ರಾಜ್ಯ ಬಜೆಟ್ ಕುರಿತು ಪ್ರಮುಖರ ಪ್ರತಿಕ್ರಿಯೆ
ಮೈಸೂರು

ರಾಜ್ಯ ಬಜೆಟ್ ಕುರಿತು ಪ್ರಮುಖರ ಪ್ರತಿಕ್ರಿಯೆ

July 6, 2018

ಮೈಸೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿದ ರಾಜ್ಯ ಬಜೆಟ್‍ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನ ಶಾಸಕರು, ವಿವಿಧ ಸಂಘಟನೆಗಳ ಅಧ್ಯಕ್ಷರು, ಪ್ರಮುಖರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿವು:

ಮೂರು ಜಿಲ್ಲೆಗೇ ಸೀಮಿತ ಬಜೆಟ್: ಸಮಗ್ರ ಕರ್ನಾಟಕ ಬಜೆಟ್ ಬದಲಿಗೆ ಕೇವಲ ಮಂಡ್ಯ, ಹಾಸನ, ರಾಮನಗರಕ್ಕಷ್ಟೇ ಸೀಮಿತವಾದ ಬಜೆಟ್ ಇದಾಗಿದೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ 30 ಜಿಲ್ಲೆಗಳಿರುವುದನ್ನು ಮರೆತಿರುವಂತಿದೆ. ಮೈಸೂರಿಗಿದ್ದ ಫಿಲಂ ಸಿಟಿಯನ್ನು ರಾಮನಗರಕ್ಕೆ ಹಾಕಿಕೊಂಡಿದ್ದಾರೆ. ಮೈಸೂ ರಿಗೆ ಈ ಬಜೆಟ್‍ನಲ್ಲಿ ಏನೂ ಸಿಕ್ಕಿಲ್ಲ. ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳ ಸಾಮಾನ್ಯ ಜನರಿಗೆ ಹೊರೆಯಾಗಲಿದೆ. – ಎಲ್.ನಾಗೇಂದ್ರ, ಶಾಸಕ, ಚಾಮರಾಜ ಕ್ಷೇತ್ರ.

ರೈತರು, ಪ್ರವಾಸೋದ್ಯಮಕ್ಕೆ ಹೊಡೆತ: ಇದೊಂದು ಕೃಷಿ ಪ್ರಧಾನ ಆಯವ್ಯಯ. ಸಾಕಷ್ಟು ಕೈಗಾರಿಕೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದಾರಾದರೂ ಸಾಮಾನ್ಯರ ಬಳಕೆ ವಸ್ತುಗಳಾದ ಡೀಸೆಲ್, ಪೆಟ್ರೋಲ್, ವಿದ್ಯುತ್, ವಾಹನ ತೆರಿಗೆ ಹೆಚ್ಚಳದಿಂದ ಸಾಮಾನ್ಯ ಜನರ ಬದುಕಿಗೆ ತೊಂದರೆಯಾಗಲಿದೆ. ಈ ವ್ಯಾಪ್ತಿಯಿಂದ ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಬಹುದಿತ್ತು. ನಿರೀಕ್ಷೆಯಂತೆ ರೈತರ ಸಾಲ ಮನ್ನಾ ಮಾಡಲಾಗಿದೆ. ಒಟ್ಟಾರೆ ಹೇಳಬೇಕೆಂದರೆ ಇದು ಕೃಷಿ ಪ್ರಧಾನ ಬಜೆಟ್. – ಎ.ಎಸ್.ಸತೀಶ್, ಅಧ್ಯಕ್ಷ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘ

ಮೈಸೂರು ಪ್ರವಾಸೋದ್ಯಮಕ್ಕೆ ಒತ್ತು ನೀಡಿಲ್ಲ: ಕೆಆರ್‍ಎಸ್ ಬೃಂದಾವನ ಅಭಿವೃದ್ಧಿ ಸ್ವಾಗತಾರ್ಹ. ಆದರೆ ನಮ್ಮ ದುಡ್ಡನ್ನು ಕಿತ್ತು ರೈತರ ಸಾಲ ಮನ್ನಾಗೆ ನೀಡುವುದು ಸರಿಯಲ್ಲ. ಆದರೆ ಡೀಸೆಲ್, ಪೆಟ್ರೋಲ್, ವಿದ್ಯುತ್ ಇನ್ನಿತರ ಸಾಮಾನ್ಯ ಜನರ ಮೇಲೆ ಹೊರೆ ಹಾಕಿ ಸಾಲ ಮನ್ನಾ ಸರಿಯಲ್ಲ. ಮೈಸೂರಿಗೆ ಮಂಜೂರಾಗಿದ್ದ ಫಿಲಂ ಸಿಟಿಯನ್ನು ಕಿತ್ತು ರಾಮನಗರಕ್ಕೆ ಹಾಕಿಕೊಂಡಿದ್ದು ಒಳ್ಳೆಯದಲ್ಲ. ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಯನ್ನೇ ಅಭಿವೃದ್ಧಿ ಪಡಿಸಿದ್ದರೂ ಸಾಕಾಗಿತ್ತು. ಇನ್ನೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕಿರಲಿಲ್ಲ. ಈಗಾಗಲೇ ನೆಲಕಚ್ಚಿರುವ ಮಧ್ಯಮವರ್ಗದ ವ್ಯಾಪಾರಿಗಳಿಗೆ ಭಾರೀ ಹೊಡೆತ ನೀಡಿದ್ದಾರೆ. ನಿರಾಶಾದಾಯಕ ಬಜೆಟ್. ಮೈಸೂರು ಪ್ರವಾಸೋದ್ಯಮದಿಂದ ಹೆಚ್ಚಿನ ಆದಾಯವಿದ್ದರೂ ಮೈಸೂರು ಪ್ರವಾಸೋದ್ಯಮಕ್ಕೆ ಏನೂ ನೀಡಿಲ್ಲ. – ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್.

ರೈತರ ಸಾಲಮನ್ನಾ ಹೆಸರಿನಲ್ಲಿ ಸಾಮಾನ್ಯ ಜನರಿಗೆ ಹೊರೆ: ಎಲ್ಲದರಲ್ಲೂ ತೆರಿಗೆ ಹೆಚ್ಚಳ ಮಾಡಿದ್ದಾರೆ. ಮದ್ಯ, ಪೆಟ್ರೋಲ್, ಡೀಸೆಲ್, ವಿದ್ಯುತ್ ಹೆಚ್ಚಳ ಸರಿಯಲ್ಲ. ರೈತರಿಗೆ ಸಹಾಯ ಮಾಡುವ ಹೆಸರಿನಲ್ಲಿ ಬೇರೆಲ್ಲ ಜನರ ಮೇಲೆ ತೆರಿಗೆಯ ಹೊರೆ ಹಾಕಿ ತೊಂದರೆ ಕೊಟ್ಟಿರುವುದು ಸರಿಯಲ್ಲ. ಯಾರು ತೆರಿಗೆ ಕಟ್ಟಿಲ್ಲವೋ ಅಂಥ ಕಡೆಗಳಲ್ಲಿ ಆದಾಯ ಕ್ರೋಢೀಕರಿಸಿಕೊಂಡು ಸೌಲಭ್ಯ ನೀಡಬಹುದಿತ್ತು. ಹೋಟೆಲ್ ಉದ್ಯಮಕ್ಕೆ ದೊಡ್ಡ ಪೆಟ್ಟು. ಒಟ್ಟಾರೆ ಇದು ಜನಪರ ಬಜೆಟ್ ಎನಿಸುವುದಿಲ್ಲ. – ಎಂ.ರಾಜೇಂದ್ರ, ಮಾಜಿ ಅದ್ಯಕ್ಷ, ರಾಜ್ಯ ಹೋಟೆಲ್ ಮಾಲೀಕರ ಸಂಘ

ಕೈಗಾರಿಕೆ, ರೈತರ ಸಮತೋಲನದ ಬಜೆಟ್: ಸ್ವಾಗತಾರ್ಹ ವಾದ ಉತ್ತಮ ಬಜೆಟ್. ಕೈಗಾರಿಕೆ ಮತ್ತು ರೈತರನ್ನು ಸಮ ತೋಲನದಲ್ಲಿ ತೆಗೆದುಕೊಂಡು ಹೋಗುವ ಬಜೆಟ್. ಹಿಂದಿನ ಸರ್ಕಾರದ ಯಾವ ಯೋಜನೆಗಳನ್ನು ಮೊಟಕುಗೊಳಿಸಿಲ್ಲ. – ಸುರೇಶ್‍ಕುಮಾರ್ ಜೈನ್, ಕಾರ್ಯದರ್ಶಿ, ಮೈಸೂರು

ನಗರದ ಜನತೆಗೆ ಬ್ಲೇಡು… ಗ್ರಾಮೀಣರಿಗೆ ಅನುಕೂಲ: ನಗರದ ಜನರಿಗೆ ಬ್ಲೇಡು.. ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ಒಟ್ಟಾರೆ ಪರವಾಗಿಲ್ಲ ಎನ್ನಬಹುದಾದ ಬಜೆಟ್. ಪ್ರವಾಸೋದ್ಯಮಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುಕೂಲ ನೀಡಿಲ್ಲ. ಹೊಟೆಲ್ ಉದ್ಯಮಕ್ಕೆ ಅನುಕೂಲಕರವಲ್ಲದ ಬಜೆಟ್. – ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ.

ವ್ಯಾಪಾರದ ಮೇಲೆ ದುಷ್ಪರಿಣಾಮ: ಮೈಸೂರು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಬಹುದಿತ್ತು. ಮೈಸೂರಿಗೆ ಮತ್ತೊಂದು ಮೆಡಿಕಲ್ ಕಾಲೇಜು ಕೊಡ ಬಹುದಿತ್ತು. ಒಳ್ಳೆಯದು ಅಲ್ಲದ, ಕೆಟ್ಟದ್ದು ಅಲ್ಲದ ಬಜೆಟ್. ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆಯಿಂದ ವ್ಯಾಪಾರದ ಮೇಲೆ ದುಷ್ಪರಿಣಾಮವಾಗಲಿದೆ. – ರವಿಶಾಸ್ತ್ರಿ, ಉಪಾಧ್ಯಕ್ಷ, ರಾಜ್ಯ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘ.

ಜೀವನ ನಡೆಸುವುದಾದರೂ ಹೇಗೆ? ಬಜೆಟ್‍ನಲ್ಲಿ ನಮ್ಮಂಥ ಬಡ ವಾಹನ ಚಾಲಕರಿಗೆ ಭಾರೀ ಹೊಡೆತ ನೀಡಿದ್ದಾರೆ. ಮೊದಲೇ ಪೆಟ್ರೋಲ್ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದೇವೆ. ಇನ್ನೂ ಜಾಸ್ತಿ ಮಾಡಿ, ಜೊತೆಗೆ ವಿದ್ಯುತ್ ದರವೂ ಜಾಸ್ತಿ ಮಾಡಿರುವುದು ನಮ್ಮ ಜೀವನದ ಮೇಲೆ ಭಾರೀ ಹೊಡೆತ ನೀಡಿದ್ದಾರೆ. ನಾವು ಜೀವನ ನಡೆಸುವುದಾದರು ಹೇಗೆ? – ಕಾಳಪ್ಪನಾಯಕ, ಆಟೋ ಚಾಲಕ

Translate »