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮಾದುವೆ ಮಾಡಲು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿರುವ ವಿಷಯ ಬೆಳಕಿಗೆ ಬಂದಿತು. ಕಳೆದ ವರ್ಷ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಮದುವೆ ಮಾಡುವುದಕ್ಕಾಗಿ 10ನೇ ತರಗತಿಗೆ ಕಳುಹಿಸದೆ ಇರುವ ವಿಷ ತಿಳಿದು ಬಂದಿತು. ಈ ಮಕ್ಕಳ ಮಾಹಿತಿಯನ್ನು ಪಡೆದು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತಿಳಿಸಿ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದಕ್ಕೆ ಕ್ರಮ ಕೈಗೊಳ್ಳಲಾಯಿತು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಎಸ್‍ಎಸ್ ಸಂಸ್ಥೆಯ ಅಧ್ಯಕ್ಷ ಶ್ರೀಹರಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಶಾಲೆಯ ಪ್ರಾಂಶುಪಾಲ ಕೃಷ್ಣೇಗೌಡ, ತಿಪ್ಪೇಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರಿನ ಡಿ.ಬನುಮಯ್ಯ ಶಾಲೆಯಲ್ಲಿ ಶನಿವಾರ ಶಾಸಕ ಎಸ್.ಎ.ರಾಮದಾಸ್ ಅವರು `ಬಲಿಷ್ಠ ಭಾರತ-ಹಸಿರು ಭಾರತ’ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಚಿತ್ರದಲ್ಲಿ ಜಿಎಸ್‍ಎಸ್ ಸಂಸ್ಥೆಯ ಅಧ್ಯಕ್ಷ ಶ್ರೀಹರಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಶಾಲೆಯ ಪ್ರಾಂಶುಪಾಲ ಕೃಷ್ಣೇಗೌಡ ಹಾಗೂ ಇನ್ನಿತರರನ್ನು ಕಾಣಬಹುದು.

Translate »