`ಜಯಚಾಮರಾಜ ಒಡೆಯರ್ ಪೂಜಾ ವಿಧಾನದ `ವಿಶೇಷ ಬೊಂಬೆ ಅಂಕಣ’ ಈ ಬಾರಿಯ ಆಕರ್ಷಣೆ
ಮೈಸೂರು

`ಜಯಚಾಮರಾಜ ಒಡೆಯರ್ ಪೂಜಾ ವಿಧಾನದ `ವಿಶೇಷ ಬೊಂಬೆ ಅಂಕಣ’ ಈ ಬಾರಿಯ ಆಕರ್ಷಣೆ

September 22, 2018

ಮೈಸೂರು:  ಪ್ರತಿ ವರ್ಷದಂತೆ ಈ ವರ್ಷವೂ ರಾಮ್‍ಸನ್ಸ್ ಕಲಾ ಪ್ರತಿಷ್ಠಾನವು ಸೆ.22ರಿಂದ ಮೈಸೂರಿನ ನಜರ್‌ಬಾದ್ ಮುಖ್ಯ ರಸ್ತೆಯ ಪ್ರತಿಮಾ ಗ್ಯಾಲರಿಯಲ್ಲಿ ‘ಬೊಂಬೆ ಪ್ರದರ್ಶನ ಮತ್ತು ಮಾರಾಟ’ ಏರ್ಪಡಿಸಿದೆ. ಒಂದೇ ಸೂರಿನಡಿ 10 ಸಾವಿರಕ್ಕೂ ಹೆಚ್ಚಿನ ನಾನಾ ಪ್ರದೇಶದ, ನಾನಾ ಅಳತೆಯ, ನಾನಾ ರೀತಿಯ ಬೊಂಬೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಮಣ್ಣು, ಕಾಗದ ರಚ್ಚು (ಪೇಪರ್ ಮೆಷ್), ಪ್ಲಾಸ್ಟರ್ ಆಫ್ ಪ್ಯಾರಿಸ್, ಪಿಂಗಾಣಿ, ಮರ, ಲೋಹ ಇತ್ಯಾದಿಗಳಿಂದ ರಚಿಸಲಾಗಿರುವ ಬೊಂಬೆಗಳು ವೈವಿಧ್ಯಮಯ ಬೊಂಬೆ ಲೋಕವನ್ನೇ ಇಲ್ಲಿ ಸೃಷ್ಟಿಸಿವೆ. ಮೈಸೂರು, ಚನ್ನಪಟ್ಟಣ, ಬೆಂಗಳೂರು, ಕೊಪ್ಪಳದ ಕನ್ನಾಳ, ಖಾನಾಪುರದಲ್ಲಿ ತಯಾರಾದ ಬೊಂಬೆಗಳಷ್ಟೇ ಅಲ್ಲದೆ, ತಮಿಳುನಾಡಿನ ವಿಲ್ಲುಪುರಂ, ಕಡಲೂರ್, ಮಾಯಾವರಂ, ಕಾಂಜೀವರಂ, ಮಧುರೈ, ಪನ್‍ರುಟ್ಟಿ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ರಾಜಾಸ್ತಾನ, ಮಹಾರಾಷ್ಟ್ರ ಹೀಗೆ ದೇಶದ ನಾನಾ ಭಾಗಗಳ ಬೊಂಬೆ ಗಳು ಇಲ್ಲಿ ವಿಜೃಂಭಿಸಿವೆ.

`ಬೊಂಬೆ ಮನೆ’ ಒಳಹೊಕ್ಕರೆ ಸಾಕು, ಗೋಡೆ, ನೆಲ, ಸೂರುಗಳಲ್ಲಿ ಬೊಂಬೆ ಗಳು ನಮ್ಮನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯಲಿವೆ. ರಾಮಾಯಣ, ಭಾಗವತ, ಪಂಚ ತಂತ್ರ, ಶಿವಪುರಾಣ, ಗಣೇಶನ ಲೀಲೆಗಳು, ದೇವ ದೇವಿಯರ ಗಾಥೆಗಳು ಹೀಗೆ ಎಲ್ಲವೂ ಪುಟ್ಟಗಾತ್ರದಲ್ಲಿ ಸಮ್ಮಿಲನಗೊಂಡು ಅಗಾಧ ಬ್ರಹ್ಮಾಂಡ ಲೋಕವನ್ನೇ ನಮ್ಮೆದುರು ಹಿಡಿದಿಟ್ಟಿವೆ.

ಪ್ರತೀ ವರ್ಷವೂ ಒಂದೊಂದು ವಿಷಯವನ್ನು ಇಟ್ಟುಕೊಂಡು ಬೊಂಬೆ ಪ್ರಿಯರನ್ನು ರಂಜಿಸುವ `ವಿಶೇಷ ಬೊಂಬೆ ಅಂಕಣ’ದಲ್ಲಿ ಈ ಬಾರಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಾಬ್ಧಿ ಅಂಗವಾಗಿ ಬೊಂಬೆ ಅಂಕಣ ಗಮನ ಸೆಳೆಯಲಿದೆ. ಎರಡು ವಿಶೇಷ ಅಂಕಣಗಳಲ್ಲಿ ಒಂದರಲ್ಲಿ ದೇವ ದೇವಿಯರಾದ ಗಾಯತ್ರಿ, ಮೀನಾಕ್ಷಿ, ದತ್ತಾತ್ರೇಯ, ಕಾಮಾಕ್ಷಿ, ಇಂದ್ರಾಕ್ಷಿ, ವಿಶಾಲಾಕ್ಷಿ ಇವರ ಆರಾಧನೆ, ಉಪಾಸನೆಯಲ್ಲಿ ಜಯಚಾಮರಾಜ ಒಡೆ ಯರ್ ನಿರತರಾಗಿರುವಂತೆ ವಿಶೇಷವಾಗಿ ಈ ಪ್ರದರ್ಶನಕ್ಕೆಂದೇ ಮಾಡಿಸಿರುವ ಸಾಂಪ್ರದಾಯಿಕ ಮೈಸೂರು ಶೈಲಿಯ ಚಿತ್ರಪಟಗಳನ್ನು ಅನಾವರಣಗೊಳಿಸಲಾಗಿದೆ.

ಮೈಸೂರಿನ ಕಲಾವಿದ ಬಿ.ಪಿ.ರಾಮಕೃಷ್ಣ, ಬೆಂಗಳೂರಿನ ಕಲಾವಿದ ಮನೀಶ್ ವರ್ಮಾ ಜೊತೆಯಾಗಿ ರಚಿಸಿದ್ದಾರೆ. ಇನ್ನೊಂದು ಅಂಕಣದಲ್ಲಿ ಬಾದಾಮಿಯ ಬನಶಂಕ ರಿಯ ದಿವ್ಯ ಸಾನ್ನಿಧ್ಯ, ಮತ್ತೊಂದರಲ್ಲಿ ಕೊಲ್ಕತ್ತಾ ದುರ್ಗಾ ಪೂಜೆಯ ಸಂಪ್ರ ದಾಯದ ದೃಶ್ಯಾವಳಿ ನೋಡುಗರ ಗಮನ ಸೆಳೆಯಲಿವೆ. ಸೆ.22ರಿಂದ ವರ್ಷಪೂರ್ತಿ `ಬೊಂಬೆ ಮನೆ’ ಪ್ರದರ್ಶನ ಮತ್ತು ಮಾರಾಟ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ಇರುತ್ತದೆ ಎಂದು ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ಮುಖ್ಯಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ. 0821-2445220 ಅಥವಾ ಮೊಬೈಲ್- 9880111625 ಸಂಪರ್ಕಿಸಬಹುದು.

Translate »