ಸುಪ್ರೀಂ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ
ದೇಶ-ವಿದೇಶ

ಸುಪ್ರೀಂ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

April 27, 2018

ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಗಾಗಿ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಬುಧವಾರ ಅಂಗೀಕರಿಸಿದೆ. ಇದರೊಂದಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇರವಾಗಿ ನೇಮಕವಾಗುತ್ತಿರುವ ದೇಶದ ಮೊದಲ ಮಹಿಳಾ ವಕೀಲೆ ಎಂಬ ಗೌರವಕ್ಕೆ ಇಂದು ಮಲ್ಹೋತ್ರಾ ಪಾತ್ರರಾಗಿದ್ದಾರೆ. ಇಂದು ಮಲ್ಹೋತ್ರಾ ಅವರು ಶುಕ್ರವಾರ ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನ್ಯಾಯ ವಾದಿಗಳ ಕುಟುಂಬದಿಂದಲೇ ಬಂದಿರುವ ಇಂದು ಮಲ್ಹೋತ್ರಾ ಅವರ ತಂದೆ ಒ.ಪಿ. ಮಲ್ಹೋತ್ರಾ ಸಹ ಹಿರಿಯ ನ್ಯಾಯವಾದಿಗಳಾಗಿದ್ದು, ಅವರ ಹಿರಿಯ ಸೋದರ ಹಾಗೂ ಸೋದರಿ ಸಹ ವಕೀಲರಾಗಿದ್ದಾರೆ. ಸ್ವಾತಂತ್ರ್ಯಾನಂತರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಲಿರುವ ಏಳನೇ ಮಹಿಳೆ ಇಂದು ಅವರಾಗಲಿದ್ದು, ಉಳಿದ ಆರು ಮಂದಿ ಹೈ ಕೋರ್ಟ್‍ನಿಂದ ಬಡ್ತಿ ಪಡೆದವರಾಗಿದ್ದಾರೆ.

ನೇಮಕಾತಿ ತಡೆಹಿಡಿಯುವುದು ಅಸಾಧ್ಯ: ಇಂದು ಮಲ್ಹೋತ್ರ ಅವರನ್ನು ಸುಪ್ರೀಂಕೋರ್ಟ್‍ನ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವ ಆದೇಶವನ್ನು ತಡೆಹಿಡಿಯುವುದರ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ. ಇಂದು ಮಲ್ಹೋತ್ರ ಅವರ ನೇಮಕಾತಿ ಆದೇಶವನ್ನು ತಡೆಹಿಡಿಯುವುದು ನ್ಯಾಯವಲ್ಲ ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

Translate »