ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ:  ಸುಪ್ರೀಂಕೋರ್ಟ್‍ಗೆ ಕೇಂದ್ರ ಪ್ರಮಾಣ ಪತ್ರ
ಮೈಸೂರು

ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ:  ಸುಪ್ರೀಂಕೋರ್ಟ್‍ಗೆ ಕೇಂದ್ರ ಪ್ರಮಾಣ ಪತ್ರ

October 31, 2018

ಬೆಂಗಳೂರು: ಬಂಡೀಪುರ-ತಲಚೇರಿ ನಡುವಿನ ಅಭಯಾರಣ್ಯದ ಹಾಲಿ ರಸ್ತೆ ತೆರವುಗೊಳಿಸಿ, ಕಾಡು ಬೆಳೆಸುವುದಾಗಿ ಕೇಂದ್ರ ಪರಿಸರ ಇಲಾಖೆ ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದೆ. ರಸ್ತೆ ತೆರವಿನ ನಂತರ ಪ್ರಯಾಣಿಕರ ಅನುಕೂಲಕ್ಕಾಗಿ 47 ಕಿಲೋ ಮೀಟರ್ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ನಿರ್ಮಿಸುವುದಾಗಿ ಹೇಳಿದೆ. ಕರ್ನಾಟಕ ಸರ್ಕಾರ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮಾಡಿರುವುದನ್ನು ವಿರೋಧಿಸಿ ಕೇರಳ ಸರ್ಕಾರ ಮತ್ತು ಅಲ್ಲಿನ ಸಾರಿಗೆ ಸಂಘ ಗಳು ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದ್ದವು.

ವಿಚಾರಣೆ ವೇಳೆ ಕೇಂದ್ರ ಮಧ್ಯೆ ಪ್ರವೇಶಿಸಿ, ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡುತ್ತೇವೆ. ನಂತರ ಕೆಳ ಮಾರ್ಗದ ರಸ್ತೆಯನ್ನು ಸಂಪೂರ್ಣ ಅಗೆದುಹಾಕಿ ಸಸಿಗಳನ್ನು ನೆಟ್ಟು ಕಾಡು ವಿಸ್ತರಿಸುವುದಾಗಿ ತನ್ನ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಆದರೆ ಪರಿಸರವಾದಿಗಳು ಈ ಪ್ರಸ್ತಾಪ ವಿರೋಧಿಸಿದ್ದು, ಎಲಿವೇಟೆಡ್ ರಸ್ತೆ ನಿರ್ಮಿಸಿ ರಾತ್ರಿ ವೇಳೆ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಪ್ರಾಕೃತಿಕ ಅರಣ್ಯವನ್ನು ಕಾಂಕ್ರೀಟ್ ಕಾಡಾಗಿ ಮಾರ್ಪಡಿಸಿದಂತಾಗುತ್ತದೆ.

ಕರ್ನಾಟಕ ಸರ್ಕಾರ ಹಾಲಿ ಕೈಗೊಂಡಿರುವ ನಿರ್ಧಾರದಂತೆ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮತ್ತೆ ಅವಕಾಶ ಕೊಡಬಾರದು ಹಾಗೂ ಎಲಿವೇಟೆಡ್ ಕಾರಿಡಾರ್ ನಿರ್ಮಿಸಬಾರದು ಎಂದು ಒತ್ತಾಯಿಸಿದ್ದು, ನವೆಂಬರ್ 10ರಂದು ಬೆಂಗಳೂರಿನಲ್ಲಿ ಪರಿಸರವಾದಿಗಳು ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಪರಿಸರವಾದಿಗಳ ಬೇಡಿಕೆಯಿಂದ ಎಚ್ಚೆತ್ತುಕೊಂಡ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಪುನರುಚ್ಛರಿಸಿದ್ದಾರೆ.

Translate »