ಹಳೆ ಮೈಸೂರು ಪ್ರಾಂತ್ಯದಲ್ಲಿ ಹಿಂದೂಸ್ತಾನಿ ಸಂಗೀತ ನೆಲೆಯೂರಲು ಪ್ರೊ.ಬಿ.ಸೋಮಶೇಖರ್ ಕೊಡುಗೆಯೂ ಇದೆ
ಮೈಸೂರು

ಹಳೆ ಮೈಸೂರು ಪ್ರಾಂತ್ಯದಲ್ಲಿ ಹಿಂದೂಸ್ತಾನಿ ಸಂಗೀತ ನೆಲೆಯೂರಲು ಪ್ರೊ.ಬಿ.ಸೋಮಶೇಖರ್ ಕೊಡುಗೆಯೂ ಇದೆ

June 10, 2018

ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಮತ

ಮೈಸೂರು: ಹಿಂದೂಸ್ತಾನಿ ಸಂಗೀತ ಹಳೆ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಸಪ್ತಸ್ವರ ಬಳಗದಲ್ಲಿ ಒಬ್ಬರಾಗಿದ್ದ ಪ್ರೊ.ಬಿ.ಸೋಮಶೇಖರ್ ಅವರ ಕೊಡುಗೆಯೂ ಇದೆ ಎಂದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಪಂ.ಇಂದೂಧರ ನಿರೋಡಿ ಅಭಿಪ್ರಾಯಪಟ್ಟರು.

ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಸಪ್ತಸ್ವರ ಬಳಗ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ `ಪ್ರೊ.ಬಿ.ಸೋಮಶೇಖರ್ ಅವರ ನೆನಪಿನ ಸಂಗೀತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ನಲ್ವತ್ತು ವರ್ಷಗಳ ಹಿಂದೆ ಹಿಂದೂಸ್ತಾನಿ ಸಂಗೀತ ಕೇವಲ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಮಾತ್ರ ಸಿಮೀತವಾಗಿತ್ತು. ತದನಂತರ ಕೆಲವು ಆಸಕ್ತರು ಹಿಂದೂಸ್ತಾನಿ ಸಂಗೀತವನ್ನು ಮೈಸೂರು ಪ್ರಾಂತ್ಯದಲ್ಲಿ ಬೆಳಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಇದರಲ್ಲಿ ಪ್ರೊ.ಬಿ.ಸೋಮಶೇಖರ್ ಮೊದಲಿಗರು ಎಂದರು.

ಮೈಸೂರು ಸಂಸ್ಥಾನದಲ್ಲಿ ಸಂಗೀತ, ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಇತ್ತು. ರಾಜರ ಆಳ್ವಿಕೆ ಕೊನೆಗೊಂಡ ನಂತರ ಈ ಭಾಗದ ಸಾರ್ವಜನಿಕರಲ್ಲಿ ಕರ್ನಾಟಕ ಸಂಗೀತಕ್ಕೆ ಭದ್ರ ಬುನಾದಿ ಇದ್ದ ಕಾರಣ ಈ ಸಂಗೀತಕ್ಕೆ ಮೈಸೂರಿನಲ್ಲಿ ಹೆಚ್ಚಿನ ಕಲಾವಿದರು ಆಸಕ್ತಿ ಹೊಂದಿದ್ದಾರೆ. ಆದರೆ, ರಾಜರ ಆಳ್ವಿಕೆ ಕೊನೆಗೊಂಡ ನಂತರ ಹಿಂದೂಸ್ತಾನಿ ಸಂಗೀತಕ್ಕೆ ಪ್ರೋತ್ಸಾಹ ಸಿಗದ ಹಿನ್ನೆಲೆಯಲ್ಲಿ ಇಲ್ಲಿ ನೆಲೆಯೂರಿದ್ದ ಕಲಾವಿದರು ಮತ್ತೆ ಉತ್ತರ ಭಾರತದತ್ತ ಪ್ರಯಾಣ ಬೆಳೆಸಿದರು. ಇದರಿಂದಾಗಿ ಹಿಂದೂಸ್ತಾನಿ ಸಂಗೀತ ಮೈಸೂರಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಆದರೆ, ಪ್ರೊ.ಸೋಮಶೇಖರ್ ಅವರು ಹಿಂದೂಸ್ತಾನಿ ಸಂಗೀತ ಮತ್ತೆ ಮೈಸೂರಿನಲ್ಲಿ ನೆಲೆಯೂರುವಂತೆ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಮೈಸೂರಿಗೆ ಖ್ಯಾತ ಹಿಂದೂಸ್ತಾನಿ ಗಾಯಕರನ್ನು ಕರೆತಂದು ಇಲ್ಲಿನ ಜನರಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಆಸಕ್ತಿ ಮೂಡಿಸುವಂಥ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ. ಅಂದಿನಿಂದ ಆರಂಭವಾದ ಅವರ ಸ್ನೇಹ ಇಂದಿಗೂ ಹಾಗೆಯೇ ಉಳಿದಿತ್ತು ಎಂದರು.

ಸಂಸ್ಕøತಿ ಚಿಂತಕ ಪ್ರೊ.ಎಚ್.ಜಿ.ಕೃಷ್ಣಪ್ಪ ಮಾತನಾಡಿ, ಭಾರತದಲ್ಲಿ ವೈವಿದ್ಯಮಯ ಸಂಸ್ಕøತಿಯಿದೆ. ಇದರಲ್ಲಿ ಏಕತೆ ಸಂದೇಶವಿದೆ. ಅದರಂತೆ ಉತ್ತರ ಭಾರತದಲ್ಲಿ ಹಿಂದೂಸ್ತಾನಿ, ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರಸ್ತುತ ಮೈಸೂರಿನ ಸಂಗೀತ ಪ್ರಿಯರಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತಕ್ಕೆರಡಕ್ಕೂ ಹೆಚ್ಚಿನ ಆಸಕ್ತರನ್ನು ಕಾಣಬಹುದಾಗಿದೆ. ಇದಕ್ಕೆ ಪ್ರೊ.ಸೋಮಶೇಖರ್ ಅವರ ಕೊಡುಗೆ ಮೊದಲನೆಯದು ಎಂದರು.

ವೇದಿಕೆಯಲ್ಲಿ ಬೆಂಗಳೂರಿನ ಹಿರಿಯ ಸಂಗೀತ ಕಲಾವಿದ ಪಂ.ವಿನಾಯಕ ತೊರವಿ, ಪಂ.ಸೋಮನಾಥ ಮರಡೂರ, ಪಂ.ವೀರಭದ್ರಯ್ಯ ಯರಗಲ್, ಪಂ.ಪ್ರಭುಸೊನ್ನೆ, ರಮೇಶ್ ಧನ್ನೂರ್, ಭೀಮಾಶಂಕರ್ ಬಿದನೂರು, ಬಳಗದ ಅಧ್ಯಕ್ಷ ಡಾ.ಸಿ.ಸಿದ್ದೇಶ್ ಉಪಸ್ಥಿತರಿದ್ದರು. ನಂತರ ಪ್ರೊ.ಬಿ.ಸೋಮಶೇಖರ್ ಅವರ ನೆನಪಿನ ಪ್ರಯುಕ್ತ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಿತು.

Translate »