2019ರ ಲೋಕಸಭಾ ಚುನಾವಣೆ – ಬಿಜೆಪಿಯಿಂದ ನಾನು ಟಿಕೆಟ್ ಆಕಾಂಕ್ಷಿ: ಅರುಣ್‍ಕುಮಾರ್
ಚಾಮರಾಜನಗರ

2019ರ ಲೋಕಸಭಾ ಚುನಾವಣೆ – ಬಿಜೆಪಿಯಿಂದ ನಾನು ಟಿಕೆಟ್ ಆಕಾಂಕ್ಷಿ: ಅರುಣ್‍ಕುಮಾರ್

July 21, 2018

ಚಾಮರಾಜನಗರ:  ನಗರದ ಖಾಸಗಿ ಹೊಟೇಲ್‍ನಲ್ಲಿ ಶುಕ್ರವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಹಾಗೂ ಪಕ್ಷದ ಮುಖಂಡ ಅರುಣ್‍ಕುಮಾರ್ ಅವರು ಹಿತೈಷಿಗಳು ಹಾಗೂ ಯುವಕರ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಇದಕ್ಕಾಗಿ ಅಗತ್ಯವಾದ ಎಲ್ಲಾ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದೇನೆ. ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದೇನೆ. ಮೊದಲ ಹಂತವಾಗಿ ಚಾಮರಾಜನಗರದಲ್ಲಿರುವ ಹಿತೈಷಿಗಳು ಹಾಗೂ ಯುವಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸುವ ಉದ್ದೇಶದಿಂದ ಸಭೆ ನಡೆಸುತ್ತಿದ್ದೇನೆ ಎಂದರು.
ನಾನು ಕೊಳ್ಳೇಗಾಲ ತಾಲೂಕಿನವನು. ಹೀಗಾಗಿ, ಜಿಲ್ಲೆಯ ಮೇಲೆ ಅತೀವ ಪ್ರೀತಿ ಇದೆ. ಈ ಪ್ರೀತಿಯಿಂದಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದೇನೆ. ಇದಕ್ಕಾಗಿ ನನಗೆ ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲದೆ ಉತ್ತಮ ಆಡಳಿತ ನಡೆಸುವ ಮೂಲಕ ಜನಪ್ರಿಯ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ. ದೇಶದ್ಯಾಂತ ಪ್ರಧಾನಿ ನರೇಂದ್ರಮೋದಿ ಅವರ ಅಲೆ ಇರುವ ಕಾರಣ, ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ರೈತ ಮೋರ್ಚಾದ ಕಾರ್ಯದರ್ಶಿ ಗುರುಪ್ರಸಾದ್, ಮೈಸೂರು ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಸೋಮಶೇಖರ್, ನಾಗರಾಜ ಪಾಟೀಲ್, ಲೋಕೇಶ್, ಸಿದ್ದರಾಜು ಹಾಜರಿದ್ದರು.

Translate »