ಮೈಸೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೈಕಲ್ ಜಾಥಾ ಆಯೋ ಜಿಸಿದ್ದರೆ, ವಿವಿಧ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಕಾಳಜಿ ಪ್ರದರ್ಶಿಸಿದವು.
ಸೈಕಲ್ ಜಾಥಾ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎನ್‍ಸಿಸಿ, ಎನ್‍ಎಸ್‍ಎಸ್, ಐಪಿಎಂಓ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಲ್ಲಿ ಸೈಕಲ್ ಜಾಥಾ ಆಯೋಜಿಸಿತ್ತು.
ಜಿಲ್ಲಾಧಿಕಾರಿ ಕಚೇರಿ ಬಳಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಜಾಥಾಕ್ಕೆ ಹಸಿರು ನಿಶಾನೆ ಪ್ರದರ್ಶಿಸಿದರು. ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಇಂದು ನಾವು ಉಳಿಸಿದರೆ ಮುಂದಿನ ಪೀಳಿಗೆ ಸುಖವಾಗಿರಬಹುದು. ಮರ ಗಳನ್ನು ಕಡಿಯುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹವಾ ಮಾನದಲ್ಲಿ ಏರುಪೇರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದರು.
ಕೇವಲ ಒಂದು ದಿನ ಪರಿಸರ ದಿನಾಚರಣೆ ಮಾಡಿದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಸಬೇಕು. ಅರಣ್ಯ ನಾಶ ದಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗು ತ್ತಿವೆ. ಗಿಡಮರಗಳನ್ನು ಕಡಿದು ಕಾಡನ್ನು ಬರಿದಾಗಿಸುತ್ತಿರುವು ದರಿಂದ ಮಳೆ ಕೊರತೆಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಉತ್ತಮ ಮಳೆಗಾಗಿ ಪ್ರತಿದಿನವೂ ಸಸಿ ನೆಟ್ಟು ಅವುಗಳನ್ನು ಬೆಳೆಸಲು ಪಣತೊಡಬೇಕು. ಪರಿಸರವನ್ನು ಸಂರಕ್ಷಿಸಿ, ನೆಲ-ಜಲವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಸಸಿ ಬೆಳೆಸಿ ಶಿಶು ಉಳಿಸಿ, ಜೀವ ಜಲ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸೋಣ, ಕಾಡಿದ್ದರೆ ನಾಡು, ನಾಡಿದ್ದರೆ ನಾವು ಮುಂತಾದ ಫಲಕಗಳನ್ನು ಪ್ರದರ್ಶಿಸಿದರು. ಪರಿಸರ ಮಾಲಿನ್ಯ ನಿಯಂತ್ರಣಾ ಧಿಕಾರಿ ಬಿ.ಎಂ.ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.
ರೋಜ್ ಗಾರ್ಡನಲ್ಲಿ: ಚೆಲುವಾಂಬ ಪಾರ್ಕ್ ಸಮೀಪದಲ್ಲಿ ರುವ ರೋಜ್ ಗಾರ್ಡನ್‍ನಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿ ಸಲುದ್ದೇಶಿಸಿರುವ ನೆಡುತೋಪಿಗೆ ಶಾಸಕ ಎಲ್.ನಾಗೇಂದ್ರ ಹಾಗೂ ಮೇಯರ್ ಪುಷ್ಪಲತಾ ಜಗನ್ನಾಥ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಶಾಸಕ ಎಲ್.ನಾಗೇಂದ್ರ ಮಾತ ನಾಡಿ, ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಮೂಡುವುದರೊಂದಿಗೆ ಗಿಡ-ಮರ ಸಂರಕ್ಷಣೆ ಮಾಡುವತ್ತ ಗಮನ ಹರಿಸಬೇಕಾಗಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಮಾತ್ರ ಸೀಮಿತವಾಗಿಲ್ಲ. ನೆಟ್ಟ ಗಿಡವನ್ನು ಪೋಷಣೆ ಮಾಡುವುದಕ್ಕೆ ಎಲ್ಲರೂ ಕೈಜೋಡಿಸಬೇಕು. ಪರಿಸರ ಸಮತೋಲನ ಹದಗೆಡುತ್ತಿ ರುವುದರಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಇದರಿಂದ ಕೃಷಿ ಚಟುವಟಿ ಕೆಗೆ ಹಿನ್ನಡೆಯಾಗುತ್ತಿದ್ದರೆ ಕುಡಿಯುವ ನೀರಿನ ಸಮಸ್ಯೆ, ಅಂತ ರ್ಜಲ ಕುಸಿತದಂತಹ ಸಮಸ್ಯೆ ಕಾಡುತ್ತಿದೆ. ಇದನ್ನು ಮನಗಂಡು ಮನೆಗೊಂದು ಮರವಾದರೂ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರಲ್ಲದೆ, ರೋಜ್ ಗಾರ್ಡನ್‍ನಲ್ಲಿ ಮಕ್ಕಳಿ ಗಾಗಿ ವಿಜ್ಞಾನ ಪಾರ್ಕ್ ನಿರ್ಮಿಸಬೇಕೆಂಬ ಉದ್ದೇಶವಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಗ್ರಾಹಕ ಪರಿಷತ್‍ನ ಭಾಮಿ ಶೆಣೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾವೇರಿ ಆಸ್ಪತ್ರೆ: ಸಾಮಾಜಿಕ ಅರಣ್ಯ ವಿಭಾಗ, ನಗರ ಪಾಲಿಕೆ ಸಹಯೋಗದಲ್ಲಿ ಮೈಸೂರು-ಬನ್ನೂರು ಮುಖ್ಯ ರಸ್ತೆಯಲ್ಲಿ ಸಸಿ ನೆಡುವ ಮೂಲಕ ಕಾವೇರಿ ಹಾರ್ಟ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪರಿಸರ ದಿನವನ್ನು ಆಚರಿಸಿತು. ಮೇಯರ್ ಪುಷ್ಪಲತಾ ಜಗನ್ನಾಥ್, ಕಾವೇರಿ ಹಾರ್ಟ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಧ್ಯಕ್ಷ ಡಾ.ಜಿ. ಆರ್.ಚಂದ್ರಶೇಖರ್ ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನದ ಸಂದೇಶ ಸಾರಿದರು. ಈ ವೇಳೆ ಪಾಲಿಕೆ ಸದಸ್ಯರಾದ ರುಕ್ಮಿಣಿ ಮಾದೇಗೌಡ, ರೂಪಾ ಬಾಬು, ಪಿ.ಶ್ರೀಧರ್, ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳಾದ ಎಸ್.ಪಿ.ಮಹದೇವ್, ನಾಗರಾಜು, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಸರಳ ಚಂದ್ರಶೇಖರ್, ಬಿ.ಜೆ.ಸಂದೀಪ್ ಪಟೇಲ್, ಆಡಳಿತಾಧಿಕಾರಿ ಡಾ.ಆನಂದ್ ಅರಾಧ್ಯ, ಎಂ.ಜಿ.ಹೇಮಂತ್‍ಕುಮಾರ್, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.