ನೋಡಲಾಗದು ಗ್ರಾಮೀಣ ವಿದ್ಯಾರ್ಥಿನಿಯರ ನಿತ್ಯ ನರಳಾಟದ ನಡಿಗೆ
ಮೈಸೂರು

ನೋಡಲಾಗದು ಗ್ರಾಮೀಣ ವಿದ್ಯಾರ್ಥಿನಿಯರ ನಿತ್ಯ ನರಳಾಟದ ನಡಿಗೆ

September 22, 2018

ಮೈಸೂರು: ಮೈಸೂರಿನ ವಿನಾಯಕನಗರ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು, ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ನೂತನ ಕಟ್ಟಡದಲ್ಲಿ ತರಗತಿಗಳು ಆರಂಭವಾದ ದಿನದಿಂದಲೂ ಎದುರಿಸುತ್ತಿರುವ ತೊಂದರೆಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಭಾಗದಿಂದ ಬರುವ ನೂರಾರು ವಿದ್ಯಾರ್ಥಿನಿಯರ ಹೆಣಗಾಟ ಹೇಳತೀರದು. ವಿದ್ಯಾರ್ಥಿನಿಯರು ಹಾಗೂ ಕಾಲೇಜು ಪ್ರಾದ್ಯಾಪಕರ ಒತ್ತಾಯದಿಂದಾಗಿ ಮೈಸೂರು-ಬಿಳಿಕೆರೆ ಮಾರ್ಗದ ಬಸ್ಸುಗಳಿಗೆ ನಿಲುಗಡೆ ನೀಡಲಾಗುತ್ತಿದೆ. ಇದರ ಹೊರತು ಬೇರ್ಯಾವ ಮಾರ್ಗದಿಂದಲೂ ಕಾಲೇಜು ಸಂಪರ್ಕಕ್ಕೆ ಬಸ್ ಸೌಲಭ್ಯವಿಲ್ಲ. ಒಂದೆರಡು ಕಿಮೀ ನಡೆದು ಕಾಲೇಜಿಗೆ ಬರಬೇಕಾದ ದುಸ್ಥಿತಿ ಇದೆ. ಹಳ್ಳಿಹಳ್ಳಿಗೂ ಸಾರಿಗೆ ಸಂಪರ್ಕವಿರುವ ಕಾಲದಲ್ಲಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಪಾದಯಾತ್ರೆಗೆ ಮುಕ್ತಿ ಸಿಕ್ಕಿಲ್ಲ. ದೂರದ ಊರುಗಳಿಂದ ತುಂಬಿದ ಬಸ್‍ಗಳಲ್ಲಿ ಹೇಗೋ ಮೈಸೂರಿಗೆ ಬರುವ ವಿದ್ಯಾರ್ಥಿನಿಯರು, ನಡೆದು ಕಾಲೇಜು ತಲುಪು ವಷ್ಟರಲ್ಲಿ ಮತ್ತಷ್ಟು ಸುಸ್ತಾಗಿರುತ್ತಾರೆ. ಇನ್ನು ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವಿಲ್ಲ.

ಎರಡೂವರೆ ಕಿಮೀ: ವಿನಾಯಕನಗರದಲ್ಲಿರುವ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಗ್ರಾಮೀಣ ಪ್ರದೇಶದಿಂದ ಬರುವವರೇ ಹೆಚ್ಚು. ಮೈಸೂರು ತಾಲೂಕಿನ ಬೋಗಾದಿ, ಬೀರಿಹುಂಡಿ, ಕುಮಾರಬೀಡು, ಗದ್ದಿಗೆ ಭಾಗದ ಹಲವು ಗ್ರಾಮಗಳಿಂದ ಬರುವ ವಿದ್ಯಾರ್ಥಿನಿಯರು ಬೋಗಾದಿ ರಸ್ತೆ, ಮೈಸೂರು ವಿಶ್ವವಿದ್ಯಾನಿಲಯ ಅತಿಥಿಗೃಹದ ಸಮೀಪ ಬಸ್ ಇಳಿದು, ಅಲ್ಲಿಂದ ಬಯಲು ರಂಗಮಂದಿರ ರಸ್ತೆ ಮೂಲಕ, ಹುಣಸೂರು ರಸ್ತೆ ಮಾರ್ಗವಾಗಿ ನಡೆದು ಕಾಲೇಜು ತಲುಪಬೇಕು. ದಿನನಿತ್ಯ ಬೆಳಿಗ್ಗೆ 9.30ರ ವೇಳೆಗೆ ನೂರಾರು ವಿದ್ಯಾರ್ಥಿನಿ ಯರ ದಂಡೇ ಈ ರಸ್ತೆಯಲ್ಲಿ ಕಾಣುತ್ತದೆ. ಬೋಗಾದಿ ರಸ್ತೆಯಿಂದ ಕಾಲೇಜಿನವರೆಗೆ ಸುಮಾರು ಎರಡೂವರೆ ಕಿಮೀ ನಡೆದು ಹೋಗಬೇಕು. ಕಾಲೇಜಿಗೆ ತಡವಾಗುತ್ತದೆ ಎಂದು ಅದೆಷ್ಟೋ ವಿದ್ಯಾರ್ಥಿಗಳು ಬೆಳಿಗ್ಗೆ ಉಪಹಾರ ಸೇವಿಸದೆಯೂ ಬಂದಿರುತ್ತಾರೆ. ಊರಿನಿಂದ ಬರುವುದು ಸ್ವಲ್ಪ ತಡವಾದರೂ ಧಾವಂತದಿಂದ ನಡೆದು ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ನಿತ್ರಾಣರಾಗಿ ಕುಸಿದುಬಿದ್ದರೆ ಯಾರು ಹೊಣೆ?. ಬಡ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದೊರಕುತ್ತಿರುವ ಪ್ರೋತ್ಸಾಹ ಇಷ್ಟರ ಮಟ್ಟಿಗಿದೆಯೇ? ಎಂದು ವಿದ್ಯಾರ್ಥಿನಿ ಯರ ನರಳಾಟವನ್ನು ನಿತ್ಯ ಕಾಣುವ ಸಾರ್ವಜನಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಬೋಗಾದಿ ಭಾಗದ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ನೇರವಾಗಿ ನಗರ ಬಸ್ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಮತ್ತೊಂದು ಬಸ್‍ನಲ್ಲಿ ಕಾಲೇಜಿಗೆ ಬರಬೇಕು. ಇದಕ್ಕೆ ಸುಮಾರು ಒಂದು ತಾಸು ವ್ಯರ್ಥವಾಗುತ್ತದೆ. ಅಲ್ಲದೆ ಯಾವ ಮಾರ್ಗದಿಂದಲೂ ಕಾಲೇಜಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಆದ್ದರಿಂದ ವಿವಿ ಅತಿಥಿ ಗೃಹದ ಬಳಿ ಇಳಿದು ಎರಡೂವರೆ ಕಿಮೀ ನಡೆದು ಬರುತ್ತಾರೆ. ಇನ್ನು ಎನ್.ಆರ್.ಮೊಹಲ್ಲಾ, ಉದಯಗಿರಿ, ರಮ್ಮನಹಳ್ಳಿ, ಹಂಚ್ಯಾ, ಆಲನಹಳ್ಳಿ ಭಾಗದ ಗ್ರಾಮಗಳ ವಿದ್ಯಾರ್ಥಿಗಳು ನಗರ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕೆಆರ್‍ಎಸ್ ರಸ್ತೆ, ಆಕಾಶವಾಣಿ ಬಳಿ ಇಳಿದುಕೊಂಡು ಅಲ್ಲಿಂದ ಕಾಲೇಜಿಗೆ ನಡೆದು ಬರುತ್ತಾರೆ. ಕೆಲವರು ಮೆಟ್ರೋಪೋಲ್ ವೃತ್ತದಿಂದ ನಡೆದು ಬರುತ್ತಾರೆ. ಕೆಎಸ್‍ಆರ್‍ಟಿಸಿ ನಿಯಮದಂತೆ ವಿದ್ಯಾರ್ಥಿಗಳ ವಾಸಸ್ಥಳದಿಂದ ಅವರ ಕಾಲೇಜು ಅಥವಾ ಶಾಲೆ ಇರುವ ಹತ್ತಿರದ ಬಸ್‍ನಿಲ್ದಾಣದವರೆಗೆ ಮಾತ್ರ ಪಾಸ್ ವಿತರಿಸುವುದರಿಂದ ಅನಿವಾರ್ಯವಾಗಿ ತೊಂದರೆ ಅನುಭವಿಸುವಂತಾಗಿದೆ.

ಕಾಳಜಿಯಿಲ್ಲ: ವಿದ್ಯಾರ್ಥಿನಿಯರ ನರಳಾಟದ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಜನಪ್ರತಿನಿಧಿಗಳು, ಕಾಲೇಜು ಪ್ರಾಂಶುಪಾಲರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಸ್ ಸೌಲಭ್ಯದ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಎಂಬ `ಮೈಸೂರು ಮಿತ್ರ’ನ ಪ್ರಶ್ನೆಗೆ ಮಹಾರಾಣಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಅಣ್ಣೇಗೌಡ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. `ಆಗಿದೆ ಆಗಿದೆ. ಬಸ್ ಓಡಾಡ್ತಿವೆಯಲ್ಲಾ. ಬೋಗಾದಿ ಕಡೆಯಿಂದ ಬರುವವರಿಗೂ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ. ಸಮಸ್ಯೆ ಏನಿಲ್ಲ’ ಎಂದಷ್ಟೇ ಹೇಳಿದರು. ಇನ್ನು ಸಾರಿಗೆ ಸಂಸ್ಥೆ ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯೂ ಸೂಕ್ತ ಮಾಹಿತಿ ನೀಡಲಿಲ್ಲ.

ಗ್ರಾಮೀಣ ಭಾಗದಿಂದ ನಗರಕ್ಕೆ ನಿರ್ಧಿಷ್ಟ ಸಮಯದಲ್ಲಿ ಬಸ್ ಸಂಚರಿಸುತ್ತವೆ. ಒಂದು ಬಸ್ ಮಿಸ್ ಆದರೂ ಕಾಲೇಜಿಗೆ ಬರುವುದು ತಡವಾಗುತ್ತದೆ. ಎಷ್ಟೇ ರಶ್ ಇದ್ದರೂ ಕಾಲೇಜು ಸಮಯಕ್ಕೆ ಬರುವ ಬಸ್‍ನಲ್ಲೇ ಬರಬೇಕು. ಇದರೊಂದಿಗೆ ಎರಡೂವರೆ ಕಿಮೀ ನಡೆದು ಕಾಲೇಜಿಗೆ ಹೋಗುವುದು ಸರಳ ವಿಚಾರವಲ್ಲ. ವರ್ಷವಿಡೀ ಪಾದಯಾತ್ರೆ ನಡೆಸುವುದು ಸುಲಭದ ಮಾತಲ್ಲ. ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಯಾರ ಒತ್ತಾಯ, ಆಗ್ರಹ, ಆದೇಶಕ್ಕೂ ಕಾಯದೆ, ಲಾಭ-ನಷ್ಟದ ಲೆಕ್ಕಾಚಾರ ಮಾಡದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕೆದೆ.

Translate »