ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಿ   ಶಾಸಕ ಪ್ರೀತಂ ಜೆ.ಗೌಡ ಕರೆ
ಹಾಸನ

ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಿ ಶಾಸಕ ಪ್ರೀತಂ ಜೆ.ಗೌಡ ಕರೆ

January 3, 2019

ಹಾಸನ: ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಮತ್ತು ದೇಶ ಪ್ರೇಮವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕು. ದೇಶವಿದ್ದರೆ ಮಾತ್ರ ನಾವು ಇರಲು ಸಾಧ್ಯ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ವಿದ್ಯಾನಗರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ರಾಷ್ಟ್ರಕವಿ ಕುವೆಂಪುರವರ 114ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ನಾಡು ಕಂಡ ರಾಷ್ಟ್ರ ಪ್ರೇಮಿ, ಶ್ರೇಷ್ಠ ಚಿಂತಕ, ದಾರ್ಶನಿಕ ಕವಿ, ವೈಚಾರಿಕ ಲೇಖಕ. ತಮ್ಮ ಸಾಹಿತ್ಯದಲ್ಲಿ ಅಪಾರ ರಾಷ್ಟ್ರ ಭಕ್ತಿಯನ್ನು ಅಭಿವ್ಯಕ್ತಿಸಿದ್ದಾರೆ. ಅಂತಹವರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ವಿದ್ಯಾರ್ಥಿಗಳೆಲ್ಲ ಆತ್ಮಾಭಿಮಾನವನ್ನು ಹೊಂದಿ ದೇಶ ರಕ್ಷಣೆ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಕಾಣಿಕೆ ನೀಡುವ ವ್ಯಕ್ತಿಗಳಾಗಿ ಎಂದು ಹಾರೈಸಿದರು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಮರಾಜ್ ಮಾತ ನಾಡಿ, ಇಂದಿನ ಹೆಚ್ಚು ಯುವಕರು ಭವಿಷ್ಯವನ್ನು ಕಟ್ಟಿಕೊಳ್ಳುವ ತವಕದ ನಡುವೆ ಎಡವಿ ಬೀಳುತ್ತಾರೆ. ಕಾರಣ ವಿದ್ಯೆಯ ಜೊತೆಗೆ ಸಂಸ್ಕಾರವಿಲ್ಲದಿರುವುದು ವಿಷಾದದ ಸಂಗತಿ. ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಂಡು ನಾವೆಲ್ಲಾ ಹುಟ್ಟಿ ಬಂದುದಕ್ಕೆ ಸಮಾಜ ಮುಖಿ ಕೆಲಸ ಮಾಡುವುದರ ಮೂಲಕ ಸಮಾಜದ ಋಣ ತೀರಿಸಬೇಕು ಮತ್ತು ಗುರು ಹಿರಿಯರನ್ನು ಗೌರವಿಸಿ ಎಂದರು. ಯುನೈಟೆಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಓದಿದ ಶಾಲೆ, ಕಾಲೇಜು ಮತ್ತು ಗುರುಗಳನ್ನು ಎಂದಿಗೂ ಮರೆಯಬೇಡಿ. ಎಲ್ಲಾ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಎಂದು ಹಾರೈಸಿದರು.

Translate »