ಲೋಕ ಚುನಾವಣೆ: ವರ್ಗಾವಣೆಯಾದಲ್ಲಿ ವರದಿ ಮಾಡಿಕೊಳ್ಳದ ಅಧಿಕಾರಿಗಳ ಮಾಹಿತಿ ನೀಡಿ
ಮೈಸೂರು

ಲೋಕ ಚುನಾವಣೆ: ವರ್ಗಾವಣೆಯಾದಲ್ಲಿ ವರದಿ ಮಾಡಿಕೊಳ್ಳದ ಅಧಿಕಾರಿಗಳ ಮಾಹಿತಿ ನೀಡಿ

March 17, 2019

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿರುವ ಅಧಿಕಾರಿಗಳು ನಿಯೋಜಿತ ಸ್ಥಳಕ್ಕೆ ತೆರಳದಿದ್ದರೆ ಅಂತಹವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತಗಳಿಗೆ ಚುನಾ ವಣಾ ಆಯೋಗ ಸೂಚಿಸಿದೆ.

ಈ ಅಧಿಕಾರಿಗಳು ಹಾಜರಾಗದಿರುವುದಕ್ಕೆ ಸೂಕ್ತ ಮಾಹಿತಿ ನೀಡಿದ್ದರೆ ಅದನ್ನೂ ಆಯೋಗದ ಗಮನಕ್ಕೆ ತರುವಂತೆ ಹೇಳಿದೆ. ಅತಿವೃಷ್ಟಿ, ಅನಾವೃಷ್ಟಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದು ಎಂದು ಆಯೋಗ ಸ್ಪಷ್ಟ ಪಡಿಸಿದೆ. ಆಯೋಗವು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆ ಸಿದ ಕಾರ್ಯಾಗಾರದಲ್ಲಿ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್‍ಕುಮಾರ್ ಹಾಗೂ ಹೆಚ್ಚುವರಿ ಮುಖ್ಯಚುನಾವಣಾಧಿ ಕಾರಿ ಜಗದೀಶ್ ಮಾತನಾಡಿದರು. ಮಾದರಿ ನೀತಿ ಸಂಹಿತೆ ಜಾರಿ ನಂತರ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಅಂತಹ ವನ್ನು ಅಧಿಕಾರಿಗಳು ಮಾತ್ರ ಉದ್ಘಾಟಿಸಲು ಅವಕಾಶವಿದೆ ಎಂದು ಸ್ಪಷ್ಟ ಪಡಿಸಿದರು. ಯಾವುದೇ ಯೋಜನೆಗಳಿಗೆ ಹೊಸ ದಾಗಿ ಹಣ ಮಂಜೂರು ಮಾಡುವುದು, ಫಲಾನುಭವಿಗಳ ಆಯ್ಕೆಯಂತಹ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ. ಹೊಸ ಟೆಂಡರ್ ಪ್ರಕ್ರಿಯೆ, ಗುತ್ತಿಗೆದಾರರ ಕೆಲಸಗಳನ್ನು ಪ್ರಾರಂಭ ಮಾಡುವಂತಿಲ್ಲ, ಒಂದು ವೇಳೆ ಈಗಾಗಲೇ ಕೆಲಸ ಆರಂಭಿಸಿದ್ದರೆ ಅವುಗಳನ್ನು ಮುಂದುವರೆಸಬಹುದು, ಕೆಲಸ ಪೂರ್ಣಗೊಂಡಿದ್ದರೆ ಹಣ ಪಾವತಿಸಬಹುದು ಎಂದು ಮಾಹಿತಿ ನೀಡಿದರು.

ಸಚಿವರು ಸರ್ಕಾರಿ ವಾಹನ ಬಳಸುವಂತಿಲ್ಲ, ಒಂದು ವೇಳೆ ಬಳಸಬೇಕಿದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿ ಗಮನಕ್ಕೆ ತರಬೇಕು. ಸಾರ್ವಜನಿಕ ಮೈದಾನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೂ ಧ್ವನಿವರ್ಧಕಗಳ ಬಳಕೆಗೆ ನಿಷೇಧವಿದೆ. ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ ಎಂದು ವಿವರಿಸಿದರು. ಮಾಧ್ಯಮಕ್ಕೂ ಕಿವಿಮಾತು ಹೇಳಿದ ಆಯೋಗ, ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುವುದು ಬೇಡ, ಲೋಕಸಭಾ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗ ಬೇಕಾದರೆ ಅಪಪ್ರಚಾರದ ಸುದ್ದಿಗಳಿಗೆ ಮೊದಲು ಕಡಿವಾಣ ಹಾಕಿ ಎಂದರು.

ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳ ದುರ್ಬಳಕೆಗೆ ಅವಕಾಶವಿಲ್ಲ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮಾಧ್ಯಮಗಳು ಸ್ವಯಂ ನಿಯಂತ್ರಣಕ್ಕೆ ಒಳಗಾಗಬೇಕು, ಯಾವುದನ್ನು ಮಾಡಬಾರದು, ಯಾವ ಕಾರ್ಯಕ್ಕೆ ಅವಕಾಶ ಇದೆ ಎಂಬ ಬಗ್ಗೆ ಮಾಹಿತಿ ಜನರಿಗೆ ಒದಗಿಸಬೇಕು. ಕಾಸಿಗಾಗಿ ಸುದ್ದಿ ನಿಯಂತ್ರಣ ಕಷ್ಟ, ಆದರೂ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಮಾಧ್ಯಮಗಳು ಸಹಕರಿಸಬೇಕು. ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ರಾಜ್ಯಮಟ್ಟದ ಸಮಿತಿಯಿಂದ ಪೂರ್ವ ಅನುಮತಿ ಪಡೆಯುವುದು ಸೂಕ್ತ. ರಾಜಕೀಯ ಪಕ್ಷಗಳು ಮೆರವಣಿಗೆಗಳನ್ನು ಸಂಚಾರಕ್ಕೆ ತೊಂದರೆಯಾಗದಂತೆ ನಡೆಸಬೇಕು, ಮತದಾನ ದಿನದ 48 ಗಂಟೆ ಪೂರ್ವದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಒಂದು ವೇಳೆ ಪ್ರಕಟಿಸಬೇಕಿದ್ದರೆ ಜಾಹೀರಾತು ನೀಡುವವರ ವಿಳಾಸ ಕಡ್ಡಾಯ ಎಂದು ತಿಳಿಸಿದರು.

Translate »