ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಕರೆ
ಮೈಸೂರು

ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ವಿದ್ಯಾರ್ಥಿಗಳಿಗೆ ಸಚಿವ ಜಿ.ಟಿ. ದೇವೇಗೌಡ ಕರೆ

July 22, 2018

ಮೈಸೂರು: ಬದುಕಿನಲ್ಲಿ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿ, ಯಶಸ್ಸು ಸಾಧಿಸಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ 40ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಪಠ್ಯ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಬದುಕು ಸುಂದರವಾಗಿರಬೇಕಾದರೆ ನಿಮ್ಮಲ್ಲಿ ಶಿಸ್ತು, ತಾಳ್ಮೆ ಗುಣ, ನಡವಳಿಕೆ ಇರಬೇಕು. ಜೊತೆಗೆ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು. ನೀವು ನಿಮ್ಮ ಬದುಕಿನಲ್ಲಿ ಗುರಿಯೊಂದನ್ನು ಇಟ್ಟುಕೊಂಡು ಅಧ್ಯಯನ ನಿರತರಾಗಬೇಕು. ಇಂದು ಸಮಾಜದಲ್ಲಿ ಪುರುಷರಿಗೆ ಸಾಟಿ ಇಲ್ಲದಂತೆ ಸ್ತ್ರೀಯರು ಆಡಳಿತವನ್ನು ನಡೆಸುತ್ತಿದ್ದಾರೆ. ನೀವೂ ಇಂತಹ ಪ್ರತಿಭಾವಂತರಾಗಬೇಕು ಎಂದ ಅವರು, ಮಾಜಿ ಸಚಿವರಾದ ಕೆ. ಪುಟ್ಟಸ್ವಾಮಿಯವರೊಂದಿಗಿನ ತಮ್ಮ ಒಡನಾಟವನ್ನು ಇದೇ ವೇಳೆ ಸ್ಮರಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್‍ನ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ದಿವಂಗತ ಕೆ. ಪುಟ್ಟಸ್ವಾಮಿ, ಸಾಹುಕಾರ್ ಚನ್ನಯ್ಯ ಹಾಗೂ ಚಿಕ್ಕಬೋರಯ್ಯ ದೂರದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನೀವೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಿಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಿ. ಆ ಮೂಲಕ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಮರೀಗೌಡ, ಸಂಸ್ಥೆ ಗೌರವಾಧ್ಯಕ್ಷ ಗುಂಡಪ್ಪಗೌಡ ಹಾಗೂ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Translate »