ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರನ್ನು ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಗೆಲುವಿನ ನಗೆ ಬೀರುವ ಮೂಲಕ ಸಕ್ಕರೆನಾಡು ಜೆಡಿಎಸ್‍ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತಾಯಿತು. ಆದರೂ, ಚುನಾವಣೆಯಲ್ಲಿ ಬಿಜೆಪಿ 2ಲಕ್ಷಕ್ಕೂ ಹೆಚ್ಚು ಮತ ಗಳಿಸಿ ಮೊದಲ ಬಾರಿಗೆ ಇಷ್ಟೊಂದು ಮತಪಡೆದ ದಾಖಲೆ ನಿರ್ಮಾಣ ಮಾಡಿದೆ.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಚುನಾವಣೆಗೆ ಅಷ್ಟೇನು ಪ್ರತಿಕ್ರಿಯೆ ನೀಡದೆ ನೀರಸ ಮತದಾನ ನಡೆದಿದರೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಮಾಜಿ ಸಂಸದರಾದ ಅಂಬರೀಶ್ ಹಾಗೂ ರಮ್ಯಾ ಅವರಿಗಿಂತಲೂ ಹೆಚ್ಚಿನ ಅಂತರದಲ್ಲಿ ಜಯ ಗಳಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ: ಮಾಜಿ ಸಚಿವ ಅಂಬರೀಶ್ ಅವರು ಮತದಾನದ ವೇಳೆ ಎಲ್.ಆರ್.ಶಿವರಾಮೇಗೌಡರು, ರಮ್ಯಾ ಮತ್ತು ನನ್ನ ದಾಖಲೆ ಮುರಿತ್ತಾನೆ. ಮಂಡ್ಯದ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾನೆ. ಎಂದಿದ್ದರು. ಅದರಂತೆ ದಾಖಲೆಯ ಗೆಲುವನ್ನು ಎಲ್‍ಆರ್‍ಎಸ್ ಪಡೆದಿದ್ದಾರೆ.
ಈ ಹಿಂದೆಯೂ ಕೂಡ ಅಂಬರೀಶ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಅಂದು ನುಡಿದಿದ್ದ ಮಾತು ನಿಜವಾಗಿತ್ತು.
1998ರಲ್ಲಿ ಅಂಬರೀಶ್ ಬಾರಿ ಅಂತರದಿಂದ ಜಿ.ಮಾದೇಗೌಡ ಅವರನ್ನು ಮಣಿಸಿದ್ದರು. ಅಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಂಬರೀಶ್ 4,31,439 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡ 2,50,916 ಮತ ಗಳಿಸಿದ್ದರು. ಬರೋಬ್ಬರಿ 1,80,523 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದರು. ಈಗ ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆಯನ್ನು ಎಲ್.ಆರ್. ಶಿವರಾಮೇಗೌಡ ಮುರಿದಿದ್ದಾರೆ.
ಎಲ್‍ಆರ್‍ಎಸ್‍ಗೆ ಶಾಪ ವಿಮೋಚನೆ: ಎರಡು ದಶಕಗಳ ರಾಜಕೀಯ ವನವಾಸವನ್ನು ಎಲ್.ಆರ್.ಶಿವರಾಮೇಗೌಡ ಅಂತ್ಯಗೊಳಿಸಿದ್ದಾರೆ. 24 ವರ್ಷಗಳ ಬಳಿಕ ಮಿನಿ ಸಮರದಲ್ಲಿ ಶಿವರಾಮೇಗೌಡ ಗೆಲುವಿನ ಸಿಹಿ ಉಂಡಿದ್ದಾರೆ. ಕಳೆದ 24 ವರ್ಷಗಳಲ್ಲೇ ದಾಖಲೆಯ ಅತೀ ಹೆಚ್ಚು ಅಂತರದಲ್ಲಿ ಗೆದ್ದು ಬೀಗಿದ್ದಾರೆ.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮತ ಎಣಿಕಾ ಕೇಂದ್ರ ಬಾಲಕರ ಸರ್ಕಾರಿ ಕಾಲೇಜಿಗೆ ಆಗಮಿಸಿದ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಪ್ರುಲ್ಲಾಖಾನ್, ಜಿಲ್ಲಾಧ್ಯಕ್ಷ ಡಿ.ರಮೇಶ್ ಮತ್ತಿತರರು ಎಲ್.ಆರ್.ಶಿವರಾಮೇಗೌಡರನ್ನು ಅಭಿನಂದಿಸಿದರು.
ಸಂಭ್ರಮವೇ ಇರಲಿಲ್ಲ: ಹಿಂದಿನಂತೆಯೇ ಈ ಭಾರಿಯ ಮತ ಎಣಿಕಾ ಕೇಂದ್ರದ ಸುತ್ತ ವಿಜಯೋತ್ಸವ ಸಂಭ್ರಮವೇ ಇರಲಿಲ್ಲ. ಪೊಲೀಸರನ್ನು ಹೊರತು ಪಡಿಸಿದರೆ ಜೆಡಿಎಸ್, ಕಾಂಗ್ರೆಸ್‍ನ ಕಾರ್ಯಕರ್ತರು ಇರಲಿಲ್ಲ. ಜನಸಂದಣಿ ತಡೆಗೆ ಹಾಕಲಾಗಿದ್ದ ತಡೆಗೋಡೆಗಳ ಪಕ್ಕಲ್ಲಿ ಪೊಲೀಸರಷ್ಟೇ ಕುಳಿತಿದ್ದುದು ಕಂಡು ಬಂತು. ಇಡೀ ಮೈದಾನವೆಲ್ಲಾ ಬಿಕೋ ಎನ್ನುತ್ತಿತ್ತು.
ಮದ್ದೂರು ವರದಿ: ‘ನನಗಿರುವ ಅಲ್ಪಾವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮೈಸೂರು ವಿಭಾಗೀಯ ಜೆಡಿಎಸ್ ವೀಕ್ಷಕ ಸಾದೊಳಲು ಸ್ವಾಮಿ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಹಾಗೂ ಎಲ್ಲರ ಸಾಂಘಿಕ ಹೋರಾಟ ಫಲವಾಗಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದೇನೆ. ಇದು ಅತ್ಯಂತ ಖುಷಿ ತಂದಿದೆ. ಈ ಗೆಲುವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅರ್ಪಿಸುತ್ತೆನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಶಾಸಕರ ಜೊತೆಗೂಡಿ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮೈಸೂರು ವಿಭಾಗೀಯ ಜೆಡಿಎಸ್ ವೀಕ್ಷಕ ಸಾದೊಳಲು ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಮನಹಳ್ಳಿ ಸ್ವಾಮಿಗೌಡ, ಮುಖಂಡರಾದ ಕೂಳಗೆರೆ ಶೇಖರ್, ಸತೀಶ್, ಡಾಬಾ ಕಿಟ್ಟಿ, ಪ್ರಸನ್ನ, ಮಧು ಇದ್ದರು.
ಮಂಡ್ಯ ಲೋಕಸಭಾ ಉಪ ಚುನಾವಣೆ ಫಲಿತಾಂಶದ ವಿವರ
ಲೋಕಸಭೆ ಉಪಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್‍ನ ಶಿವರಾಮೇಗೌಡ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಡಾ.ಸಿದ್ದರಾಮಯ್ಯ ಅವರಿಗಿಂತ 3,24,925 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಯಾರು ಯಾರಿಗೆ ಎಷ್ಟು ಮತ?
ಎಲ್.ಆರ್ ಶಿವರಾಮೇಗೌಡ (ಜೆಡಿಎಸ್)- 5,69,347
ಡಾ.ಸಿದ್ದರಾಮಯ್ಯ (ಬಿಜೆಪಿ)- 2,44,404
ಕೌಡ್ಲೆ ಚನ್ನಪ್ಪ (ಪಕ್ಷೇತರ)- 9,094
ಬಿ.ಎಸ್.ಗೌಡ (ಪಕ್ಷೇತರ)- 4,086
ನವೀನ್ ಕುಮಾರ್ (ಪಕ್ಷೇತರ)- 15,307
ನಂದೀಶ್ ಕುಮರ್ (ಪಕ್ಷೇತರ)- 4064
ಕೆ.ಎಸ್.ರಾಜಣ್ಣ (ಪಕ್ಷೇತರ)- 7421
ಶಂಭುಲಿಂಗೇಗೌಡ (ಪಕ್ಷೇತರ)- 5,483
ಎಂ.ಹೊನ್ನೇಗೌಡ (ಪಕ್ಷೇತರ)- 17,842
ಅಂಚೆ ಮತಪತ್ರ-76
ನೋಟಾ- 15,480
ಒಟ್ಟು ಚಲಾವಣೆಯಾದ ಮತ- 8,92,528
ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ
ಮಂಡ್ಯ- 1,05,138
ಮಳವಳ್ಳಿ- 1,12,338
ಮದ್ದೂರು- 1,15,660
ನಾಗಮಂಗಲ- 1,16,889
ಮೇಲುಕೋಟೆ- 1,16,256
ಶ್ರೀರಂಗಪಟ್ಟಣ್ಣ-1,16,554
ಕೆ.ಆರ್.ಪೇಟೆ-1,14,318
ಕೆ.ಆರ್.ನಗರ-95,309
ದಾಖಲೆಯ ಗೆಲುವು ದೇವೇಗೌಡರದ್ದು: ಶಿವರಾಮೇಗೌಡ
ಮಂಡ್ಯದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ಜೆಡಿಎಸ್ ಶಿವರಾಮೇಗೌಡ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರಿಗೂ ಸೇರಿದ್ದಾಗಿದೆ. ಚೆಲುವರಾಯಸ್ವಾಮಿ ಆದಿಯಾಗಿ ಎಲ್ಲರ ಶ್ರಮದ ಗೆಲುವು ಇದಾಗಿದೆ. ಎರಡು ಪಕ್ಷಗಳು ಸೇರಿ ಹೆಚ್ಚಿನ ಅಂತರದ ಗೆಲುವು ಸಾಧಿಸಬೇಕು ಎಂದಿಕೊಂಡಿದ್ದೇವು. ಅದರಂತೆ ಶೇ.75 ರಷ್ಟು ಮತ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಗೆಲುವು ನನ್ನದಲ್ಲ. ನಮ್ಮ ಪಕ್ಷದ್ದು, ಮೈತ್ರಿ ಸರ್ಕಾರದ್ದು, 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವರ ಆಶಿರ್ವಾದಿಂದ ಟಿಕೆಟ್ ದೊರೆಯಿತು. ಜನರ ಒಲವಿಗೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇನೆ. ವರಿಷ್ಠರು ಈ ಚುನಾವಣೆಗೆ ಮಾತ್ರ ಟಿಕೆಟ್ ಎಂದಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ಅವರಿಗೆ ಬಿಟ್ಟಿದ್ದು, ಸಂಸದರಾಗಿ ಇಡೀ ರಾಜ್ಯ, ದೇಶ ಮಾಡದೇ ಇರುವಂತಹ ಕೆಲಸವನ್ನು ನಮ್ಮ ದೇವೇಗೌಡರು ಮಾಡಿಕೊಂಡು ಬಂದಿದ್ದಾರೆ. ಅವರು ಮುಂದೆ ಹೋದರೆ ಅವರೊಂದಿಗೆ ಬ್ಯಾಗ್ ಹಿಡಿದುಕೊಂಡು ಅವರೊಂದಿಗೆ ಹಿಂದೆ ಹೋಗುತ್ತೇನೆ. ಅವರು ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ ಅವೆಲ್ಲಾ ನಮ್ಮ ಕಾರ್ಯಕ್ರಮ ಎಂದು ತಿಳಿಸಿದರು.
ಮಂಡ್ಯ ಜನರ ಜ್ವಲಂತ ಸಮಸ್ಯೆ ಬಗೆಹರಿಸಲು ಗಮನ ಹರಿಸುತ್ತೇನೆ. ನಮ್ಮ ಜಿಲ್ಲಾ ಮಂತ್ರಿಗಳೊಂದಿಗೆ ಸೇರಿ ಶಾಸಕರೊಂದಿಗೆ ಸೇರಿ ಜನರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ದೀಪಾವಳಿ ಹಬ್ಬದಂದು ನೀಡಿದ ಸಿಹಿಯನ್ನು ಅವರ ಸೇವೆಗೆ ಮೀಸಲಿಡುತ್ತೇನೆ. ಪಕ್ಷದ ಮತ್ತು ಮೈತ್ರಿ ಪಕ್ಷದ ವಿಶ್ವಾಸ ಉಳಿಸಿಕೊಳ್ಳುತ್ತೇನೆ – ಎಲ್.ಆರ್.ಶಿವರಾಮೇಗೌಡ, ಸಂಸದ
ನೈತಿಕವಾಗಿ ಗೆದ್ದಿದ್ದೇನೆ: ಡಾ.ಸಿದ್ದರಾಮಯ್ಯ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿಗೆ 2.44 ಲಕ್ಷಕ್ಕೂ ಹೆಚ್ಚು ಮತಗಳಿಸಿದೆ. ಜಿಲ್ಲೆಯಲ್ಲಿ ಬಿಜೆಪಿಯತ್ತ ಜನರ ಒಲವು ಇದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನನಗೆ ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸೋತಿಲ್ಲ, ನೈತಿಕವಾಗಿ ಗೆದ್ದಿದ್ದೇನೆ. ಕ್ಷೇತ್ರದ ಜನತೆ ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಹಣಬಲ ತೋಳ್ ಬಲ, ಮೂವರು ಸಚಿವರು, 7 ಜೆಡಿಎಸ್ ಶಾಸಕರ ಪ್ರಚಾರದ ನಡುವೆಯೂ ಬಿಜೆಪಿಗೆ ದಾಖಲೆಯ ಮತ ಬಂದಿವೆ. ಬಿಜೆಪಿಗೆ ನೆಲೆಯೇ ಇಲ್ಲಾ ಎನ್ನುತ್ತಿದ್ದವರಿಗೆ ಈ ಭಾರಿ ನನಗೆ ಬಂದಿರುವ ಮತಗಳೇ ಉತ್ತರವಾಗಿದೆ. ಮುಂದೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಹೇಳಿದರು.
ಸೋಲಿನಿಂದ ಎದೆ ಗುಂದುವುದಿಲ್ಲ. ಕ್ಷೇತ್ರದಲ್ಲಿ ಮತ್ತಷ್ಟು ಸಂಚಾರ ಮಾಡಿ ಪಕ್ಷ ಕಟ್ಟುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ. – ಡಾ.ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ