ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ
ಮೈಸೂರು

ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ

October 31, 2018

ಮೈಸೂರು: ಮೈಸೂರು ಉದ್ಯಮಿಯಿಂದ 6 ಲಕ್ಷ ರೂ. ವಿದೇಶಿ ಕರೆನ್ಸಿ ಸೇರಿ 25 ಲಕ್ಷ ರೂ. ದೋಚಿ ತಲೆಮರೆಸಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳನ್ನು 40 ದಿನಗಳ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಮೈಸೂರು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು, ಮಿರ್ಲೆ ನಿವಾಸಿ ಸುರೇಶ್ ಮಗ ಶ್ರೀಧರ್ (28), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಮೇಶ್ ಮಗ ಪ್ರಸಾದ್(24), ಅಮೃತ ಹಳ್ಳಿ ನಿವಾಸಿ ಶ್ರೀನಿವಾಸ್ ಮಗ ಭರತ್ ಕುಮಾರ್(20) ಹಾಗೂ ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ ಮಹದೇವ್ ಮಗ ನಟೇಶ್(24) ಬಂಧಿತರು.

ತಲೆಮರೆಸಿಕೊಂಡಿರುವ ಮಧು, ರವಿ ಹಾಗೂ ವಿಜಯ್ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಬಂಧಿತರಿಂದ 8 ಲಕ್ಷ ರೂ. ನಗದು, ಟಿವಿ, ಮಾರುತಿ ಆಲ್ಟೋ ಕಾರು, 1 ಚಿನ್ನದ ಬ್ರೇಸ್‍ಲೆಟ್, 1 ಸರ ಹಾಗೂ 2 ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಳಿವಿನ ಜಾಡು ಹಿಡಿದ ಪೊಲೀಸರು ಬೆನ್ನತ್ತಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೊರ ವಲಯದಲ್ಲಿ ಭಾನುವಾರ ಆರೋಪಿಗಳನ್ನು ಬಂಧಿಸಿ, ನಗದು, ಕಾರು ಹಾಗೂ ಚಿನ್ನಾಭರಣ ವಶಪಡಿಸಿ ಕೊಂಡರು. ಮೈಸೂರಿಗೆ ಕರೆತಂದು ಕಾರ್ಯಾ ಚರಣೆ ನಡೆಸಿದ ನಂತರ ಸೋಮವಾರ ಸಂಜೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಘಟನೆ ವಿವರ: ಮೈಸೂರಿನ ವಿಜಯ ನಗರ 1ನೇ ಹಂತ, 2ನೇ ಮೇನ್ ನಿವಾಸಿಯಾದ ಅರುಣ್‍ಕುಮಾರ್ ಅವರು ಚಿಕ್ಕ ಗಡಿಯಾರದ ಬಳಿ ಶಿವರಾಂಪೇಟೆಯಲ್ಲಿ ವಿದೇಶಿ ಕರೆನ್ಸಿ ಎಕ್ಸ್‍ಚೇಂಜ್ ಏಜೆನ್ಸಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಸ್ಥಳೀಯ ಬ್ಯಾಂಕ್ ಶಾಖೆಗಳಲ್ಲಿ ವಹಿವಾಟು ನಡೆಸುತ್ತಿದ್ದರು.

ಮಾಹಿತಿ ಕಲೆ ಹಾಕಿದ: ಮೈಸೂರಿನ ಖಾಸಗಿ ಬ್ಯಾಂಕೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪ್ರಸಾದ್, ಅರುಣ್ ಕುಮಾರ್ ಲಕ್ಷಾಂತರ ರೂ. ವಹಿವಾಟು ನಡೆಸು ತ್ತಿದ್ದ ವಿಷಯವನ್ನು ತಿಳಿದುಕೊಂಡಿದ್ದ. ಕಚೇರಿ ಬಾಗಿಲು ಹಾಕಿ ಮನೆಗೆ ಹಣ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆಯೂ ಮಾಹಿತಿ ಹೊಂದಿದ್ದ ಆತ, ಹೇಗಾದರೂ ಮಾಡಿ ಹಣ ಲಪಟಾ ಯಿಸಬೇಕೆಂದು ಸ್ಕೆಚ್ ಹಾಕಿದ.

ಬೆಂಗಳೂರಲ್ಲಿ ಸಂಚು: ಇದ್ದಕ್ಕಿದ್ದಂತೆಯೇ ಬೆಂಗಳೂರಿಗೆ ತೆರಳಿದ ಪ್ರಸಾದ್, ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ಸ್ನೇಹಿತರಾದ ಶ್ರೀಧರ್, ಭರತ್ ಕುಮಾರ್, ನಟೇಶ್, ಮಧು, ರವಿ ಮತ್ತು ವಿಜಯ್‍ಗೆ ಪಾರ್ಟಿಯೊಂದರಲ್ಲಿ ಮೈಸೂರಿನ ಅರುಣ್‍ಕುಮಾರ್‍ರಿಂದ ಹಣ ದೋಚಿ ದರೆ ದಿಢೀರ್ ಶ್ರೀಮಂತರಾಗಬಹುದು, ಸಣ್ಣ ಪುಟ್ಟ ಕೆಲಸಕ್ಕೆ ವಿದಾಯ ಹೇಳಿ ಐಷಾರಾಮಿ ಜೀವನ ನಡೆಸಬಹುದೆಂದು ಆಸೆ ಹುಟ್ಟಿಸಿದ.

ಈ ಕಾರ್ಯಾಚರಣೆಗೆ ಒಪ್ಪಿದ ಇತರ 6 ಮಂದಿಯನ್ನು ಮೈಸೂರಿಗೆ ಕರೆತಂದು ಎಲ್ಲಾ ಏಳೂ ಮಂದಿ 3 ದಿನಗಳ ಕಾಲ ಅರುಣ್ ಕುಮಾರ್ ಅವರ ವ್ಯವಹಾರ, ಚಲನ-ವಲನ ಹಾಗೂ ಯಾವಾಗ, ಯಾವ ಮಾರ್ಗದಲ್ಲಿ ಮನೆಗೆ ಹಿಂದಿರುಗುತ್ತಾರೆ ಎಂಬುದನ್ನೆಲ್ಲಾ ತಿಳಿದುಕೊಂಡರು.

ಕಾರ್ಯಾಚರಣೆ: ಬೆಳಿಗ್ಗೆಯಿಂದ ರಾತ್ರಿ ವರೆಗೂ ತಮ್ಮ ಕರೆನ್ಸಿ ಕಚೇರಿಯಲ್ಲಿ ಎಕ್ಸ್ ಚೇಂಜ್‍ನಿಂದ ಬಂದಿದ್ದ 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಮತ್ತು 19 ಲಕ್ಷ ರೂ. ಭಾರ ತೀಯ ಕರೆನ್ಸಿ ಸೇರಿ ಒಟ್ಟು 25 ಲಕ್ಷ ರೂ. ಗಳನ್ನು ತನ್ನ ಹೋಂಡಾ ಆಕ್ಟೀವಾ ಸ್ಕೂಟರ್‍ನ ಡಿಕ್ಕಿಯಲ್ಲಿಟ್ಟುಕೊಂಡು ಸೆಪ್ಟೆಂಬರ್ 22ರಂದು ಅರುಣ್‍ಕುಮಾರ್ರಾತ್ರಿ 9.30 ಗಂಟೆಗೆ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ಗಳಲ್ಲಿ ಬಂದ ಏಳು ಮಂದಿ ವಿಜಯನಗರ 1ನೇ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಬಳಿ ‘ಬೈಕಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಬಂದಿದ್ದೀಯಾ’ ಎಂದು ಜಗಳ ತೆಗೆದು ಅರುಣ್‍ಕುಮಾರ್ ನನ್ನು ತಳ್ಳಿ ಬೀಳಿಸಿ, ನಗದಿದ್ದ ಹೋಂಡಾ ಆಕ್ಟೀವಾದೊಂದಿಗೆ ಪರಾರಿಯಾಗಿದ್ದರು.

ಸ್ಕೂಟರ್ ಪತ್ತೆ: ಮರುದಿನ ಅರುಣ್‍ಕುಮಾರ್ ಅವರ ಸ್ಕೂಟರ್ ವಿಜಯನಗರ 2ನೇ ಹಂತದಲ್ಲಿ ಪತ್ತೆಯಾಯಿತಾದರೂ, ಅದರ ಡಿಕ್ಕಿಯಲ್ಲಿದ್ದ ಹಣ ಇರಲಿಲ್ಲ. ಪ್ರಕರಣ ದಾಖಲಿಸಿ ಕೊಂಡಿದ್ದ ವಿಜಯನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಊಟಿ, ಗೋವಾ ಟ್ರಿಪ್: ಹಣ ದೋಚಿದ 7 ಮಂದಿ ಇಂಡಿಯನ್ ಕರೆನ್ಸಿಯಿಂದ ಎಲ್‍ಇಡಿ ಟಿವಿ, ಮಾರುತಿ ಆಲ್ಟೋ ಕಾರು, ಚಿನ್ನದ ಬ್ರೇಸ್‍ಲೆಟ್, ಸರ ಹಾಗೂ ಉಂಗುರಗಳನ್ನು ಖರೀದಿಸಿದರಲ್ಲದೆ, ಊಟಿ, ಗೋವಾಗೂ ತೆರಳಿ ಮಜಾ ಮಾಡಿದ್ದರು. ತಲಾ ಒಂದೊಂದು ಲಕ್ಷ ರೂ. ಖರ್ಚು ಮಾಡಿಕೊಂಡಿದ್ದ ಆರೋಪಿಗಳು, ವಿದೇಶಿ ಕರೆನ್ಸಿಯನ್ನು ಮಾತ್ರ ವಿಲೇವಾರಿ ಮಾಡಲಾರದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅವರು ಬೆಂಗಳೂರಲ್ಲೇ ಅಡಗಿದ್ದಾರೆಂಬ ಸುಳಿವು ಸಿಗುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ಬಂಧಿಸುವಲ್ಲಿ ಕಡೆಗೂ ಯಶಸ್ವಿಯಾದರು.

ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ನಿರ್ದೇಶನದಂತೆ ಡಿಸಿಪಿಗಳಾದ ವಿಕ್ರಂ ವಿ.ಅಮಟೆ, ಡಾ.ಎನ್.ವಿಷ್ಣುವರ್ಧನ್ ಅವರ ಮಾರ್ಗ ದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಎನ್.ಆರ್.ಉಪವಿಭಾಗದ ಎಸಿಪಿ ಸಿ.ಗೋಪಾಲ್, ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್, ಸಬ್‍ಇನ್‍ಸ್ಪೆಕ್ಟರ್ ರಾಮಚಂದ್ರ, ಎಎಸ್‍ಐ ವೆಂಕಟೇಶ್‍ಗೌಡ, ಸಿಬ್ಬಂದಿಗಳಾದ ಶಂಕರ್, ಸೋಮಾರಾಧ್ಯ, ಈಶ್ವರ್, ಮಹೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.

Translate »