ಇಂದು ರೈತ ಮುಖಂಡರೊಂದಿಗೆ ಸಭೆ
ಮೈಸೂರು

ಇಂದು ರೈತ ಮುಖಂಡರೊಂದಿಗೆ ಸಭೆ

November 20, 2018

ಬೆಂಗಳೂರು:  ಅನ್ನದಾತನ ಪ್ರತಿಭಟನೆಗೆ ತಲೆಬಾಗಿದ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸ್ಪಂದಿಸಲು ಮುಂದಾಗಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ರಾಜ್ಯದ ವಿವಿಧ ಮೂಲೆಗಳಿಂದ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ, ರೈತರಿಗೆ ಕೆಲವು ಸಿಹಿ ಸುದ್ದಿ ನೀಡಲು ತೀರ್ಮಾನಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ರೈತ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ಅವರ ಜೊತೆ ಸಮಾಲೋಚನೆ ನಡೆಸಿದ ನಂತರ ಸರ್ಕಾರದ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರಾಜಧಾನಿಯಲ್ಲಿ ರೈತರ ಕೂಗು ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಅವರು ಪತ್ರಿಕಾ ಹೇಳಿಕೆ ನೀಡಿ, ಪರೋಕ್ಷವಾಗಿ ಸಿಹಿ ಸುದ್ದಿ ನೀಡುವ ಇಂಗಿತ ವ್ಯಕ್ತಪಡಿಸಿರುವುದಲ್ಲದೆ, ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವ ವಿದೆ, ರೈತ ಮಹಿಳೆ ಕುರಿತ ನಿನ್ನೆಯ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ.

“ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹಿಳೆ ಬಗ್ಗೆ ಗೌರವವಿದೆ ಎಂದಿದ್ದಾರೆಯೇ ಹೊರತು, ಹೇಳಿಕೆಯಲ್ಲಿ ಕ್ಷಮೆ ಬಗ್ಗೆ ಪ್ರಸ್ತಾಪಿಸಿಲ್ಲ. ಅನ್ನದಾತನ ವಿರುದ್ಧ ತಾವು ಎಂದೂ ಹೀನಾಯವಾಗಿ ಮಾತನಾಡಿಲ್ಲ ಎಂದಿದ್ದಾರೆ. ಹಿಂದಿನಿಂ ದಲೂ ರೈತರ ಪಕ್ಷಪಾತಿಯಾಗಿದ್ದು, ಎಂದಿಗೂ ಭೇದ-ಭಾವ ಎಣಿಸಿಲ್ಲ. ಅನ್ನದಾತನ ಸಮಸ್ಯೆಗಳನ್ನು ಪರಿಹರಿಸದೆ ವಿರಮಿಸುವುದಿಲ್ಲ. ಬೆಳಗಾವಿ ಜಿಲ್ಲೆ ರೈತರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂ ಧಿಸಿದಂತೆ ಕೊಲ್ಕತ್ತಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದಾಗ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು ಎಂದು ಸಮರ್ಥಿ ಸಿಕೊಂಡಿದ್ದಾರೆ. ಇವರು ಉತ್ತರ ಕರ್ನಾಟಕದವರು, ಇದು ಬ್ಯಾಂಕ್ ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿ ನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಗಳನ್ನು ಮಾಡುತ್ತಲೇ ಇದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ, ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ನಿನ್ನೆ ರಾತ್ರಿ ಸಕ್ಕರೆ ಇಲಾಖೆ ಆಯುಕ್ತರು ಬೆಳಗಾವಿಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ, ಸಮಸ್ಯೆ ಪರಿಹಾರಕ್ಕೆ ಎಲ್ಲ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುವೆ, ರೈತರ ಹಿತದ ಮುಂದೆ ಬೇರೆ ಯಾವುದೇ ಮುಲಾಜು ನನಗಿಲ್ಲ, ಈ ಬಗ್ಗೆ ನಮ್ಮ ಬದ್ಧತೆ ಸಂಶಯಾತೀತ ಎಂದು ಸ್ಪಷ್ಟಪಡಿಸಿದ್ದಾರೆ. ಮೈತ್ರಿ ಸರ್ಕಾರ ರೈತ ಪರವಾಗಿದೆ, ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಆಮೂಲಾಗ್ರ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ. ಕೃಷಿ ಸಾಲ ಮನ್ನಾ ಒಂದೇ ರೈತರ ಸಮಸ್ಯೆಗಳಿಗೆ ಪರಿಹಾರ ಅಲ್ಲ, ರೈತ ಒಮ್ಮೆ ಋಣಭಾರದಿಂದ ಮುಕ್ತನಾಗಿ ಹೊಸ ಬದುಕು ಆರಂಭಿಸ ಬೇಕು ಎಂಬ ಆಶಯದೊಂದಿಗೆ ಸಹಕಾರಿ ಬ್ಯಾಂಕ್‍ಗಳಷ್ಟೇ ಅಲ್ಲದೆ, ವಾಣಿಜ್ಯ ಬ್ಯಾಂಕ್‍ಗಳ ಲ್ಲಿನ ಬೆಳೆ ಸಾಲ ತೀರಿಸಲೂ ನಮ್ಮ ಸರ್ಕಾರ ಮುಂದಾಗಿದೆ, ಸಾಲ ಮನ್ನಾ ಸಿದ್ಧತೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಷ್ಟೇ ಆಗಿದೆ. ಈಗಾಗಲೇ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕುರಿತು ಹಲವು ಸಭೆ ನಡೆಸಿದ್ದೇವೆ, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೆ 20 ಕೋಟಿ ರೂ. ನೆರವನ್ನೂ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಗೆ ಅಪಮಾನವಾಗಿದ್ದರೆ ರಾಜೀನಾಮೆ ನೀಡಲು ಸಿದ್ಧ: ಹೇಳಿಕೆ ಸಮರ್ಥಿಸಿಕೊಂಡ ಸಿಎಂ

ಬೆಂಗಳೂರು: ನಾನು ಮಹಿಳೆಗೆ ಅವಮಾನ ಮಾಡಿದ್ದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ರೈತ ಮಹಿಳೆ ಬಗ್ಗೆ ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಹೆಣ್ಣು ಮಗಳ ಬಗ್ಗೆ ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ. ಅಗೌರವ ತೋರುವಂತಹ ಪದ ಬಳಸಿಲ್ಲ.

ಅದು ಬಾಯ್ತಪ್ಪಿ ಹೇಳಿದ ಮಾತೂ ಅಲ್ಲ. ಗ್ರಾಮೀಣ ಭಾಷೆಯಲ್ಲಿ ಮಾತನಾಡುವಂತೆ ಮಹಿಳೆಗೆ ತಾಯಿ ಎಂಬ ಪದ ಬಳಸಿದ್ದೇನೆ. ತಾಯಿ, ಇಷ್ಟು ದಿನ ಎಲ್ಲೋಗಿದ್ದೆ, ಎಲ್ಲಿ ಮಲಗಿದ್ದೆ ಎಂದಿದ್ದೆ. ಮಹಿಳೆಗೆ ತಾಯಿ ಎಂಬ ಪದ ಬಳಸಿದ್ದೇನೆ ಎಂದು ಹೇಳಿದ್ದೇನೆ. ಆದರೆ, ಅವರೆಲ್ಲ ನನ್ನನ್ನು ನಾಲಾಯಕ್ ಮುಖ್ಯಮಂತ್ರಿ ಎಂದು ಏಕವಚನದಲ್ಲಿ ಜರಿದಿದ್ದಾರೆ. ವೈಯಕ್ತಿಕ ಜೀವನ ಇರಲಿ ಯಾವುದೇ ಇರಲಿ, ಮಹಿಳೆಗೆ ಅವಮಾನ ಮಾಡಿದ್ದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ನಿನ್ನೆ ಬೆಳಗಾವಿಗೆ ಹೋಗಿ ರೈತರ ಜತೆ ಮಾತುಕತೆ ನಡೆಸಿದ್ದಾರೆ. ಕಬ್ಬಿನ ಬಾಕಿ ವಿವರ ಪಡೆದಿದ್ದಾರೆ.

ನಮ್ಮ ಸರ್ಕಾರ ಬರುವ ಮೊದಲು 2,500 ಕೋಟಿ ರೂ. ಬಾಕಿ ಇತ್ತು. ನಂತರ ನಮ್ಮ ಸಚಿವರು ಆಸಕ್ತಿ ವಹಿಸಿ ಬಾಕಿ ಪಾವತಿ ಮಾಡಿಸಿದ್ದಾರೆ. ಈಗ ಬಾಕಿ ಉಳಿದಿರುವುದು ಕೇವಲ 35 ಕೋಟಿ ಮಾತ್ರ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕಾರ್ಖಾನೆ ಮಾಲೀಕರಿಂದ ಬಾಕಿ ಇರುವ ಪ್ರಮಾಣ ಶೇ.0.36ರಷ್ಟು ಮಾತ್ರ ಎಂದು ಎಚ್‍ಡಿಕೆ ಮಾಹಿತಿ ನೀಡಿದರು. ಪ್ರತಿಭಟನೆ ಹೆಸರಲ್ಲಿ ನನ್ನ ಪ್ರತಿಕೃತಿ ನಿರ್ಮಿಸಿ, ಅದಕ್ಕೆ ಫೋಟೋ ಹಾಕಿದ್ದಾರೆ. ಆ ಫೋಟೋಗೆ ಕೊಡಲಿಯಿಂದ ಹೊಡೆಯುವ ದೃಶ್ಯವನ್ನು ಮಾಧ್ಯಮದಲ್ಲಿ ಪದೇ ಪದೆ ತೋರಿಸಲಾಗುತ್ತಿದೆ. ನಾನೇನು ತಪ್ಪು ಮಾಡಿದ್ದೇನೆ? ಕೊಡಲಿಯಲ್ಲಿ ಹೊಡೆಯುವ ರೈತನನ್ನು ಸಭೆಗೆ ಕರೆದಿದ್ದೇನೆ. ಚರ್ಚೆ ಮಾಡುತ್ತೇನೆ. ಅಷ್ಟು ಸುಲಭವಾಗಿ ನಾನು ಹೆದರುವವನಲ್ಲ ಎಂದರು.

ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ನಾನು ಕ್ಷಮೆ ಕೇಳಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಬಿಜೆಪಿಯವರು ಸದನಕ್ಕೆ ಬಂದರೆ ಚರ್ಚೆ ಮಾಡುತ್ತೇನೆ. ಕೆಲವು ಪ್ರಾಯೋಜಿತ ಪ್ರತಿಭಟನೆ ಬಗ್ಗೆಯೂ ನನಗೆ ಗೊತ್ತು. ಗೊಬ್ಬರ ಕೊಡಿ ಎಂದು ಬಂದ ರೈತರಿಗೆ ಗುಂಡಿಟ್ಟವರು ಈಗ ದೇವೇಗೌಡರ ಬಗ್ಗೆ ಮಾತಾಡುತ್ತಾರೆ. ನನಗೇ ಬುದ್ಧಿ ಹೇಳ್ತೀರಾ ಯಡಿಯೂರಪ್ಪನವರೇ? ನಾನೆಂದೂ ನಿಮ್ಮ ಹಾಗೆ ದುರಹಂಕಾರದಿಂದ ವರ್ತಿಸಿಲ್ಲ ಎಂದು ಕಿಡಿಕಾರಿದರು. 10ರಿಂದ 20 ವರ್ಷ ಸಿಎಂ ಆಗಿರುತ್ತೇನೆ ಎಂದು ಎಲ್ಲೂ ಹೇಳಿಲ್ಲ. 2006ರಲ್ಲಿಯೂ ನಾವು 38 ಶಾಸಕರಿದ್ದೆವು. ಆಗ ನಿಮ್ಮ ಜೊತೆ ಸರ್ಕಾರ ಮಾಡಿದ್ದೆವು. ನೀವೇ ಗೋಗರೆದಿದ್ದಕ್ಕೆ ಸರ್ಕಾರ ರಚನೆ ಮಾಡಿದ್ದೆ. ನಿಮ್ಮಿಂದ ಈಗ ನಾನು ಹೇಳಿಸಿಕೊಳ್ಳಬೇಕಾ? ಎಂದು ಯಡಿಯೂರಪ್ಪ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

Translate »