‘ಲಯನ್ಸ್ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನದ ಜೊತೆ ಮುಖಂಡತ್ವದ ಗುಣ ಹೊಂದಬಹುದು’
ಮೈಸೂರು

‘ಲಯನ್ಸ್ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನದ ಜೊತೆ ಮುಖಂಡತ್ವದ ಗುಣ ಹೊಂದಬಹುದು’

July 8, 2018

ಲಯನ್ಸ್ ಕ್ಲಾಸಿಕ್ ಪದಗ್ರಹಣದಲ್ಲಿ ಜಿಲ್ಲಾ ಉಪ ರಾಜ್ಯಪಾಲ ನಾಗರಾಜ್ ವಿ.ಬೈರಿ ಅಭಿಮತ

ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಶತಮಾನೋತ್ಸವವನ್ನು ಆಚರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ವಲಯ-3, ಕ್ಷೇತ್ರ-9, ಜಿಲ್ಲೆ 317-ಎ 2018-19ರ ನೂತನ ಅಧ್ಯಕ್ಷ ಲಯನ್ ಎ.ಕೆ.ಗಿರಿಜೇಶ್, ಕಾರ್ಯದರ್ಶಿ ಲಯನ್ ಎ.ಎಂ.ನಾಗಣ್ಣ, ಖಜಾಂಚಿ ಲಯನ್ ಮಂಜುನಾಥ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಇಂದು ಲಯನ್ಸ್ ಎಂದಾಕ್ಷಣ ಎಲ್ಲರೂ ಗುರುತಿಸುತ್ತಾರೆ. ಇಂದು ನಮ್ಮ ದೇಶದಲ್ಲಿ ಸಾಕಷ್ಟು ಜನ ಕುಂಟರು, ಕುರುಡರು, ಅಂಗವಿಕಲರು, ನಿರ್ಗತಿಕರಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ನಾವೇಕೆ ಹೀಗೆ ಇರಬೇಕು ಎಂಬ ಮರುಕ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಎಷ್ಟೋ ಜನ ರೈತರು ತಮ್ಮ ಕುಟುಂಬವನ್ನು ರಕ್ಷಿಸುವುದಕ್ಕಾಗಿ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ಶೋಚನೀಯ. ಲಯನ್ಸ್ ಸಂಸ್ಥೆಗೆ ಸೇರಿದರೆ ವ್ಯಕ್ತಿತ್ವ ವಿಕಸನದ ಜೊತೆ ಮುಖಂಡತ್ವದ ಗುಣ ಹೊಂದಬಹುದು ಎಂದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಎ.ಕೆ.ಗಿರಿಜೇಶ್ ಮಾತನಾಡಿ, ಈ ವರ್ಷ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಘೋಷಿಸಿರುವ ವೇದವಾಕ್ಯ ‘ಸೇವೆ’ಗೆ ನನ್ನ ಅವಧಿಯಲ್ಲಿ ಶಕ್ತಿಮೀರಿ ಶ್ರಮಿಸಿ ಮುಂಚೂಣಿಯಲ್ಲಿರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ನಮ್ಮ ಸಂಸ್ಥೆ 17 ವರ್ಷಗಳ ಹಳೆಯ ಸಂಸ್ಥೆಯಾಗಿದ್ದು, ಇಂದು 7 ಮಂದಿ ನೂತನ ಸದಸ್ಯರನ್ನು ಸೇರಿಸಿಕೊಂಡಿರುವುದು ಹೆಮ್ಮೆಯ ವಿಷಯ. ನಾವು ಕ್ಲಾಸಿನಲ್ಲಿ ಕಲಿತದಕ್ಕಿಂತ ಮನೆಯಲ್ಲಿ ಕಲಿತದ್ದೇ ಜಾಸ್ತಿ. ವಿದ್ಯೆ ವಿನಯವನ್ನು ಕಲಿಸುತ್ತಾ ಇಲ್ಲ, ಅದು ಅಹಂಕಾರವನ್ನು ಕಲಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಡಾ.ಪ್ರಭಾಮಂಡಲ್, ಪ್ರಾಂತೀಯ ಅಧ್ಯಕ್ಷ ಲಯನ್ ಎಲ್.ವಿ.ಶ್ರೀನಿವಾಸ್, ವಲಯ ಅಧ್ಯಕ್ಷ ಲಯನ್ ಕೆ.ಎನ್.ದೇವಪ್ರಸಾದ್, ಲಯನ್ ಎನ್.ಜಯರಾಂ, ಲಯನ್ ಭಾಸ್ಕರ್, ಲಯನ್ ಸುಬ್ಬಣ್ಣ, ಲಯನ್ ಮೂರ್ತಿ, ಲಯನ್ ಧರ್ಮರಾಜ್ (ಧರ್ಮಣ್ಣ), ಲಯನ್ ಪ್ರೇಮಚಂದ್, ಲಯನ್ ರಾಮಚಂದ್ರ (ಪಾಲಹಳ್ಳಿ), ಲಯನ್ ಮಹೇಶ್, ಲಯನ್ ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಲಯನ್ ಯಶೋದಾ ರಾಮಚಂದ್ರ ಪ್ರಾರ್ಥಿಸಿದರು. ಲಯನ್ ಉಷಾ ಧರ್ಮರಾಜ್ ನಿರೂಪಿಸಿದರೆ, ಕಾರ್ಯದರ್ಶಿ ಲಯನ್ ನಾಗಣ್ಣ ವಂದಿಸಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಇತ್ತೀಚೆಗೆ ನಡೆದ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ವಲಯ-3ರ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.

Translate »