ಸಹ ಪ್ರಯಾಣ ಕನಂತೆ ಹೊಂಚು ಹಾಕಿ, ಮೊಬೈಲ್ ಪಡೆದು ಮಾತನಾಡುತ್ತಲೇ ಪರಾರಿ!
ಮೈಸೂರು

ಸಹ ಪ್ರಯಾಣ ಕನಂತೆ ಹೊಂಚು ಹಾಕಿ, ಮೊಬೈಲ್ ಪಡೆದು ಮಾತನಾಡುತ್ತಲೇ ಪರಾರಿ!

June 10, 2018
  • ಸಹಾಯ ಮಾಡಲು ಹೋಗಿ ವಂಚನೆಗೊಳಗಾದ ಯುವಕ
  • ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವಂಚನೆ

ಮೈಸೂರು:  ಮಾತನಾಡಿ ಕೊಡುವುದಾಗಿ ಸಹ ಪ್ರಯಾಣ ಕರ ಬೆಲೆ ಬಾಳುವ ಮೊಬೈಲ್ ಫೋನ್ ಪಡೆದುಕೊಂಡ ಅಪರಿಚಿತ ವ್ಯಕ್ತಿಯೋರ್ವ ಮಾತನಾಡುತ್ತಾ ವೋಲ್ವೋ ಬಸ್ಸಿನಿಂದಿಳಿದು ಪರಾರಿಯಾದ ಪ್ರಸಂಗ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಮೈಸೂರಿನ ರಾಮಕೃಷ್ಣನಗರದ ‘ಐ’ ಬ್ಲಾಕ್ ನಿವಾಸಿ ಚೆಲುವರಾಜು ಅವರ ಮಗ ವಿ.ಸಿ. ತೇಜಸ್, ಸಹ ಪ್ರಯಾಣ ಕನಂತೆ ವರ್ತಿಸಿದ ಅಪರಿಚಿತ ವ್ಯಕ್ತಿಗೆ ಸಹಾಯ ಮಾಡಲು ಹೋಗಿ ತನ್ನ ಮೊಬೈಲ್ ಕಳೆದುಕೊಂಡವರು.ಆನ್‍ಲೈನ್ ಸರ್ವೀಸ್ ಬಿಸಿನೆಸ್ ನಡೆಸುತ್ತಿರುವ ತೇಜಸ್ ಬೆಂಗಳೂರಿನ ಬಿಟಿಎಂ ಲೇಔಟ್‍ನಲ್ಲಿರುವ ಗೋಪಾಲನ್ ಮಾಲ್‍ನಲ್ಲಿ ಶಾಪ್ ಹೊಂದಿದ್ದಾರೆ. ಇಂದು ಬೆಳಿಗ್ಗೆ 11.55 ಗಂಟೆ ವೇಳೆಗೆ ಬೆಂಗಳೂರಿಗೆ ಹೋಗುವ ಸಲುವಾಗಿ ತೇಜಸ್ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವೋಲ್ವೋ ಬಸ್ ಏರಿ ಟಿಕೆಟ್ ಪಡೆದು ತಮ್ಮ ಸೀಟಿನಲ್ಲಿ ಕುಳಿತಿದ್ದರು.

ತುಸು ಸಮಯದಲ್ಲೇ ಮತ್ತೋರ್ವ ವ್ಯಕ್ತಿ ಕಾಲೇಜ್ ಬ್ಯಾಗ್ ಹಿಡಿದು ಬಂದು ಪಕ್ಕದ ಆಸನದಲ್ಲಿ ಕುಳಿತ. ಏನೋ ಚಡಪಡಿಸುತ್ತಿದ್ದಂತೆ ಕಂಡ ಆತ ‘ಸರ್ ನನ್ನ ಮೊಬೈಲ್ ಬ್ಯಾಟರಿ ಖಾಲಿ ಆಗಿ ಸ್ವಿಚ್ ಆಫ್ ಆಗಿದೆ. ಅರ್ಜೆಂಟಾಗಿ ಒಂದು ಕಾಲ್ ಮಾಡ್ಬೇಕು ಸ್ವಲ್ಪ ಮೊಬೈಲ್ ಕೊಡಿ’ ಎಂದ.ನಿಜವಿರಬೇಕೆಂದು ಭಾವಿಸಿದ ತೇಜಸ್, ನಂಬರ್ ಕೇಳಿ ಪಡೆದು ತಾನೇ ಡಯಲ್ ಮಾಡಿಕೊಟ್ಟ. ಆದರೆ ಅದು ಬ್ಯುಸಿ ಬಂದ ಹಿನ್ನೆಲೆಯಲ್ಲಿ ಮತ್ತೊಂದು ನಂಬರ್‍ಗೆ ಡಯಲ್ ಮಾಡಿಕೊಟ್ಟ ನಂತರ ಮಾತನಾಡುತ್ತಿದ್ದಂತೆಯೇ ಕೂತಿದ್ದ ಸೀಟಿನಿಂದ ಮೇಲೆದ್ದು, ಒಂದೊಂದೇ ಹೆಜ್ಜೆ ಹಾಕುತ್ತಾ ಅಪರಿಚಿತ ಬಸ್‍ನಿಂದ ಇಳಿದು ಹೊರಟೇಬಿಟ್ಟ.

ಸಂಶಯದಿಂದ ತೇಜಸ್ ತಕ್ಷಣವೇ ಬಸ್ಸಿನಿಂದ ಇಳಿದು ನೋಡುವಷ್ಟರಲ್ಲಿ ಆತ ನಾಪತ್ತೆಯಾಗಿದ್ದ. ಬಸ್ ನಿಲ್ದಾಣದಲ್ಲೆಲ್ಲಾ ಹುಡುಕಾಡಿದರೂ ಆತ ಕಾಣಸಿಗದಿದ್ದಾಗ ವಾಪಸ್ ಬಂದು ಸೀಟಿನ ಬಳಿ ಇದ್ದ ಆತನ ಬ್ಯಾಗ್ ತೆರೆದು ನೋಡಿದರೆ ಅದರಲ್ಲಿ ಹಳೇ ನ್ಯೂಸ್ ಪೇಪರ್‍ಗಳಿದ್ದವು.

ಮೊಬೈಲ್ ಕದಿಯಲೆಂದೇ ಆತ ಹೊಸ ಕಾಲೇಜ್ ಬ್ಯಾಗ್ ಖರೀದಿಸಿರಬಹುದೆಂದು ಶಂಕಿಸಿರುವ ತೇಜಸ್ ಬೆಂಗಳೂರು ಪ್ರಯಾಣ ರದ್ದುಪಡಿಸಿ, ಲಷ್ಕರ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಚ್ಚರ ಸಾರ್ವಜನಿಕರೇ… ಅಪರಿಚಿತರಿಗೆ ಫೋನು, ಇನ್ನಿತರ ವಸ್ತುಗಳನ್ನು ಕೊಡಬೇಡಿ. ಸಹಾಯ ಪಡೆಯುವ ನೆಪದಲ್ಲಿ ವಂಚಿಸುವವರು ಇರುತ್ತಾರೆ. ಮೋಸ ಹೋಗಬೇಡಿ.

Translate »