ಸಂಗೀತ, ಸಾಹಿತ್ಯದ ಮೂಲಕ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಸಲಹೆ
ಮೈಸೂರು

ಸಂಗೀತ, ಸಾಹಿತ್ಯದ ಮೂಲಕ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಸಲಹೆ

June 10, 2018

ಮೈಸೂರು: ನಮ್ಮ ಸುತ್ತಮುತ್ತಲಿನ ಪರಿಸರ ಉಳಿಯಬೇಕಾದರೆ, ನಮ್ಮ ಆತ್ಮ ಪರಿಶುದ್ಧವಾಗಿರಬೇಕು.ಇದಕ್ಕೆ ಯುವ ಜನರಲ್ಲಿ ಸಂಗೀತ, ಸಾಹಿತ್ಯಾಸಕ್ತಿ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಹಿರಿಯ ಪರಿಸರ ತಜ್ಞ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ `ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ `ವೈದ್ಯರಿಂದ ಪರಿಸರ ಗೀತೆಗಳ ಗಾಯನ’ ಕಾರ್ಯಕ್ರಮಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಸೌಂದರ್ಯ ರಾಶಿ ಅರಣ್ಯ ಪ್ರದೇಶದ ಒಂದು ಭಾಗ.ಇದಕ್ಕೆ ಎಲ್ಲಾ ಜನರು ಮಾರು ಹೋಗುತ್ತಾರೆ. ಅದರಂತೆ ಸಂಗೀತಕ್ಕೂ ಹೆಚ್ಚಿನ ಜನರನ್ನು ಆಕರ್ಷಿಸುವ ಶಕ್ತಿಯಿದೆ. ಈ ಮೂಲಕ ನಗರ ಪ್ರದೇಶದಲ್ಲಿ ಅಪಾಯದ ಅಂಚಿನಲ್ಲಿರುವ ಹಸಿರು ಸಂಪತ್ತು ಪುನರ್ ಸ್ಥಾಪನೆಯಾಗಬೇಕಾದರೆ, ಸಂಗೀತ- ಸಾಹಿತ್ಯದ ಮೂಲಕ ಯುವ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಮೊದಲಿನಿಂದಲೂ ವಿಚಾರವಂತಿಕೆಗೆ, ಉತ್ತಮ ಹಸಿರು ವಲಯಕ್ಕೆ ಹೆಸರುವಾಸಿಯಾದ ನಗರ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ವಿಭಿನ್ನವಾಗಿರುತ್ತದೆ. ಅದರಂತೆ ಇಂದು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‍ವತಿಯಿಂದ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಪರಿಸರ ಗೀತೆಗಳಿಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣ ಗೆ. ಹೀಗೆ ಪ್ರತಿಯೊಬ್ಬರು ಪರಿಸರ ಕಾಳಜಿ ಬಗ್ಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅರಿವು ಮೂಡಿಸಿದರೆ, ಮುಂದಿನ ಪೀಳಿಗೆಗೆ ನಾವು ಅಪಾರ ಅರಣ್ಯ ಸಂಪತ್ತು ಸಂರಕ್ಷಿಸಿ ಕೊಡುಗೆಯಾಗಿ ನೀಡಲು ಸಾಧ್ಯವಾಗುತ್ತದೆ ಎಂದರು.

ಹಿರಿಯ ಸಂಗೀತ ಕಲಾವಿದೆ ಹೆಚ್.ಆರ್.ಲೀಲಾವತಿ ರಚಿತ 7 ಪರಿಸರ ಗೀತೆಗಳಿಗೆ ರಾಗ ಸಂಯೋಜಿಸಿ ಹಾಡಲಾಯಿತು. ಸಂಗೀತ ಕಲಾವಿದರಾದ ಡಾ.ರೋಹಿಣ ಮೋಹನ್, ಡಾ.ಸುಷ್ಮಾ ಕೃಷ್ಣಮೂರ್ತಿ, ಡಾ.ಎಸ್.ಶ್ರುತಿ, ಡಾ.ಜಿ.ವಿ.ಭಾರತಿ, ಡಾ.ರಶ್ಮಿ ರಾಣ , ಡಾ.ಜಯರಾಂ ಸಿರಿಕಂಠದಲ್ಲಿ ಹತ್ತಾರು ಪರಿಸರ ಗೀತೆಗಳು ಮೂಡಿಬಂದವು. ಪಕ್ಕ ವಾದ್ಯದಲ್ಲಿ ಮ್ಯಾಂಡೊಲಿನ್ ಸಿ.ವಿಶ್ವನಾಥ್, ಕೀ ಬೋರ್ಡ್ ಷಣ್ಮುಖ ಸಜ್ಜ, ತಬಲ ರಘುನಾಥ್, ರಿದಂಪ್ಯಾಡ್ ವಿನಯ್ ರಂಗಧೋಳ್ ಸಾಥ್ ನೀಡಿದ್ದಾರೆ. ವೇದಿಕೆಯಲ್ಲಿ ಕಾಮಾಕ್ಷಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಉಮೇಶ್ ಕಾಮತ್, ಟ್ರಸ್ಟ್ ಉಪಾಧ್ಯಕ್ಷ ಟಿ.ಆರ್.ಹರೀಶ್ ಸೇರಿದಂತೆ ಇತರರಿದ್ದರು.

Translate »