ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: ದಸರಾ ಆನೆ ಗೋಪಾಲಸ್ವಾಮಿ ಅಸ್ವಸ್ಥ
ಮೈಸೂರು

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: ದಸರಾ ಆನೆ ಗೋಪಾಲಸ್ವಾಮಿ ಅಸ್ವಸ್ಥ

October 31, 2018

ಹುಣಸೂರು: ಮತ್ತಿಗೋಡು ಶಿಬಿರದ ಆನೆ ರಂಗ ಅಲಿಯಾಸ್ ರೌಡಿ ರಂಗ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ದುರಂತ ಜನಮಾನಸದಿಂದ ಮಾಸುವ ಮುನ್ನವೇ ದಸರಾ ಆನೆ ಗೋಪಾಲಸ್ವಾಮಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ.

ಗೋಪಾಲಸ್ವಾಮಿಯನ್ನು ಹಾಸನಕ್ಕೆ ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದ ವೇಳೆ ಆನೆ ಇದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಆನೆಯ ಮೇಲೆ ಬಿದ್ದು, ವಿದ್ಯುತ್ ತಂತಿ ತಾಗಿ ಗೋಪಾಲಸ್ವಾಮಿ ಅಸ್ವಸ್ಥಗೊಂಡು ಸಾವು- ಬದುಕಿನ ಹೋರಾಟ ನಡೆಸುತ್ತಿದ್ದಾನೆ ಎಂದು ಮೂಲವೊಂದು ತಿಳಿಸಿದರೆ, ಮತ್ತೊಂದು ಮೂಲದ ಪ್ರಕಾರ ಗೋಪಾಲಸ್ವಾಮಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದೆ.

ಆನೆ ಸಾಗಿಸುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದು ಖಚಿತಪಟ್ಟಿದೆ. ಆದರೆ ಅದರಲ್ಲಿದ್ದ ಗೋಪಾಲಸ್ವಾಮಿ ಸ್ಥಿತಿ ಏನು? ಎಂಬುದರ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಈ ಭಾಗದ ಆರ್‍ಎಫ್‍ಓ ಸುರೇಂದ್ರ ಅವರು ಕರೆ ಸ್ವೀಕರಿಸುತ್ತಿಲ್ಲ. ಎಸಿಎಫ್ ಪ್ರಸನ್ನಕುಮಾರ್ ಅವರಂತೂ `ಮೈಸೂರು ಮಿತ್ರ’ನ ಕರೆ ಸ್ವೀಕರಿಸಿದರೂ, ಯಾವುದೇ ಮಾಹಿತಿ ನೀಡಲು ಮುಂದಾಗದೇ `ನಾನು ಮಲಗಿದ್ದೆ, ಏನಿದ್ದರೂ ಬೆಳಿಗ್ಗೆ ನೋಡೋಣ, ಈಗೇನು ಅವಸರ’ ಎಂದು ಉಡಾಫೆಯ ಉತ್ತರ ನೀಡಿದರು.

ವಿವರ: ಹಾಸನದಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ದಸರಾ ಆನೆ ಗೋಪಾಲಸ್ವಾಮಿಯನ್ನು ಇಂದು ರಾತ್ರಿ 9.30ರ ಸುಮಾರಿನಲ್ಲಿ ಮತ್ತಿಗೋಡು ಶಿಬಿರದ ಸಮೀಪವಿರುವ ಕೊಳವಿಗೆ ಹಾಡಿ, ರಾಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಅರಣ್ಯ ಇಲಾಖೆ ಅತಿಥಿ ಗೃಹದ ಬಳಿಯಿಂದ ಆನೆ ಸಾಗಿಸುವ ವಿಶೇಷ ವಿನ್ಯಾಸದ ಲಾರಿ (ಕೆಎ 09-0756)ಯಲ್ಲಿ ಹತ್ತಿಸಲಾಯಿತು. ಗೋಪಾಲಸ್ವಾಮಿ ಜೊತೆ ಅದರ ಮಾವುತ ಸುಜನ್, ಕಾವಾಡಿ ಹಾಗೂ ಅಭಿಮನ್ಯು, ಕೃಷ್ಣ, ರಾಜ ಆನೆಗಳ ಮಾವುತರೂ ಕೂಡ ಲಾರಿಯಲ್ಲಿ ತೆರಳಿದ್ದಾರೆ. ಚಾಲಕ ಕೃಷ್ಣಮೂರ್ತಿ ಲಾರಿಯನ್ನು ಕೊಳವಿಗೆ ಹಾಡಿ ಗ್ರಾಮದ ಬಳಿ ಚಾಲನೆ ಮಾಡುತ್ತಿದ್ದ ವೇಳೆ ಆತನ ನಿಯಂತ್ರಣ ತಪ್ಪಿ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಮುರಿದು ಲಾರಿ ಮೇಲೆ ಬಿದ್ದಿದ್ದು, ವಿದ್ಯುತ್ ವೈರ್‍ಗಳು ಗೋಪಾಲಸ್ವಾಮಿ ಮೇಲೆ ಬಿದ್ದ ಪರಿಣಾಮ ಆತ ಘೀಳಿಟ್ಟು, ಅಸ್ವಸ್ಥನಾಗಿ ಲಾರಿಯಲ್ಲೇ ಕುಸಿದು ಬಿದ್ದ ಎಂದು ಮೂಲವೊಂದು ತಿಳಿಸಿದೆ.

ಆದರೆ ಲಾರಿ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಮುರಿದು ಬೀಳುತ್ತಿದ್ದಂತೆಯೇ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ದಸರಾ ಆನೆ ಗೋಪಾಲಸ್ವಾಮಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಮತ್ತೊಂದು ಮೂಲ ತಿಳಿಸುತ್ತಿದ್ದು, ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಭಾಗದ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಮುಜೀಬ್ ಅವರು ಕೊಡ್ಲಿಪೇಟೆಯಲ್ಲಿದ್ದಾರೆ. ಅವರಿಗೆ ಈ ಘಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಆನೆಗೆ ಯಾವುದೇ ರೀತಿಯ ಅಪಾಯ ಸಂಭವಿಸಿರುವ ಸಾಧ್ಯತೆ ಇಲ್ಲ ಎಂದು ಅರಣ್ಯ ಇಲಾಖೆಯ ನೌಕರರೊಬ್ಬರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರು ದಸರಾ ಜಂಬೂ ಸವಾರಿ ಗಜಪಡೆಯ ಮುಂಚೂಣಿ ಆನೆಗಳಾದ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ ಮುಂತಾದವು ಇವೆ. ಈ ಆನೆಗಳಿಗೆ ವಯಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಗಜಪಡೆಯ ಆನೆಗಳನ್ನು ಅರಣ್ಯ ಇಲಾಖೆ ತಯಾರಿ ಮಾಡುತ್ತಿದ್ದು, ಆ ಸಾಲಿನಲ್ಲಿ ಗೋಪಾಲಸ್ವಾಮಿ ಕೂಡ ಇದ್ದಾನೆ. 2011ರಿಂದ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಗೋಪಾಲ ಸ್ವಾಮಿಗೆ ಮಸ್ತಿ ಇದ್ದ ಕಾರಣ ಈ ಬಾರಿ ಮೈಸೂರಿಗೆ ಕರೆತಂದಿರಲಿಲ್ಲ. ಈತ 7 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾನೆ. ನಿಯಮದಂತೆ ರಾತ್ರಿ ವೇಳೆ ಆನೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವಂತಿಲ್ಲ. ಹಾಗಿದ್ದರೂ ಕೂಡ ರಾತ್ರಿ 9.30ರ ಸುಮಾರಿನಲ್ಲಿ ಗೋಪಾಲಸ್ವಾಮಿಯನ್ನು ಹಾಸನಕ್ಕೆ ಕರೆದೊಯ್ಯಲು ಲಾರಿಗೆ ಹತ್ತಿಸಿರುವುದು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆ ಬಗ್ಗೆ ತಳೆದಿರುವ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ ಎಂದು ಪ್ರಾಣಿ ಪ್ರಿಯರೊಬ್ಬರು ತಿಳಿಸಿದ್ದಾರೆ.

Translate »