ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಯಲ್ಲಿ ಬಾರೀ ಕಂದಕ ಏರ್ಪಡುತ್ತಿದೆ. ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡರೂ, ಕಾರ್ಯಕರ್ತರು ಮೈತ್ರಿಗೆ ಒಪ್ಪಿಗೆ ನೀಡುತ್ತಿಲ್ಲ. ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಸೃಷ್ಟಿಯಾಗುತ್ತಿದೆ. ಮತ್ತೊಂದು ಕಡೆ ಬಹಿರಂಗವಾಗಿಯೇ ಬಿಜೆಪಿಗೆ ಜೈಕಾರ ಕೂಗುವ ಮೂಲಕ ಮುಖಂಡರಿಗೆ ತೀವ್ರ ಇರಿಸು-ಮುರಿಸು ಉಂಟು ಮಾಡಲಾಗಿದೆ. ಒಟ್ಟಾರೆ ಸಕ್ಕರೆ ನಗರದಲ್ಲಿ ಕೈ ಕಾರ್ಯ ಕರ್ತರು ಹಾಗೂ ಮುಖಂಡರ ನಡುವೆ ಬಾರೀ ಭಿನ್ನಮತ ಸ್ಫೋಟಗೊಂಡಿದೆ.
ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಗದ್ದಲ: ಶ್ರೀರಂಗಪಟ್ಟಣದ ಖಾಸಗಿ ಸಮು ದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಖಂಡರು ಹಾಗೂ ವರಿಷ್ಠರ ಸಮ್ಮುಖದಲ್ಲೇ ಕಾರ್ಯ ಕರ್ತರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿ, ಬಿಜೆಪಿಗೆ ಜೈಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಪರವಾಗಿ ಕೆಲಸ ಮಾಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ಕೆ.ಜೆ.ಜಾರ್ಜ್‍ಗೆ ರವಾನಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಮೈತ್ರಿ ವಿಚಾರವಾಗಿ ಗದ್ದಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ನಾವೇಕೆ ಜೆಡಿಎಸ್ ಪರವಾಗಿ ಕೆಲಸ ಮಾಡಬೇಕು? ಎಂದು ಪ್ರಶ್ನೆ ಎತ್ತಿದರು.
ಮಳವಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಪಕ್ಷದ ಮುಖಂಡರ ವಿರುದ್ಧವೇ ವಾಗ್ದಾಳಿ ನಡೆಸಿದರು. ಸಭೆಯ ಆರಂಭದಲ್ಲಿಯೇ ಗದ್ದಲ ಶುರುವಾಯಿತು. ಇದರಿಂದ ಮುಖಂಡರು ಒಂದು ಕ್ಷಣ ವಿಚಲಿತರಾದ ನಂತರ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸುವ ಯತ್ನ ನಡೆಸಿದರೂ ಕಾರ್ಯಕರ್ತರ ಆಕ್ರೋಶ ತಾರಕಕ್ಕೇರಿತು.
ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಈ ವೇಳೆ ನರೇಂದ್ರಸ್ವಾಮಿ ಮಾತನಾಡಿ, ಪಕ್ಷದ ಮರ್ಯಾದೆ ಕಾಪಾಡಿ. ಹೈಕಮಾಂಡ್ ಸೂಚನೆಯಂತೆ ಎಲ್ಲರೂ ಮೈತ್ರಿ ಧರ್ಮವನ್ನು ಪಾಲಿಸಿ ಎಂದು ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರು. ಆದರೂ ಕಾರ್ಯಕರ್ತರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿ, ಸಭೆಯಿಂದ ಹೊರ ನಡೆದರು.
ಇತ್ತ ರೈತ ಸಂಘ, ಸ್ವರಾಜ್ ಇಂಡಿಯಾ ಮುಖಂಡರು, ಕಾರ್ಯಕರ್ತರು, ಮುಖಂಡ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಮಂಡ್ಯದ ಕಾವೇರಿ ಉದ್ಯಾನವನದಲ್ಲಿ ಮಂಗಳವಾರ ಸಭೆ ನಡೆಸಿ ಮಹತ್ವದ ಮೂರು ನಿರ್ಣಯ ಕೈಗೊಂಡರು. ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೆ ಬೆಂಬಲ ಸೂಚಿಸದೇ, ಮುಖಂಡರು ತಟಸ್ಥವಾಗಿ ಉಳಿಯುವುದು. ಕಾರ್ಯಕರ್ತರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಚಲಾವಣೆ ಮಾಡುವುದು. ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹಾಕುವುದು ಎಂಬ ನಿರ್ಣಯ ಕೈಗೊಂಡರು. ಅಲ್ಲದೇ ನ. 16ರಂದು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.