ಗೋಣಿಕೊಪ್ಪಲು: ರಸ್ತೆಯಲ್ಲಿನ ಗುಂಡಿ ತಪ್ಪಿಸುವಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿ ಸವಾರ ಸಾನಪ್ಪಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ. ಬೈಲುಕುಪ್ಪೆಯ ಸುಬ್ರಮಣಿ (50) ಮೃತ ಸವಾರ. ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಮಂಜುಳಾ (40) ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಗೋಣಿಕೊಪ್ಪದಿಂದ ಪಿರಿಯಾ ಪಟ್ಟಣದ ಕಡೆ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರಸ್ತೆ ಗುಂಡಿ ತಪ್ಪಿಸುವ ಸಂದರ್ಭ ಸ್ಕೂಟರ್ ನಿಧಾನವಾಗಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಲಾರಿ ನಿಯಂತ್ರಣ ತಪ್ಪಿ ಸ್ಕೂಟರ್‍ಗೆ ಡಿಕ್ಕಿಯಾಗಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸುಬ್ರಮಣಿ ಸ್ಥಳದಲ್ಲಿಯೇ ಸಾವನಪ್ಪಿದರು. ಮಂಜುಳಾ ಅವರಿಗೆ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.
ಆಂಬ್ಯುಲೆನ್ಸ್ ಇಲ್ಲದೆ ಪರದಾಟ: ಗಾಯಾಳು ಮಂಜುಳಾ ಅವರನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲು ಆಂಬ್ಯುಲೆನ್ಸ್ ಇಲ್ಲದೆ ಸ್ಥಳೀಯರು ಪರದಾಡಿದರು. ತಿತಿಮತಿ ಆರೊಗ್ಯ ಕೇಂದ್ರದ ಆಂಬ್ಯುಲೆನ್ಸ್ ದೊರೆಯಲಿಲ್ಲ. 108 ಕ್ಕೆ ಕರೆ ಮಾಡಿದರೂ ವಾಹನ ದೊರೆಯದೇ ತೊಂದರೆಯಾಯಿತು. ನಂತರ ಗೋಣಿಕೊಪ್ಪ ವಾಹನ ಚಾಲಕರ ಸಂಘದ ಆಂಬ್ಯುಲೆನ್ಸ್ ಮೂಲಕ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು.