ಚಾಮರಾಜನಗರ: ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಗರದ ಹೊರ ವಲಯದಲ್ಲಿರುವ ಮರಿಯಾಲದ ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಗಿಡಕ್ಕೆ ನೀರು ಎರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್ ರಮೇಶ್, ಇತ್ತೀಚೆಗೆ ಆಧುನಿಕ ತಂತ್ರಜ್ಞಾನಗಳು ಹೆಚ್ಚಾದಂತೆ ಪ್ರಕೃತಿ ಸಹಜವಾಗಿ ನಿಸರ್ಗದ ಮೇಲಿನ ಒತ್ತಡ ಹೆಚ್ಚುತ್ತಿದೆ. ನೆಲ, ಜಲ, ಗಾಳಿ ಸೇರಿದಂತೆ ಎಲ್ಲವು ಇಂದು ಮಲಿನಗೊಳ್ಳುತ್ತಿವೆ. ಇದನ್ನು ಸರಿ ದೂಗಿಸಲು ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪರಿಸರದ ಬಗ್ಗೆ ಅರಿವು ಮೂಡಿಸಲು ವಿಶ್ವದೆಲ್ಲೆಡೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
1962ರಲ್ಲಿ ಶೇ.33ರಷ್ಟು ಭೂಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದ ಭಾರತವು 33 ಕೋಟಿ ಜನಸಂಖ್ಯೆಯನ್ನು ಹೊಂದಿತ್ತು. ಆದರೀಗ ಏರು ಮುಖವಾಗಿರುವ ದೇಶದ ಜನಸಂಖ್ಯೆ 128 ಕೋಟಿ ಇದ್ದು, ಅರಣ್ಯ ಪ್ರದೇಶ ಮಾತ್ರ ಶೇ 21.5 ರಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪರಿಸರ ಮತ್ತು ಜನಸಂಖ್ಯೆಯ ನಡುವೆ ಅಂತರ ಹೆಚ್ಚಾಗಿ ಪ್ರಾಕೃತಿಕ ಅಸಮ ತೋಲನವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ಪರಿಸರದ ಕುರಿತು ಒಲವು ಮೂಡಿಸಿ ಜಾಗೃತಗೊಳಿಸಬೇಕು ಎಂದರು.
ದೇಶದಲ್ಲಿ ಜನಸಂಖ್ಯಾ ಸ್ಫೋಟದಿಂದಾಗಿ ಮನುಷ್ಯನ ಬೇಡಿಕೆಗಳ ಹೆಚ್ಚಳದಿಂದ ಅರಣ್ಯ ಪ್ರದೇಶದ ವಿಸ್ತೀರ್ಣತೆ ಕುಂಠಿತಗೊಳ್ಳಲು ಕಾರಣವಾಗಿದೆ. ಮನೆಯ ಸುತ್ತ ಮುತ್ತ, ಬಯಲು ಪ್ರದೇಶಗಳಲ್ಲಿ ಹಾಗೂ ಅಗತ್ಯವಿರುವ ಕಡೆ ಗಿಡ-ಮರಗಳನ್ನು ನೆಡುವುದರ ಮೂಲಕ ಶೇ.11.5 ರಷ್ಟು ಕೊರತೆ ಇರುವ ಅರಣ್ಯ ಪ್ರದೇಶವನ್ನು ಬೆಳೆಸುವುದು ಪ್ರತಿ ಯೊಬ್ಬರ ಜವಾಬ್ದಾರಿಯಾಗಿದೆ ಎಂದು ರಮೇಶ್ ತಿಳಿಸಿದರು.
ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಕೆ.ಚಂದ್ರಶೇಖರ್ ಮಾತನಾಡಿ, ವಿಶ್ವ ಪರಿಸರ ದಿನವನ್ನು ಮಾತ್ರ ಆಚರಿಸಿದರೆ ಮಾತ್ರ ಸಾಲದು. ಇಂದಿನಿಂದ ಮಕ್ಕಳು, ಯುವಜನತೆ, ನಾಗರಿಕರು ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಗೆ ಪ್ಲಾಸ್ಟಿಕ್‍ನ್ನು ಬಳಸುವುದರಿಂದ ಪರಿಸರಕ್ಕೆ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ನೇಸರ್ ಸಂಸ್ಥೆಯ ರಾಜ್ಯ ನಿರ್ದೇಶಕ ರಾಮಕೃಷ್ಣ ಬಿ.ಮಾನೆ ಮಾತನಾಡಿ, 1972ರಲ್ಲಿ ಯುಎನ್‍ಓ ಒಕ್ಕೂಟಗಳು ವಿಶ್ವ ಪರಿಸರ ದಿನಾಚರಣೆ ಆಚರಿಸು ವುದರ ಮೂಲಕ ಪರಿಸರ ದಿನಕ್ಕೆ ಚಾಲನೆ ನೀಡಿದರು. ನಂತರ ಪ್ರತಿ ವರ್ಷ ಪರಿಸರ ದಿನದಂದು ಉತ್ತಮ ಪರಿಸರ ಹೊಂದಲು ಅಗತ್ಯವಾದ ಹೊಸ ಹೊಸ ವಿಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಾರಂಭಿಸಲಾಯಿತು. ಜತೆಗೆ ಮರ-ಗಿಡಗಳು ಇಂಗಾಲದ ಡೈಆಕ್ಸೈಡ್‍ನ್ನು ಹೀರಿ ಅಮ್ಲಜನಕ ಬಿಡುಗಡೆ ಮಾಡುವುದರಿಂದ ಉಸಿರಾಡಲು ಶುದ್ಧ ಗಾಳಿಯನ್ನು ಪಡೆಯಲು ಅನುವಾಗುವುದು ಸೂಕ್ತ ಎಂದರು.