ಬದುಕಿನ ಉತ್ಸಾಹ, ಸಾಧಿಸುವ ಛಲ ರೂಢಿಸಿಕೊಳ್ಳಿ ಅಂಗವಿಕಲರಿಗೆ ಶಾಸಕ ರಾಮದಾಸ್ ಸಲಹೆ
ಮೈಸೂರು

ಬದುಕಿನ ಉತ್ಸಾಹ, ಸಾಧಿಸುವ ಛಲ ರೂಢಿಸಿಕೊಳ್ಳಿ ಅಂಗವಿಕಲರಿಗೆ ಶಾಸಕ ರಾಮದಾಸ್ ಸಲಹೆ

July 8, 2018

ಮೈಸೂರು: ಅಂಗವಿಕಲತೆ ಆವರಿಸಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಬದುಕಿನ ಉತ್ಸಾಹದೊಂದಿಗೆ ಸಾಧಿಸುವ ಛಲದಿಂದ ಮುನ್ನಡೆಯಬೇಕು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರಿನ ಹಳ್ಳದಕೇರಿಯ ಮಹಾವೀರನಗರದ ಶ್ರೀ ಸ್ಥಾನಿಕವಾಸೀ ಜೈನ್ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮತ್ತು ಪರಿಕರಗಳ ವಿತರಣಾ ಶಿಬಿರದಲ್ಲಿ ಫಲಾನುಭವಿಗಳಿಗೆ ಕೃತಕ ಕಾಲು ಮತ್ತು ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು.

ಅಪಘಾತದಿಂದ ಎದುರಾಗುವ ಅಂಗವಿಕಲತೆ ತಡೆಯಲಾಗದು. ಆದರೆ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಅಂಗಾಂಗಗಳನ್ನು ತೆಗೆಯುವ ಹಂತಕ್ಕೆ ತಲುಪುವಂತೆ ಮಾಡಿಕೊಳ್ಳಬಾರದು. ಒಂದು ವೇಳೆ ಈ ಹಂತಕ್ಕೆ ಬಂದರೂ ಬದುಕಿನ ಉತ್ಸಾಹ ಕಳೆದುಕೊಳ್ಳಬಾರದು ಹಾಗೂ ಅಂತಹವರು ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಹಿಮಾಲಯ ಪರ್ವತ ಏರಿದ ಅರುಣಿಮಾ ಸಿನ್ಹಾ ಎಂಬ ಯುವತಿ ಅಂಕವಿಲತೆಯನ್ನು ಮೆಟ್ಟಿ ನಿಂತು ಸಾಧನೆಗೈದಳು. ಇಂತಹ ಸಾಧಕರು ನಮಗೆ ಸ್ಫೂರ್ತಿಯಾಗಬೇಕು. ಈಕೆ ಒಮ್ಮೆ ರೈಲಿನಲ್ಲಿ ಪ್ರಯಾಣ ಸುತ್ತಿದ್ದ ವೇಳೆ ಚಿನ್ನಾಭರಣ ಕೊಡಲಿಲ್ಲ ಎಂಬ ಕಾರಣಕ್ಕೆ ಕಳ್ಳರು ಆಕೆಯನ್ನು ಬೋಗಿಯಿಂದ ಹೊರಗೆ ಎಸೆದಿದ್ದರು. ಇದರಿಂದ ಆಕೆಯ ಕಾಲು ತುಂಡಾಯಿತು. ಆದರೆ ಆಕೆ ಎದೆಗುಂದದೇ ಹಿಮಾಲಯ ಪರ್ವತ ಏರುವ ಗುರಿ ಹೊಂದಿದ್ದಲ್ಲದೆ, ಗುರಿ ಸಾಧನೆಗಾಗಿ ಕೃತಕ ಕಾಲು ಧರಿಸಿ ಕಠಿಣ ಅಭ್ಯಾಸದೊಂದಿಗೆ ತನ್ನ ಹಂಬಲವನ್ನು ಈಡೇರಿಸಿ, ದಾಖಲೆ ಬರೆದಳು. ಈ ರೀತಿಯ ಉತ್ಸಾಹ ನಮ್ಮಲ್ಲಿ ಮೂಡಬೇಕೇ ಹೊರತು ಅಂಕವಿಕಲತೆಯನ್ನೇ ನೆನೆದು ಕೈಕಟ್ಟಿ ಕೂರಬಾರದು ಎಂದು ಹುರಿದುಂಬಿಸಿದರು.

ಸಿಎಸ್‍ಆರ್ ಯೋಜನೆಯಡಿ ಸೇವಾ ಕಾರ್ಯ: ಭಗವಾನ್ ಮಹಾವೀರ ವಿಕಲಾಂಗ್ ಸಹಾಯತಾ ಸಮಿತಿ (ಜೈಪುರ ಫುಟ್), ರಾಯಚೂರು ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಶನ್ (ಆರ್‍ಕೆಬಿ ಫೌಂಡೇಶನ್) ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಕಂಪನಿಯ ಸಿಎಸ್‍ಆರ್ ಯೋಜನೆಯಡಿ ಈ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಶನ್‍ನ ಕಾರ್ಯಕರ್ತರು ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಿದ 200ಕ್ಕೂ ಹೆಚ್ಚು ಮಂದಿಗೆ ಉಚಿತ ಕೃತಕ ಕಾಲುಗಳ ವಿತರಣೆ ಹಾಗೂ 150ಕ್ಕೂ ಹೆಚ್ಚು ಮಂದಿಗೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಯಿತು.

ರಾಮಣಹಳ್ಳಿಯ ಶ್ರೀ ಸ್ವಾಮಿಬಸವಲಿಂಗ ಮೂರ್ತಿ ಶರಣು ಸ್ವಾಮೀಜಿ ಶಿಬಿರ ಉದ್ಘಾಟಿಸಿದರು. ಶಾಸಕ ಎಲ್.ನಾಗೇಂದ್ರ, ಆರ್‍ಕೆಬಿ ಫೌಂಡೇಶನ್‍ನ ಅಧ್ಯಕ್ಷ ಸೌಭಾಗ್ ರಾಜ್ ಭಂಡಾರಿ, ಸುಮತಿನಾಥ್ ಜೈನ್ ಶ್ವೇತಾಂಬರ್ ಮೂರ್ತಿಪೂಜಕ್ ಸಂಘದ ಅಧ್ಯಕ್ಷ ಅಶೋಕ್‍ಜೀ ದಾಂತೇವಾಡಿಯಾ, ಶ್ರೀಸ್ಥಾನಕವಾಸೀ ಜೈನ್, ರಾಯಚೂರಿನ ಎಂ.ಕೆ.ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೊಹಮ್ಮದ್ ರಿಯಾಜುದ್ದೀನ್ ಮತ್ತಿತರರು ಹಾಜರಿದ್ದರು.

Translate »