ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್
ಕೊಡಗು

ಮಡಿಕೇರಿ-ಮಂಗಳೂರು ಹೆದ್ದಾರಿ ಬಂದ್

August 10, 2018

ಮಡಿಕೇರಿ: ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಹಂತ ತಲುಪಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ಹಾಗೂ ತಾಳತ್ತಮನೆ ಜಂಕ್ಷನ್ ಬಳಿ ರಸ್ತೆಯನ್ನು ಬಂದ್ ಮಾಡಿದ್ದು, ಎಲ್ಲಾ ರೀತಿಯ ವಾಹನಗಳನ್ನು ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯ ಮೂಲಕ ಮಡಿಕೇರಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ರಸ್ತೆ ಸಂಪೂರ್ಣ ಕಿರಿದಾಗಿದ್ದು ಬಸ್‍ಗಳು, ಸರಕು ತುಂಬಿದ ಲಾರಿಗಳ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಲಾರಿಗೆ ಸೈಡ್ ಕೊಟ್ಟ ಖಾಸಗಿ ಬಸ್ ಕೆಸರಿನಲ್ಲಿ ಹೂತು ಕೊಂಡಿದೆ.

ಉರುಳಿ ಬೀಳುವ ಸ್ಥಿತಿಯಲ್ಲಿದ್ದ ಬಸ್‍ನ ಪ್ರಯಾಣಿಕರನ್ನು ಬೇರೆ ಬಸ್‍ನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದ್ದು, ಬೇರೆ ವಾಹನಗಳು ಪರಿಪಾಟಲು ಪಡುತ್ತಾ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಭಾರೀ ತಿರುವು ಮತ್ತು ಏರು ರಸ್ತೆಯಲ್ಲಿ ಬೇರೆ ವಾಹನಗಳಿಗೆ ದಾರಿ ಮಾಡಿಕೊಡುವುದೇ ವಾಹನಗಳ ಚಾಲಕರಿಗೆ ಸವಾಲಾಗಿ ಪರಿಣಮಿಸಿದ್ದು, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಇಂಜಿನಿಯರ್ ಗಳು ಈ ರಸ್ತೆಯ ಅವ್ಯವಸ್ಥೆಗಳನ್ನು ಪರಿಶೀಲಿಸಿದರು. ಕಿ.ಮೀ.ವರೆಗೆ ಸಾಲುಗಟ್ಟಿ ನಿಂತಿದ್ದ ವಾಹನಗಳ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಹರಸಾಹಸ ಪಡುವಂತಾಯಿತು.

ತಾಳತ್ತಮನೆ- ಮೇಕೇರಿ-ಮೂರ್ನಾಡು ಬೈಪಾಸ್ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಕಂಡು ಬಂದ ಹಿನ್ನಲೆಯಲ್ಲಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕ ವಾಹನಗಳು ಮತ್ತು ಲಘು ವಾಹನಗಳಿಗೆ ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಯಿತು. ಆ ಬಳಿಕ ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಬಂತಾದರೂ, ಅಗತ್ಯ ವಸ್ತುಗಳನ್ನು ಸಾಗಿಸುವ ಭಾರೀ ಲಾರಿಗಳು ತಿರುವಿನಲ್ಲಿ ಸಿಲುಕಿಕೊಂಡು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕೊಡಗು ಮೂಲಕ ಹಾದು ಹೋಗುವ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಹೆದ್ದಾರಿ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್.ಪಿ. ಡಾ. ಸುಮನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »