ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ!
ಮೈಸೂರು

ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿ ರಾಷ್ಟ್ರಪತಿಗೆ ಆಶೀರ್ವದಿಸಿದ ಸಾಲುಮರದ ತಿಮ್ಮಕ್ಕ!

March 17, 2019

ನವದೆಹಲಿ: ರಾಷ್ಟ್ರಪತಿ ಭವನದ ಸಭಾಂಗಣ ಇಂದು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕನ್ನಡಿಗ ಶತಾಯುಷಿಯೊಬ್ಬರು ಶಿರಮುಟ್ಟಿ ಆಶೀರ್ವದಿಸಿದರು. ಈ ಅನಿರೀಕ್ಷಿತ ಘಟನೆಯಿಂದ ಸಭಾಂಗಣ ಒಂದು ಕ್ಷಣ ಅಚ್ಚರಿಗೊಳಗಾಯಿತು. ಕ್ಯಾಮರಾಗಳ ಫ್ಲ್ಯಾಷ್‍ಗಳು ತುಸು ಹೆಚ್ಚೇ ಬೆಳಕು ಚೆಲ್ಲಿದವು. ಈ ಪ್ರಸಂಗಕ್ಕೆ ಕಾರಣವಾಗಿದ್ದು, ಕರ್ನಾಟಕದ ಸಾಲು ಮರದ ತಿಮ್ಮಕ್ಕ!

ರಾಷ್ಟ್ರಪತಿಗಳು ಶನಿವಾರ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರ ಪ್ರೇಮಿ, ಸಾಲು ಮರದ ತಿಮ್ಮಕ್ಕ ಸೇರಿದಂತೆ 54 ಗಣ್ಯರಿಗೆ 2019ನೇ ಸಾಲಿನ ಪದ್ಮ ಪುರಸ್ಕಾರ ಗಳನ್ನು ಪ್ರದಾನ ಮಾಡಿದರು. ತಮ್ಮ ಹೆಸರು ಉದ್ಘೋಷಿತ ವಾದಾಗ ಪುಟ್ಟ ದೇಹದ ತಿಮ್ಮಕ್ಕ ಪುಟಪುಟನೆ ಹೆಜ್ಜೆ ಹಾಕುತ್ತಾ ರಾಷ್ಟ್ರಪತಿಗಳತ್ತಸಾಗಿ ಅವರೆದುರು ನಿಂತರು. ಪದ್ಮ ಪಶಸ್ತಿಯನ್ನು ರಾಷ್ಟ್ರಪತಿಗಳು ಮುಂದೊಡ್ಡುತ್ತಿದ್ದಂತೆಯೇ ಎರಡೂ ಕೈಗಳನ್ನು ಚಾಚಿ ವಿನಯದಿಂದ ಸ್ವೀಕರಿಸಿದ 107 ವರ್ಷಗಳ ತಿಮ್ಮಕ್ಕ, ಎದುರಿಗಿರುವುದು ಈ ದೇಶದ ಪ್ರಥಮ ಪ್ರಜೆ ಎಂಬು ದನ್ನೂ ಆಲೋಚಿಸದೇ, ವಯೋಸಹಜ ಗುಣ ಎಂಬಂತೆ ಆಶೀರ್ವದಿಸಲು ತಮ್ಮ ಬಲಗೈಯನ್ನು ಮೇಲೆತ್ತಿಯೇ ಬಿಟ್ಟರು. ಆ ಪುಟ್ಟ ದೇಹದ ಹಿರಿಯ ಜೀವದೆದುರು ಎತ್ತರದ ನಿಲುವಿನ ರಾಷ್ಟ್ರಪತಿಗಳೂ ಅಷ್ಟೇ ವಿನಯದಿಂದ ಶಿರಬಾಗಿ ನಿಂತರು. ಮೈಲುಗಳುದ್ದ ರಸ್ತೆಯ ಎರಡೂ ಬದಿ ನೆಟ್ಟು ಬೆಳೆಸಿದ್ದ ನೂರಾರು ಆಲದ ಮರಗಳಿಗೆ ಅಗಣಿತ ಪ್ರಮಾಣದಲ್ಲಿ ನೀರು ಹನಿಸಿ ಜಡ್ಡುಗಟ್ಟಿದ್ದ ತಮ್ಮ ಬಲಹಸ್ತವನ್ನು ರಾಮನಾಥ ಕೋವಿಂದ್ ಅವರ ತಲೆ ಮೇಲಿಟ್ಟ ತಿಮ್ಮಕ್ಕ ಅಷ್ಟೇ ಪ್ರೀತಿಯಿಂದ ಆಶೀರ್ವ ದಿಸಿದರು.

ಅನಿರೀಕ್ಷಿತವೆಂಬಂತೆ ಸೃಷ್ಟಿಯಾದ ಈ ಅಪ ರೂಪದ ಸನ್ನಿವೇಶ ಕಂಡು ಇಡೀ ಸಭಾಂಗಣ ಕ್ಷಣ ಕಾಲ ರೋಮಾಂಚನಗೊಂಡಿತು. ಈ ಬಾರಿ 112 ಸಾಧಕರಿಗೆ ಪದ್ಮ ಪುರಸ್ಕಾರ ಪ್ರಕಟಿಸಲಾಗಿತ್ತು. ಇದಕ್ಕೂ ಕೆಲ ದಿನ ಮೊದಲೇ 1 ಪದ್ಮವಿಭೂಷಣ, 8 ಪದ್ಮಭೂಷಣ ಮತ್ತು 46 ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಗಿದೆ.

Translate »